Advertisement

ಅಭಿವೃದ್ಧಿ ಮುಂದುವರಿಸಲು ಜನತೆ ಅವಕಾಶ: ರಘುಪತಿ ಭಟ್‌ ವಿಶ್ವಾಸ

07:00 AM Apr 22, 2018 | Team Udayavani |

ಉಡುಪಿ: “ಉಡುಪಿಯಲ್ಲಿ ದಿ| ಡಾ| ವಿ. ಎಸ್‌. ಆಚಾರ್ಯ ಅವರು ಸಚಿವರಾಗಿದ್ದಾಗ,  ನಾನು ಶಾಸಕನಾಗಿದ್ದಾಗ ನಡೆದಿರುವ ಅನೇಕ ಅಭಿವೃದ್ಧಿ ಕೆಲಸಗಳನ್ನು ಜನತೆ  ಗುರುತಿಸಿದ್ದಾರೆ. ದಿ| ಡಾ| ಆಚಾರ್ಯ ಅವರ ವಿಷನ್‌ನ್ನು ಸಂಪೂರ್ಣಗೊಳಿಸಲು ಉಡುಪಿ ಜನತೆ ಮತ್ತೂಮ್ಮೆ ನನಗೆ ಅವಕಾಶ ನೀಡುವರೆಂಬ ವಿಶ್ವಾಸವಿದೆ’ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಮಾಜಿ ಶಾಸಕ ಕೆ.ರಘುಪತಿ ಭಟ್‌ ತಿಳಿಸಿದ್ದಾರೆ.

Advertisement

ಎ.21ರಂದು ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಅಭಿವೃದ್ಧಿ ವಿಚಾರವೇ ಚುನಾವಣೆಯ ಮುಖ್ಯ ವಿಷಯವಾಗಿರುತ್ತದೆ. ಅದರ ಜತೆಗೆ ರಾಷ್ಟ್ರೀಯತೆಯನ್ನು ಕೂಡ ಮುಂದಿಟ್ಟುಕೊಳ್ಳುತ್ತೇವೆ. ಉಡುಪಿಯಲ್ಲಿ ಹೆಚ್ಚು ಕಾಂಗ್ರೆಸ್‌ನ ಶಾಸಕರು, ಸಚಿವರೇ ಇದ್ದರು. ಆ ಕಾಲದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ನಡೆದಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಅನಂತರವೇ ಉಡುಪಿಯಲ್ಲಿ ಕೆಲಸಗಳು ನಡೆದಿವೆ. ಕಾಂಗ್ರೆಸ್‌ನವರಿಗೆ ಕಲ್ಸಂಕ ರಸ್ತೆ, ಗುಂಡಿಬೈಲು ರಸ್ತೆ ಅಗಲಗೊಳಿಸಲೂ ಸಾಧ್ಯವಾಗಿರಲಿಲ್ಲ. ಬೀಡಿನಗುಡ್ಡೆಯ ತ್ಯಾಜ್ಯ ಸಮಸ್ಯೆಗೆ ಮುಕ್ತಿ ಸೇರಿದಂತೆ ಉಡುಪಿಯ ಸಮಸ್ಯೆಗಳಿಗೆ ಸ್ಪಂದಿಸಲೇ ಇಲ್ಲ. ಇವೆಲ್ಲವನ್ನೂ ಬಿಜೆಪಿ ಸರಕಾರವೇ ಮಾಡಬೇಕಾಯಿತು. ಇನ್ನೂ ಕೂಡ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ಅಭಿವೃದ್ಧಿ ಕೆಲಸಗಳು ಮತ್ತಷ್ಟು ನಡೆಯಬೇಕಾಗಿದೆ. ಹಾಗಾಗಿ ಜನತೆ ಮತ್ತೂಮ್ಮೆ ಅವಕಾಶ ನೀಡುವರೆಂಬ ವಿಶ್ವಾಸವಿದೆ’ ಎಂದು ಹೇಳಿದರು.

