Advertisement

ಬಿಜೆಪಿ ಸುಳ್ಳು ಉತ್ಪಾದಿಸಿ ಮಾರುವ ಫ್ಯಾಕ್ಟರಿ ಎಂದು ಜನ ಹೇಳುತ್ತಿದ್ದಾರೆ: ಸಿದ್ದರಾಮಯ್ಯ

02:52 PM Nov 16, 2022 | Team Udayavani |

ಬೆಂಗಳೂರು : ಹಣದುಬ್ಬರ ನಿಯಂತ್ರಿಸಲಾಗದ ಬಿಜೆಪಿ ಸರ್ಕಾರಗಳು ಜನರಿಗೆ ಶಾಪದಂತೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

Advertisement

ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ದೇಶದಲ್ಲಿ ಹಣದುಬ್ಬರ ಕಡಿಮೆಯಾಗಿದೆ ಎಂದು ಹೇಳಿದೆ. ಈ ಸುಳ್ಳು ಮಾಹಿತಿಯನ್ನು ದೇಶದ ಎಲ್ಲ ಮಾಧ್ಯಮಗಳಲ್ಲಿ ಪ್ರಸಾರ ಮಾಡುವಂತೆ ನೋಡಿಕೊಂಡಿದೆ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಕಿಡಿ ಕಾರಿದ್ದಾರೆ.

ಬಿಜೆಪಿ ಸರ್ಕಾರದ ಪ್ರಕಾರ ದೇಶದಲ್ಲಿ ಹೆಚ್ಚಾಗಿರುವ ಬೆಲೆಗಳೆಲ್ಲ ಕಡಿಮೆಯಾಗಿರುವವೆ? ಜನರು ಬೆಲೆಗಳು ಕಡಿಮೆಯಾಗಿವೆಯೆಂದು ಖುಷಿಯಾಗಿರುವರೆ? ಜನರ ಖರೀದಿಯ ಸಾಮಥ್ರ್ಯ ಹೆಚ್ಚಾಗಿದೆಯೆ? ಜನರಿಗೆ ಅಗತ್ಯ ಇರುವ ವಸ್ತುಗಳ ಉತ್ಪಾದನೆಯು ದೇಶದಲ್ಲಿ ಹೆಚ್ಚಾಗಿದೆಯೆ? ಆಮದು ಕಡಿಮೆಯಾಗಿದೆಯೆ? ಈ ಪ್ರಶ್ನೆಗಳಿಗೆ ಬಿಜೆಪಿ ಸರ್ಕಾರಗಳು ಉತ್ತರ ಹೇಳುತ್ತಿಲ್ಲ.ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ರಾಜನಿಗೆ ಬೇಕಾದಂತಹ ವರದಿಗಳನ್ನು ವಾಸ್ತವಕ್ಕೆ ವಿರುದ್ಧವಾಗಿ ತಿರುಗಾ ಮುರುಗಾ ಮಾಡಿ ಸಿದ್ಧ ಮಾಡಿಕೊಟ್ಟಂತೆ ಕಾಣುತ್ತಿದೆ. ಇದರಿಂದಾಗಿ ಬಿಜೆಪಿ ಎಂಬುದು ದಿಲ್ಲಿಯಿಂದ ಹಳ್ಳಿಯವರೆಗೆ ‘ಬೊಗಳೆ ಬಿಡುವ ಪಕ್ಷ’ ಎಂದು ಪದೇ ಪದೇ ಸಾಬೀತಾಗುತ್ತಿದೆ. ಅದಕ್ಕಾಗಿಯೆ ಬಿಜೆಪಿಯನ್ನು ‘ಸುಳ್ಳನ್ನು ಉತ್ಪಾದಿಸಿ ಮಾರುವ ಫ್ಯಾಕ್ಟರಿ’ ಎಂದು ಜನರೇ ಕರೆಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

