ಬೆಂಗಳೂರು: ಅರವತ್ತು ವರ್ಷ ಮೇಲ್ಪಟ್ಟವರು ವೃದ್ಧಾಪ್ಯ ವೇತನಕ್ಕಾಗಿ ಅರ್ಜಿ ಹಿಡಿದು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೊಳಿಸಲಾದ “ಮನೆ ಬಾಗಿಲಿಗೆ ಪಿಂಚಣಿ’ಯಡಿ 3.52 ಲಕ್ಷ ಜನರಿಗೆ ಸೌಲಭ್ಯ ದೊರೆಯಲಿದೆ.
ಯೋಜನೆ ಪ್ರಾರಂಭವಾದ ಒಂದು ವರ್ಷದಲ್ಲಿ ಈವರೆಗೆ 2.30 ಲಕ್ಷ ಜನರಿಗೆ “ಮನೆ ಬಾಗಿಲಿಗೆ ಪಿಂಚಣಿ’ ಆದೇಶ ಪತ್ರ ದೊರೆತಿದ್ದು, ಪ್ರಸಕ್ತ ವರ್ಷ 1.22 ಲಕ್ಷ ಮಂದಿಯನ್ನು ತಲುಪಲು ಕಂದಾಯ ಇಲಾಖೆ ಸಜ್ಜಾಗಿದೆ.
ಬೋಗಸ್ ಹಾಗೂ ಮಧ್ಯವರ್ತಿಗಳ ಕಾಟ ತಪ್ಪಿಸುವ ದೃಷ್ಟಿಯಿಂದ ರೂಪಿಸಿರುವ ಈ ಯೋಜನೆಯಡಿ ಪ್ರತಿ ಗ್ರಾಮದಲ್ಲೂ ಗ್ರಾಮ ಲೆಕ್ಕಿಗರು ಮನೆ ಮನೆಗೆ ಹೋಗಿ 60 ವರ್ಷ ಮೇಲ್ಪಟ್ಟವರ ಆಧಾರ್ ಹಾಗೂ ಪಡಿತರ ಚೀಟಿ ಮಾಹಿತಿ ಸಂಗ್ರಹಿಸಿ ಭಾವಚಿತ್ರ ಹಿಡಿದು ಅಲ್ಲೇ ಅಪ್‌ಲೋಡ್ ಮಾಡುತ್ತಿದ್ದು, 1.22 ಲಕ್ಷ ಮಂದಿಗೆ ಪಿಂಚಣಿ ಆದೇಶ ಪತ್ರ ತಲುಪಿಸಲು ಪಟ್ಟಿ ಸಿದ್ಧವಾಗುತ್ತಿದೆ. ಅಂಥವರ ಬ್ಯಾಂಕ್ ಖಾತೆಗೆ ನೇರವಾಗಿ ಪಿಂಚಣಿ ಜಮೆ ಆಗಲಿದೆ ಹಾಗೂ ಫಲಾನುಭವಿ ಅಥವಾ ಅವರ ಕುಟುಂಬ ಸದಸ್ಯರಿಗೆ ಎಸ್‌ಎಂಎಸ್ ಸಂದೇಶವೂ ರವಾನೆಯಾಗಲಿದೆ.
68 ಲಕ್ಷ ಜನರಿಗೆ ಪಿಂಚಣಿ :
ಸಾಮಾಜಿಕ ಭದ್ರತಾ ಯೋಜನೆಡಿ ವೃದ್ಧಾಪ್ಯ, ವಿಧವಾ, ವಿಕಲಚೇತನ ಸಹಿತ 68 ಲಕ್ಷ ಜನರಿಗೆ ಪ್ರತಿ ತಿಂಗಳು ಪಿಂಚಣಿ ನೀಡಲಾಗುತ್ತಿದ್ದು, ಒಂದೇ ಹೆಸರಿನಲ್ಲಿ ಮೂರ್‍ನಾಲ್ಕು ಕಡೆ ಪಿಂಚಣಿ ಪಡೆಯುತ್ತಿದ್ದ 4 ಲಕ್ಷ ಬೋಗಸ್ ಪ್ರಕರಣಗಳನ್ನು ಪತ್ತೆ ಮಾಡಿ ರದ್ದುಪಡಿಸಿದ್ದರಿಂದ 400 ಕೋಟಿ ರೂ.ವರೆಗೆ ಉಳಿತಾಯವಾಗಿದೆ. ಆ ಮೊತ್ತವನ್ನು ಹೊಸದಾಗಿ ಪಟ್ಟಿಗೆ ಸೇರುವವರಿಗೆ ಪಿಂಚಣಿ ನೀಡಲು ಬಳಸಲಾಗುತ್ತಿದೆ.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಮತ್ತೆ ಆರಂಭ :
ಈ ಮಧ್ಯೆ, ಗ್ರಾಮೀಣ ಭಾಗದಲ್ಲಿ ಸ್ಥಳದಲ್ಲಿಯೇ ಅರ್ಜಿಗಳನ್ನು ಇತ್ಯರ್ಥಪಡಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದ್ದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ’ಯನ್ನು ಮತ್ತೆ ಆರಂಭಿಸಲು ಸೂಚನೆ ನೀಡಲಾಗಿದೆ. ವಿಧಾನಮಂಡಲ ಅಧಿವೇಶನ ಮುಗಿದ ತತ್‌ಕ್ಷಣ ಅದಕ್ಕೆ ಚಾಲನೆ ಸಿಗಬಹುದು ಎಂದು ಹೇಳಲಾಗಿದೆ.
ಮನೆ ಬಾಗಿಲಿಗೆ ಪಿಂಚಣಿ ಹಿರಿಯ ನಾಗರಿಕರ ಪಾಲಿಗೆ ವರದಾನ. ಇಲಾಖೆ ಅಧಿಕಾರಿಗಳೇ 60 ವರ್ಷ ಮೇಲ್ಪಟ್ಟವರ ಮನೆ ಬಾಗಿಲಿಗೆ ಹೋಗಿ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ಪರಿಶೀಲಿಸಿ ಸ್ಥಳದಲ್ಲೇ ಪಿಂಚಣಿ ಮಂಜೂರಾತಿ ಆದೇಶ ನೀಡುತ್ತಿದ್ದಾರೆ. ಇದೊಂದು ಕ್ರಾಂತಿಕಾರಕ ನಿರ್ಧಾರವಾಗಿದ್ದು, ಬೋಗಸ್ ಹಾಗೂ ಮಧ್ಯವರ್ತಿಗಳ ಕಾಟ ತಪ್ಪಿಸಿ ನೈಜ ಫಲಾನುಭವಿಗಳಿಗೆ ಪಿಂಚಣಿ ತಲುಪುವಂತೆ ಮಾಡುವುದು ನಮ್ಮ ಉದ್ದೇಶ.
– ಆರ್.ಅಶೋಕ್, ಕಂದಾಯ ಸಚಿವ