ಗೆಲುವು ಖಚಿತ 
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಭಟ್‌ ಅವರು, “ನನ್ನನ್ನು ಚುನಾವಣೆಯಲ್ಲಿ ಎದುರಿಸಲು ಸಾಧ್ಯವಿಲ್ಲದವರು ಕಳೆದ ಬಾರಿ ಷಡ್ಯಂತ್ರ ಮಾಡಿದ್ದರು. ಆದರೆ ಅವೆಲ್ಲವೂ ಈಗ ಮುಗಿದ ಅಧ್ಯಾಯ. ನಾನು ಈ ಬಾರಿ ಪಕ್ಷದ ನಾಯಕರು, ಕಾರ್ಯಕರ್ತರ ಅಪೇಕ್ಷೆ, ವಿಶ್ವಾಸಕ್ಕೆ ಚ್ಯುತಿ ಬರದಂತೆ ಕೆಲಸ ಮಾಡಲಿದ್ದೇನೆ. ಗೆಲುವು ಶೇ.100ರಷ್ಟು ಖಚಿತ’ ಎಂದರು.

ಶೀರೂರು ಶ್ರೀಗಳಿಂದಲೂ ಆಶೀರ್ವಾದ
ಚುನಾವಣೆಗೆ ಸ್ಪರ್ಧಿಸುವಾಗ ಅಷ್ಟ ಮಠಾಧೀಶರಿಂದ ಆಶೀರ್ವಾದ ಪಡೆಯುವ ಸಂಪ್ರದಾಯವನ್ನು ನಾನು ಈ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದೇನೆ. ಅದರಂತೆ ಈ ಬಾರಿಯೂ ಎಲ್ಲಾ ಮಠಾಧೀಶರ ಆಶೀರ್ವಾದ ಪಡೆಯುತ್ತೇನೆ. ಶೀರೂರು ಶ್ರೀಗಳ ಬಳಿಗೂ ತೆರಳುತ್ತೇನೆ. ಅವರು ಸ್ಪರ್ಧಿಸುವುದಿಲ್ಲ ಎಂಬ ವಿಶ್ವಾಸ ಇದೆ. ಒಂದು ವೇಳೆ ಅವರು ಹೇಳಿದಂತೆ ಬಿಜೆಪಿ ಪಕ್ಷದಲ್ಲಿ ಸರಿ ಇಲ್ಲ ಎಂದಾಗಿದ್ದರೆ ಅವರು ಸೂಚಿಸಿದಂತೆ ಸರಿಪಡಿಸಲಾಗುವುದು. ಉಡುಪಿ ಶ್ರೀಕೃಷ್ಣ ಮಠವನ್ನು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಿಂದ ಮುಕ್ತಗೊಳಿಸಿರುವುದು, ಶ್ರೀಕೃಷ್ಣ ಮಠದವರ ಕೋರಿಕೆಯಂತೆ ಭದ್ರತೆಯ   ದೃಷ್ಟಿಯಿಂದ ರಥಬೀದಿಗೆ ವಾಹನ ನಿರ್ಬಂಧ ಮಾಡಿರುವುದು, ಕನಕಗೋಪುರ ವಿವಾದ ಎದ್ದಾಗ ಶ್ರೀಕೃಷ್ಣ ಮಠದ ಪರವಾಗಿ ನಿಂತಿದ್ದು ಹೀಗೆ ಎಲ್ಲಾ ಸಂದರ್ಭಗಳಲ್ಲಿಯೂ ಬಿಜೆಪಿ ಮಠದ ಪರವಾಗಿಯೇ ಕೆಲಸ ಮಾಡಿದೆ. ಶೀರೂರು ಶ್ರೀಗಳಿಗೆ ಬಿಜೆಪಿ ಮತಗಳೇ ಬೀಳುತ್ತವೆ ಎಂಬ ಆಲೋಚನೆಗಳು ತಪ್ಪು. ಅವರು ಬಿಜೆಪಿಗೆ ಬರುವುದಾದರೆ ಸ್ವಾಗತವಿದೆ ಎಂದು ಭಟ್‌ ಅವರು ಹೇಳಿದರು.ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಬಿಜೆಪಿ ನಗರಾಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯ ಮಹೇಶ್‌ ಠಾಕೂರ್‌, ಪಕ್ಷದ ಮುಖಂಡರಾದ ಕಪ್ಪೆಟ್ಟು ಪ್ರವೀಣ್‌ ಕುಮಾರ್‌ ಶೆಟ್ಟಿ, ಶ್ರೀಶ ನಾಯಕ್‌, ಗಿರೀಶ್‌ ಅಂಚನ್‌, ರವಿ ಅಮೀನ್‌ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