2012 ರ ವರ್ಷವನ್ನು ಬೇಸ್ ವರ್ಷವೆಂದು ಆಧಾರವಾಗಿಟ್ಟುಕೊಂಡು ಮಾಡುವ ಸಮೀಕ್ಷೆಯ ವರದಿಗಳನ್ನು ಕೇಂದ್ರ ಸರ್ಕಾರವು ಆಗಿಂದಾಗ್ಗೆ ಬಿಡುಗಡೆ ಮಾಡುತ್ತಿರುತ್ತದೆ. ಆಹಾರ ಪದಾರ್ಥಗಳು, ವಸತಿ, ಇಂಧನ, ವಿದ್ಯುತ್, ಬಟ್ಟೆ ಹಾಗೂ ಇನ್ನಿತರೆ ವಸ್ತುಗಳು, ಶಿಕ್ಷಣ, ವೈದ್ಯಕೀಯ, ಸಾರಿಗೆ ಮುಂತಾದ ಸೇವೆಗಳು ಹೀಗೆ ಮುಖ್ಯವಾದ ವಲಯಗಳಲ್ಲಿನ ಬೆಲೆಗಳನ್ನು ಆಧರಿಸಿ ಹಣದುಬ್ಬರವನ್ನು ಲೆಕ್ಕ ಹಾಕಲಾಗುತ್ತದೆ. ಅಂದರೆ 2012 ರ ಬೆಲೆಗಳನ್ನು ಆಧಾರವಾಗಿಟ್ಟುಕೊಂಡು ಪ್ರಸ್ತುತ ಬೆಲೆಗಳನ್ನು ಹೋಲಿಕೆ ಮಾಡಿ ಪ್ರತಿ ತಿಂಗಳ ಏರಿಳಿತಗಳನ್ನು ಲೆಕ್ಕ ಹಾಕಲಾಗುತ್ತದೆ. ಹಣದುಬ್ಬರದಲ್ಲಿನ ಶೇ.40 ಕ್ಕೂ ಹೆಚ್ಚು ಪಾಯಿಂಟುಗಳು ಆಹಾರ ಸಂಬಂಧಿತ ವಲಯಕ್ಕೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಸೆಪ್ಟೆಂಬರ್ ಗಿಂತ ಅಕ್ಟೋಬರ್ ತಿಂಗಳಲ್ಲಿ ಬೆಲೆಗಳು ಶೇ.10 ರಿಂದ ಶೇ.20 ರಷ್ಟು ಹೆಚ್ಚಾಗಿವೆ ಎಂಬುದು ಸಣ್ಣಪುಟ್ಟ ವ್ಯಾಪಾರಿಗಳ ಅಭಿಪ್ರಾಯ. ಅವರು ಹೇಳಿದ ಪ್ರಕಾರ 110 ರೂ ಒಳಗಿದ್ದ ತೊಗರಿ ಬೇಳೆ ಅಕ್ಟೋಬರ್ ನಲ್ಲಿ 127 ರೂಗಳಿಗೆ ಏರಿಕೆಯಾಗಿದೆ. ಅಕ್ಕಿ ಕೆಜಿ ಮೇಲೆ 5 ರೂ ರೂಪಾಯಿ ಹೆಚ್ಚಾಗಿದೆ. ಗೋಧಿ 35-36 ಇದ್ದದ್ದು 44 ರೂಪಾಯಿಗಳಿಗೆ ಏರಿಕೆ ಕಂಡಿದೆ. ರವೆ 30 ರೂ ನಿಂದ 40 ರೂಗೆ ಏರಿದೆ. ಅಡುಗೆಗೆ ಬಳಸುವ ಎಣ್ಣೆ ಮಾತ್ರ 10-25 ರೂವರೆಗೆ ಕಡಿಮೆಯಾಗಿದೆ ಎಂದರು. ಹಾಗೆ ನೋಡಿದರೆ 2014 ಕ್ಕೆ ಮೊದಲು 70 ರೂಪಾಯಿ ಆಸುಪಾಸಿನಲ್ಲಿದ್ದ ಅಡುಗೆ ಎಣ್ಣೆ ಈಗ 160 ರೂಗಳಿಗೂ ಹೆಚ್ಚಿದೆ. ಹಾಗೆಯೆ ಅಡುಗೆ ಗ್ಯಾಸಿನ ಬೆಲೆ ಕಡಿಮೆಯಾಗಿಲ್ಲ. 2013 ರಲ್ಲಿ 400 ರೂ ಇದ್ದದ್ದು ಈಗ 1100 ರೂ ವರೆಗೆ ಏರಿಕೆಯಾಗಿದೆ. 47 ರೂ ಇದ್ದ ಡೀಸೆಲ್ಲು 90 ರೂ ಆಗಿದೆ. ಪೆಟ್ರೋಲ್ ಕೂಡ ಹಾಗೆಯೆ. ರಾಜ್ಯದಲ್ಲಿ ವಿದ್ಯುತ್ ಶುಲ್ಕವನ್ನೂ ತಾರಾ ಮಾರಾ ಏರಿಸಲಾಗಿದೆ. ಯಾವ ಹಣ್ಣು – ತರಕಾರಿಗಳ ಬೆಲೆಗಳು ಕಡಿಮೆ ಇಲ್ಲ ಎಂದು ಹೇಳಿದ್ದಾರೆ.

