ಬೆಂಗಳೂರು: ರಾಜ್ಯ ಸರಕಾರ “ಮನೆ ಬಾಗಿಲಿಗೇ ಮಾಸಾಶನ’ ಎಂಬ ಅಭಿಯಾನ ಆರಂಭಿಸಿದ್ದು, ಇನ್ನು ಮುಂದೆ ಹಿರಿಯ ನಾಗರಿಕರು ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳು ಮಾಸಾಶನಕ್ಕಾಗಿ ಕಚೇರಿಗಳಿಗೆ ಅಲೆಯಬೇಕಿಲ್ಲ! ಬುಧವಾರ ಮುಖ್ಯಮಂತ್ರಿ ಯಡಿಯೂರಪ್ಪ ಅಭಿಯಾನ ಹಾಗೂ “ನವೋದಯ’ ಆ್ಯಪ್ ಮತ್ತು ತಂತ್ರಾಂಶಕ್ಕೆ ಚಾಲನೆ ನೀಡಿದ್ದಾರೆ.
ರಾಜ್ಯದಲ್ಲಿ ಸದ್ಯ 9 ಮಾಸಿಕ ಪಿಂಚಣಿ ಯೋಜನೆ ಹಾಗೂ 3 ಏಕಕಾಲಿಕ ಸಹಾಯಧನ ನೆರವು ಯೋಜನೆ ಜಾರಿಯಲ್ಲಿದೆ. ಈಗಾಗಲೇ ಸೌಲಭ್ಯ ಪಡೆಯುತ್ತಿರುವವರ ಮಾಹಿತಿ ಮರು ಪರಿಶೀಲನೆ, ಪರಿಷ್ಕರಣೆ ಜತೆಗೆ ಹೊಸ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಪಿಂಚಣಿ ಜಮೆಯಾಗುವಂತೆ ಮಾಡುವಲ್ಲಿ “ನವೋದಯ’ ಮೊಬೈಲ್ ಆ್ಯಪ್- ತಂತ್ರಾಂಶ ಸಹಕಾರಿಯಾಗಿದೆ.
60 ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಅಂಥವರನ್ನು ಗುರುತಿಸಲಾಗುತ್ತದೆ. ಅರ್ಹರಾಗಿದ್ದರೆ ಇಲಾಖೆಯಿಂದಲೇ ಪಿಂಚಣಿಗೆ ಅರ್ಹರಾಗಿರುವ ಬಗ್ಗೆ ಪತ್ರವನ್ನು ಫಲಾನುಭವಿಯ ಮನೆಗೆ ರವಾನಿಸಲಾಗುತ್ತದೆ. ಪ್ರತಿ ತಿಂಗಳು ಖಾತೆಗೆ ಪಿಂಚಣಿ ಜಮೆಯಾಗಲಿದೆ.
ರಾಜ್ಯಕ್ಕೆ ಮಾದರಿಯಾದ ಉಡುಪಿ ಜಿಲ್ಲೆ :
ಉಡುಪಿ: ಈ ಯೋಜನೆ ಮೊದಲು ಪ್ರಾಯೋಗಿಕವಾಗಿ ಕಾರ್ಯಗತ ಗೊಂಡದ್ದು ಉಡುಪಿ ಜಿಲ್ಲೆಯಲ್ಲಿ ಎಂಬುದು ವಿಶೇಷ. ಸ್ವತಃ ಜಿಲ್ಲಾಧಿಕಾರಿ ಕೂಡ ಮನೆ-ಮನೆಗೆ ತೆರಳಿ ಯೋಜನೆಗಳ ಮಾಹಿತಿ ನೀಡಿ ಜನರಿಗೆ ತಲುಪಿಸುವಲ್ಲಿ ಸಹಕರಿಸಿದ್ದರು. 2019ರ ಡಿಸೆಂಬರ್‌ನಲ್ಲಿ ಮನೆಬಾಗಿಲಿಗೆ ಪಿಂಚಣಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಸುಮಾರು 3,000 ಮಂದಿ ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಈಗ ತಿಂಗಳಿಗೊಂದು ಬಾರಿ ಈ ಕಾರ್ಯ ನಡೆಯುತ್ತಿದೆ. ಮುಂದೆ ವಾರದಲ್ಲಿ ಇಂತಿಷ್ಟು ದಿನವನ್ನು ಇದಕ್ಕಾಗಿ ಮೀಸಲಿರಿಸುವ ಬಗ್ಗೆಯೂ ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ.
ಫಲಾನುಭವಿಗಳನ್ನು ಕಂದಾಯ ಇಲಾಖೆಯೇ ಗುರುತಿಸಲಿದೆ. ಹೆಚ್ಚು ಮಂದಿಗೆ ನೆರವಾಗಲು ಆದಾಯ ಮಿತಿ ಯನ್ನು 12,000 ರೂ.ನಿಂದ 35,000 ರೂ. ವರೆಗೆ ವಿಸ್ತರಿಸಲಾಗಿದೆ.
– ಬಿ.ಎಸ್. ಯಡಿಯೂರಪ್ಪ, ಸಿಎಂ