ನಾಗಮಂಗಲ: ರೈತರನ್ನು ಆರ್ಥಿಕ ಸದೃಢರನ್ನಾಗಿಸಲು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಮಾನ್‌ಧನ್ ಯೋಜನೆ (ಪಿಂಚಣಿ ಯೋಜನೆ) ಸಹಕಾರಿ ಯಾಗಲಿದೆ ಎಂದು ಪಾಂಡವಪುರ ಉಪ ವಿಭಾಗದ ಕೃಷಿ ನಿರ್ದೇಶಕಿ ಮಾಲತಿ ತಿಳಿಸಿದರು.
ಪಟ್ಟಣದ ನಾಗರೀಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಮಾನ್‌ಧನ್ ಯೋಜನೆ ಕುರಿತು ಮಾಹಿತಿ ನೀಡಿ ಅವರು ಮಾತನಾಡಿದರು.
ರಾಷ್ಟ್ರದಲ್ಲಿ ಯಾವುದೇ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದವರೂ ನಿವೃತ್ತಿ ಬಳಿಕ ಪಿಂಚಣಿ ಪಡೆಯುತ್ತಿದ್ದಾರೆ. ಆದರೆ, ದೇಶದ ಬೆನ್ನೆಲುಬಾದ ರೈತ ಹುಟ್ಟಿನಿಂದ ಸಾವಿನ ವರೆಗೂ ಕೃಷಿ ಮಾಡಿದರೂ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ರೈತನಿಗೆ ನಿವೃತ್ತಿ ಎಂಬುದೇ ಇಲ್ಲ, ಪಿಂಚಣಿಯೂ ಇಲ್ಲವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ 60 ವರ್ಷ ವಯಸ್ಸಿನ ನಂತರ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಮಾಸಿಕ ಕನಿಷ್ಠ 3 ಸಾವಿರ ರೂ. ಪಿಂಚಣಿ ನೀಡುವಂತಹ ಯೋಜನೆ ಜಾರಿಗೆ ತಂದು ರೈತರ ಆರ್ಥಿಕ ಸದೃಢತೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ರೈತನ ನಂತರ ಹೆಂಡತಿಗೆ ಪಿಂಚಣಿ: ಹುಟ್ಟಿನಿಂದ ಮರಣದವರೆಗೂ ದುಡಿ ಯುತ್ತಿದ್ದ ರೈತರಿಗೆ 60 ವರ್ಷ ವಯಸ್ಸಿನ ಬಳಿಕ ನೆಮ್ಮದಿಯಿಂದ ಜೀವನ ನಡೆಸಲು ಈ ಯೋಜನೆ ಸಹಕಾರಿ. ಒಂದು ವೇಳೆ ರೈತ ಮರಣ ಹೊಂದಿದರೆ ಮರಣದ ಬಳಿಕ ರೈತನ ಹೆಂಡತಿಗೆ 1500 ರೂ. ಪಿಂಚಣಿ ನೀಡಲಾಗುತ್ತದೆ. ರೈತ ತನ್ನ ವಯಸ್ಸಿನಲ್ಲಿ ಶಕ್ತಿವಂತನಾಗಿದ್ದಾಗ ತನ್ನ ಶ್ರಮದಿಂದ ದೇಶ ಉತ್ತಮವಾಗಿ ನೋಡಿಕೊಳ್ಳುತಿದ್ದ. ರೈತ ವೃದ್ಧಾಪ್ಯದಲ್ಲಿ ಯಾರನ್ನೂ ಅವಲಂಬಿಸದೆ ಸ್ವಾವಲಂಬಿಯಾಗಿ ಬದುಕಲು ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಪಿಂಚಣಿ ನಿಧಿ: ರೈತರು ಪಾವತಿಸುವ ವಂತಿಗೆ ಹಣಕ್ಕೆ ಸಮಾನ ಮೊತ್ತ ಸರ್ಕಾರ ಪಿಂಚಣಿ ನಿಧಿಗೆ ಪಾವತಿಸುತ್ತದೆ. ಈ ಯೋಜನೆಯನ್ನು ತಾಲೂಕಾದ್ಯಂತ ಒಟ್ಟು 6 ನಾಗರೀಕ ಸೇವಾ ಕೇಂದ್ರಗಳಲ್ಲಿ ಮಾಡಲಾಗುತ್ತಿದೆ. ರೈತರು ಸಮೀಪದ ಕೇಂದ್ರಕ್ಕೆ ಹೋಗಿ ಹೆಸರು ನೊಂದಾಯಿಸಿಕೊಳ್ಳಬಹುದು. ಈ ಯೋಜನೆಯನ್ನು ತಾಲೂಕಿನ ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಫಲಾನುಭವಿ ಅರ್ಹತೆ: ಯೋಜನೆಯ ಸೌಲಭ್ಯ ಪಡೆಯಲು ಗರಿಷ್ಠ 2 ಹೆಕ್ಟೇರ್‌ವರೆಗೆ ಸಾಗುವಳಿ ಭೂಮಿ ಹೊಂದಿರಬೇಕು. 18ರಿಂದ 40 ವರ್ಷದೊಳಗಿನ ಪ್ರತಿಯೊಬ್ಬ ರೈತನು ಈ ಯೋಜನೆಗೆ ಅರ್ಹನಾಗಿರುತ್ತಾನೆ. ವಯಸ್ಸಿನ ಆಧಾರದ ಮೇಲೆ ಮಾಸಿಕ 55ರಿಂದ 200ರವರೆಗೆ ಮಾಸಿಕ ವಂತಿಕೆ ಪಾವತಿಸಬೇಕಿರುತ್ತದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಲ್ಲಿ ಬರುವಂತಹ ಹಣದಲ್ಲಿ ಮಾಸಿಕ ವಂತಿಗೆ ಪಾವತಿಸಲು ಅವಕಾಶವಿದ್ದು ಅಥವಾ ತಮ್ಮ ವೈಯಕ್ತಿಕ ಉಳಿತಾಯ ಖಾತೆಯಿಂದ ವಂತಿಕೆ ಕಡಿತ ಮಾಡಿಸಬಹುದು ಎಂದು ಹೇಳಿದರು.
ಅಗತ್ಯ ದಾಖಲೆಗಳು: ಫಲಾನುಭವಿ ರೈತನ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಫಲಾನುಭವಿಯ ಪತಿ/ಪತ್ನಿಯ ವಿವರ ಜನ್ಮ ದಿನಾಂಕದೊಂದಿಗೆ ನೀಡಬೇಕು. ಈ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ ಅಥವಾ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯಬಹುದು. ಇಲ್ಲವಾದಲ್ಲಿ ಸಮೀಪದ ನಾಗರೀಕ ಸೇವಾ ಕೇಂದ್ರಗಳಲ್ಲಿ ಮಾಹಿತಿ ಪಡೆಯಬಹುದು ಎಂದು ಹೇಳಿದರು.
ಈ ವೇಳೆ ಕೃಷಿ ಅಧಿಕಾರಿಗಳಾದ ಮಂಜುನಾಥ್, ಯದುರಾಜು, ಪೃಥ್ವಿಶ್ರೀ, ಅನುಷಾ ಮತ್ತಿತರರು ಉಪಸ್ಥಿತರಿದ್ದರು.