Advertisement

50 ಕೆಜಿ ಸಿಮೆಂಟಿನ ಚೀಲದ ಮೇಲೆ ಮೋದಿ ಸರ್ಕಾರ 90- 100 ರೂವರೆಗೆ ಜಿಎಸ್‍ಟಿ ದೋಚುತ್ತಿದೆ. ಸಿಮೆಂಟಿನ ಮೇಲೆ ಶೇ.28 ರಷ್ಟು ಜಿಎಸ್‍ಟಿ ಇದೆ. ಕಬ್ಬಿಣದ ಬೆಲೆಗಳೂ ದುಪ್ಪಟ್ಟಾಗಿವೆ. ಇದರಿಂದಾಗಿ ಮನೆಗಳ ನಿರ್ಮಾಣ ವೆಚ್ಚ ಗಗನಕ್ಕೇರಿದೆ. ಶಿಕ್ಷಣ ವೆಚ್ಚವೂ ತೀವ್ರವಾಗಿ ಏರಿಕೆಯಾಗಿದೆ. ನಿನ್ನೆ ತಾನೆ ಕರ್ನಾಟಕದ ಉಚ್ಛ ನ್ಯಾಯಾಲಯವು ಕಾಲೇಜುಗಳ ಶುಲ್ಕ ದರೋಡೆಯನ್ನು ನಿಲ್ಲಿಸಿ ಎಂಬರ್ಥದಲ್ಲಿ ಸರ್ಕಾರಕ್ಕೆ ತಾಕೀತು ಮಾಡಿದೆ. ಆದರೂ ಮೋದಿ ಸರ್ಕಾರ ಮಾತ್ರ ಬೆಲೆಗಳು ಕಡಿಮೆಯಾಗಿವೆ ಎಂದು ಜನರನ್ನು ನಂಬಿಸಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.

ಡಾಲರಿನ ಎದುರು ರೂಪಾಯಿಯ ಮೌಲ್ಯ ಪಾತಾಳಕ್ಕೆ ತಲುಪುತ್ತಿದೆ. ಡಾಲರಿನಲ್ಲಿ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕಾಗಿರುವುದರಿಂದ ರೂಪಾಯಿಯ ಅಪಮೌಲ್ಯದಿಂದಾಗಿ ವಸ್ತುಗಳ ಬೆಲೆ ಶೇ. 16 ರವರೆಗೆ ಹೆಚ್ಚಾಗಿದೆ. ಇದರಿಂದಾಗಿಯೂ ಹಣದುಬ್ಬರ ಹೆಚ್ಚುತ್ತಿದೆ. ವಸ್ತುಗಳ ಬೆಲೆ ಹೆಚ್ಚಾಗುತ್ತಿವೆ. ಬ್ಯಾಂಕುಗಳು ಬಡ್ಡಿದರ ಹೆಚ್ಚಿಸುತ್ತಿವೆ ಎಂದು ಹೇಳಿದ್ದಾರೆ.