33,000 ಲೀಡ್‌
ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ. ಉಡುಪಿ ಕ್ಷೇತ್ರದಲ್ಲಿ 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 39,000 ಮತಗಳಿಂದ ಸೋತಿರುವುದು ಹೌದು. ಆದರೆ ಅನಂತರ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಲ್ಲಿ ಬಿಜೆಪಿ 33,000 ಅಧಿಕ ಮತಗಳನ್ನು ಪಡೆದುಕೊಂಡಿದೆ. 19ರಲ್ಲಿ 12 ಗ್ರಾ.ಪಂ.ಗಳು, 19ರಲ್ಲಿ 14 ತಾ.ಪಂ. ಸ್ಥಾನಗಳನ್ನು, ಜಿ.ಪಂ.ನಲ್ಲಿ, ಎಪಿಎಂಸಿ ಚುನಾವಣೆಯಲ್ಲಿಯೂ ಬಿಜೆಪಿ ಜಯ ಸಾಧಿಸಿದೆ ಎಂದು ಭಟ್‌ ತಿಳಿಸಿದರು. 

Advertisement

ಎ.23ರಂದು ನಾಮಪತ್ರ
ಎ.23ರಂದು ಬೆಳಗ್ಗೆ 10ಕ್ಕೆ ಉಡುಪಿ ಚಿತ್ತರಂಜನ್‌ ಸರ್ಕಲ್‌ನಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿ ಅನಂತರ ಪಾದಯಾತ್ರೆ ಮೂಲಕ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ 12.15ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ನನಗೆ ಅವಕಾಶ ಮಾಡಿಕೊಟ್ಟಿರುವ ಯಡಿಯೂರಪ್ಪ, ಅಮಿತ್‌ ಶಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮಾತ್ರವಲ್ಲದೆ ಸಮೀಕ್ಷೆಯ ಮೂಲಕ ನಡೆದಿರುವ ಆಯ್ಕೆಯಲ್ಲಿ ನನ್ನ ಪರವಾಗಿ ನಿಂತಿರುವ ಉಡುಪಿ ಜನತೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಹಿಂದೆ 2004 ಮತ್ತು 2008ರಲ್ಲಿ ನಾನು ಸ್ಪರ್ಧಿಸಿದಾಗ ನನ್ನ ಪರವಾಗಿ ನರೇಂದ್ರ ಮೋದಿಯವರು ಪ್ರಚಾರ ನಡೆಸಿದ್ದರು. ಈ ಬಾರಿಯೂ ನರೇಂದ್ರ ಮೋದಿಯವರು ಉಡುಪಿಗೆ ಆಗಮಿಸಲಿದ್ದಾರೆ. ಅವರು ಬಂದಾಗಲೆಲ್ಲಾ ನಾನು ಗೆಲುವು ಸಾಧಿಸಿದ್ದೇನೆ. ನನಗೆ ಟಿಕೆಟ್‌ ದೊರೆಯದೇ ಇದ್ದರೂ ಜ.6ರಿಂದಲೇ ಪಕ್ಷದ ಪರವಾಗಿ ಮನೆ ಮನೆ ಭೇಟಿ ನಡೆಸಸಿದ್ದೇನೆ. ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದು ಭಟ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next