ಮೇಕ್ ಇನ್ ಇಂಡಿಯಾ ಮಾಡುವುದಾಗಿ ಜನರಿಗೆ ಸುಳ್ಳು ಟೋಪಿ ಹಾಕಿ ಅಧಿಕಾರಕ್ಕೆ ಬಂದ ಮೋದಿಯವರು ಮಾಡಿದ್ದೇನು? ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆಯು ನಿನ್ನೆ ಬಿಡುಗಡೆ ಮಾಡಿರುವ ಮಾಹಿತಿಯಂತೆ ಕೋವಿಡ್ ಸಂದರ್ಭಕ್ಕಿಂತಲೂ ಅತ್ಯಂತ ಕನಿಷ್ಠ ಮಟ್ಟದಲ್ಲಿ ಭಾರತವು ಹೊರದೇಶಗಳಿಗೆ ರಫ್ತು ಮಾಡುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ದೇಶದ ರಫ್ತು ಶೇ.16.7 ರಷ್ಟು ಅಂದರೆ 2.4 ಲಕ್ಷ ಕೋಟಿಯಷ್ಟು ಕಡಿಮೆ ರಫ್ತು ಮಾಡಿದೆ. ಇದೇ ಸಂದರ್ಭದಲ್ಲಿ ಆಮದು ಪ್ರಮಾಣವು ಶೇ.6 ರಷ್ಟು ಹೆಚ್ಚಾಗಿದೆ. ಇದಕ್ಕಾಗಿ 4.58 ಲಕ್ಷ ಕೋಟಿಗಳನ್ನು ಹೆಚ್ಚು ಪಾವತಿಸುತ್ತಿದೆ. ರೂಪಾಯಿ ಅಪಮೌಲ್ಯದಿಂದಾಗಿ ಆಮದು ವಸ್ತುಗಳ ಬೆಲೆಗಳೂ ಹೆಚ್ಚುತ್ತಿವೆ. ಇದೆಲ್ಲ ಏನನ್ನು ಸೂಚಿಸುತ್ತಿದೆ? ಮೋದಿ ಸರ್ಕಾರದ ಉತ್ಪಾದನಾ ನೀತಿಗಳು, ತೆರಿಗೆ ವ್ಯವಸ್ಥೆ, ಬೆಲೆ ನೀತಿಗಳು ಜನರ ಪರವಾಗಿಲ್ಲ ಎಂಬುದನ್ನಲ್ಲವೆ? ಯಾರೊ ಕೆಲವರ ಉದ್ಧಾರಕ್ಕಾಗಿ ಮೋದಿಯವರ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆಯೇ ಹೊರತು ಎಲ್ಲರ ವಿಕಾಸಕ್ಕಲ್ಲ. ಇದರಿಂದಾಗಿ ದೇಶದ ಅರ್ಥ ವ್ಯವಸ್ಥೆ ಅಧಃಪತನದ ಕಡೆಗೆ ಸಾಗುತ್ತಿದೆ ಎಂದು ಟೀಕಿಸಿದ್ದಾರೆ.

ತೆರಿಗೆ ಸಂಗ್ರಹ ಉತ್ತಮವಾಗಿದೆಯೆಂದು ಮೋದಿ ಸರ್ಕಾರ ಹೇಳುತ್ತಿದೆಯಲ್ಲ ಎಂದು ಕೆಲವರು ಕೇಳುತ್ತಾರೆ. 2017-18 ರಲ್ಲಿ ಜಿಎಸ್‍ಟಿ ವ್ಯವಸ್ಥೆ ಜಾರಿಗೆ ತಂದ ವರ್ಷದ ಬೆಳವಣಿಗೆ ದರದಲ್ಲಿಯೆ ತೆರಿಗೆ ದರವಿದ್ದರೆ ಈ ವರ್ಷದ ವೇಳೆಗೆ ಪ್ರತಿ ತಿಂಗಳೂ ಕನಿಷ್ಟ 2.2 ಲಕ್ಷ ಕೋಟಿ ಜಿಎಸ್‍ಟಿ ಸಂಗ್ರಹವಾಗಬೇಕಾಗಿತ್ತು. ಆದರೆ ಆಗುತ್ತಿರುವುದೇನು? ಮೊಸರು, ಮಜ್ಜಿಗೆ, ಮಂಡಕ್ಕಿ, ಅಕ್ಕಿ, ಗೋಧಿ, ಮಕ್ಕಳು ಬಳಸುವ ಪೆನ್ನು ಪೆನ್ಸಿಲ್ಲು, ಕಾಗದ, ಇಂಕು ಹಾಗೂ ಆಸ್ಪತ್ರೆ ಬಿಲ್ಲು ಹೀಗೆ ಎಲ್ಲದರ ಮೇಲೆಯೂ ತೆರಿಗೆ ವಿಧಿಸಿ ಕೊಳ್ಳೆ ಹೊಡೆಯಲಾಗುತ್ತಿದೆ. ಇಷ್ಟಾದರೂ ಜಿಎಸ್‍ಟಿ ಸಂಗ್ರಹ ಇನ್ನೂ 1.7 ಲಕ್ಷ ಕೋಟಿಗೂ ತಲುಪಿಲ್ಲ ಎಂಬ ಲೆಕ್ಕಾಚಾರವನ್ನು ಮಾಜಿ ಸಿಎಂ ತೋರಿದ್ದಾರೆ.

ದೇಶದ ಜನರು ಬಳಸುವ ಎಲ್ಲ ವಸ್ತು ಸೇವೆಗಳ ಮೇಲಿನ ಹಣದುಬ್ಬರವು ಶೇ.2 ರಿಂದ 3 ರಷ್ಟಿರಬೇಕು. ಆದರೆ ಈ ವರ್ಷದ ಸರಾಸರಿ ಹಣದುಬ್ಬರ ಶೇ.7 ಕ್ಕಿಂತಲೂ ಅಧಿಕವಾಗಿದೆ. ಅಕ್ಟೋಬರ್ ತಿಂಗಳಲ್ಲಿ ವಾಸ್ತವಿಕ ವಸ್ತು ಮತ್ತು ಸೇವೆಗಳ ಬೆಲೆ ಹೆಚ್ಚಾದರೂ ಸಹ ಮೋದಿ ಸರ್ಕಾರ 6.77 ಕ್ಕೆ ಇಳಿದಿದೆ ಎಂದು ಸುಳ್ಳು ಹೇಳಿದೆ. ಈ 6.77 ಕೂಡ ಜನರ ಮನೆ ಹಾಳು ಮಾಡುವುದೆ ಹೊರತು ಜನರನ್ನು ಉದ್ಧಾರ ಮಾಡುವಂತಹುದಲ್ಲ ಎಂದು ಹೇಳಿದ್ದಾರೆ.

ಮೋದಿಯವರು ಚುನಾವಣಾ ಗಿಮಿಕ್ಕುಗಳನ್ನು ಬಿಟ್ಟು ದೇಶದ ಜನರಿಗೆ ವಾಸ್ತವವನ್ನು ಹೇಳಬೇಕು. ಪ್ರತಿ ವಸ್ತುಗಳ ಸಿಪಿಐ ಮತ್ತು ಡಬ್ಲ್ಯುಪಿಐ ಎಷ್ಟಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಬೇಕು. ದೇಶದ ಅಂಕಿ ಅಂಶಗಳ ಇಲಾಖೆಯು ಯುಪಿಎ ಸರ್ಕಾರದಲ್ಲಿ ಮಾಡುತ್ತಿದ್ದ ಹಾಗೆಯೆ ನಿರಂತರವಾಗಿ ಸರ್ವೆಗಳನ್ನು ಮಾಡಿ ಆಗಿಂದಾಗ್ಗೆ ವರದಿಗಳನ್ನು ಬಿಡುಗಡೆ ಮಾಡಬೇಕು. ಜನರ ಆದಾಯ, ವೆಚ್ಚ, ಖರೀದಿ ಸಾಮಥ್ರ್ಯ, ವಸ್ತುಗಳ ಬೆಲೆ ಇತ್ಯಾದಿಗಳ ಕುರಿತು ಜನರನ್ನು ಕತ್ತಲೆಯಲ್ಲಿ ಇಡಲಾಗಿದೆ. ವಾಸ್ತವಗಳನ್ನು ತಿಳಿಸದೆ ಅಂಕಿ ಅಂಶಗಳನ್ನು ತಿರುಚಿ ಸುಳ್ಳು ಹೇಳಿ ಜನರನ್ನು ಕತ್ತಲಲ್ಲಿಡುವುದು ಸರ್ವಾಧಿಕಾರದ ಲಕ್ಷಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೇಳುತ್ತಿರುವುದು ಸಂಪೂರ್ಣ ಸುಳ್ಳು ಎಂದು ಅರ್ಥವಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next