ಗದಗ: ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧರು, ವಿಧವೆಯರು ಹಾಗೂ ವಿಕಲಚೇತನರಿಗೆ ಸರ್ಕಾರದಿಂದ ಮಾಸಾಶನ ನೀಡಲಾಗುತ್ತದೆ. ಫಲಾನುಭವಿಗಳ ಅನುಕೂಲಕ್ಕಾಗಿ ಸರ್ಕಾರ ಮನೆ ಬಾಗಿಲಿಗೆ ಮಾಸಾಶನ ನೀಡುವ ವಾಗ್ಧಾನ ಮಾಡಿದೆಯಾದರೂ, ಜಿಲ್ಲೆಯ ಸಾವಿರಾರು ಫಲಾನುಭವಿಗಳಿಗೆ ಹಲವು ತಿಂಗಳಿಂದ ಪಿಂಚಣಿಯೇ ಕೈ ಸೇರಿಲ್ಲ!.
ಸಾಮಾಜಿಕ ಭದ್ರತಾ ಯೋಜನೆಗಳ ದುರುಪಯೋಗ ತಡೆಯಲು ಭೌತಿಕ ಪರಿಶೀಲನೆ ಹಾಗೂ ದಾಖಲೆಗಳ ಸಲ್ಲಿಕೆ ಕೊರತೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾವಿರಾರು ಫಲಾನುಭವಿಗಳ ಖಾತೆಗಳು ಅಮಾನತ್ತಿನಲ್ಲಿ ಇರಿಸಲಾಗಿದೆ. ಹೀಗಾಗಿ ತಮ್ಮ ಮಾಸಾಶನ ಮರು ಚಾಲನೆಗೊಳಿಸುವಂತೆ ಕೋರಿಕೆ ಸಲ್ಲಿಸಲು ಪ್ರತಿನಿತ್ಯ ನೂರಾರು ವಿಧವೆಯರು ಆಯಾ ತಹಶೀಲ್ದಾರ್ ಕಚೇರಿಗೆ ಅಲೆಯುವಂತಾಗಿದೆ.
ಜಿಲ್ಲೆಯಲ್ಲಿ ವಿಧವಾ ವೇತನ 34622, ವೃದ್ಧಾಪ್ಯ ವೇತನ 35,144, ಸಂಧ್ಯಾ ಸುರಕ್ಷಾ 31635, ಮನಸ್ವಿನಿ 2427, ಮೈತ್ರಿ 10, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ವಿಧವಾ ವೇತನ 115 ಸೇರಿದಂತೆ ಒಟ್ಟು 1,25,850 ಜನ ಫಲಾನುಭವಿಗಳಿದ್ದಾರೆ. ಈ ಪೈಕಿ ಸಾವಿರಾರು ಜನರಿಗೆ ಮಾಸಾಶನ ತಲುಪದೇ ನಿತ್ಯ ಕಚೇರಿಗಳಿಗೆ ಅಲೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ಗದಗಿನಲ್ಲಿ ಸರದಿ ಸಾಲು: ಮಾಸಾಶನ ಸ್ಥಗತಗೊಳಿಸಿರುವುದು ಹಾಗೂ ಕಳೆದ 8 ರಿಂದ 10 ತಿಂಗಳಿಂದ ಮಾಸಾಶನ ಜಮಾ ಆಗುತ್ತಿಲ್ಲವೆಂದು ನೂರಾರು ವೃದ್ಧರು ತಹಶೀಲ್ದಾರ್ ಕಚೇರಿಗೆ ಸಾಲುಗಟ್ಟಿದ್ದರು.
ಶಾಸನ ಮಂಜೂರಾತಿ ಪತ್ರ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್‌ಗಳೊಂದಿಗೆ ಬೆಳಗ್ಗೆ 9 ಗಂಟೆಯಿಂದಲೇ ಹಿರಿಯ ನಾಗರಿಕರು ತಮ್ಮ ಸರದಿಗಾಗಿ ಕಾದು ಕೂರುವಂತಾಗಿದೆ. ಈ ಬಗ್ಗೆ ತಹಶೀಲ್ದಾರ್ ಕಚೇರಿಯಲ್ಲಿ ವಿಚಾರಿಸಿದರೆ, ಕೆ-2 ತಂತ್ರಾಂಶದಿಂದ ಕೆಲವರಿಗೆ ತೊಂದರೆಯಾದರೆ, ವಿವಿಧ ಬ್ಯಾಂಕ್‌ಗಳು ವಿಲೀನಗೊಂಡಿರುವುದು, ಆಧಾರ್ ಕಾರ್ಡ್ ಸೀಡಿಂಗ್ ಆಗದಿರುವುದು ಹಾಗೂ ಆಧಾರ್ ಮತ್ತು ಬ್ಯಾಂಕ್ ಖಾತೆಯಲ್ಲಿ ಹೆಸರುಗಳಲ್ಲಿನ ವ್ಯಾತ್ಯಾಸದಿಂದ ಸಮಸ್ಯೆಯಾಗುತ್ತಿದೆ ಎಂದು ಕೈ ಚೆಲ್ಲುತ್ತಿದ್ದಾರೆ. ಪ್ರತಿ ಬಾರಿಯೂ ಅರ್ಜಿ ಸ್ವೀಕರಿಸುವ ಅಧಿ ಕಾರಿಗಳು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಕಳೆದ 10 ತಿಂಗಳಿಂದ ಮಾಸಾಶನ ಸ್ಥಗಿತಗೊಂಡಿದೆ. ಈ ಬಗ್ಗೆ ಬ್ಯಾಂಕ್‌ನಲ್ಲಿ ವಿಚಾರಿಸಿದರೆ, ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ತಹಶೀಲ್ದಾರ್ ಕಚೇರಿಯಲ್ಲಿ ಪ್ರತಿ ಬಾರಿಯೂ ಅರ್ಜಿ ಪಡೆದು, ಪರಿಶೀಲಿಸುವುದಾಗಿ ಸಾಗಹಾಕುತ್ತಿದ್ದಾರೆ.
ದುಡಿದು ತಿನ್ನುವುದಕ್ಕೂ ರಟ್ಟೆಯಲ್ಲಿ ಶಕ್ತಿ ಇಲ್ಲ. ವೃದ್ಧಾಪ್ಯದಲ್ಲಿ ಸರ್ಕಾರ ನೀಡುವ ಬಿಡಿಗಾಸಿಗಾಗಿ ಅಲೆಯುವಂತಾಗಿದೆ ಎಂದು ಫಲಾನುಭವಿಗಳಾದ ರತ್ನವ್ವ ಕೃಷ್ಣಗೌಡ ಪಾಟೀಲ, ಫರೀದಾ ಬೇಗಾಂ, ಮುಗುªಂ ಬೀ ಅಣ್ಣಿಗೇರಿ ಅಳಲು ತೋಡಿಕೊಳ್ಳುತ್ತಾರೆ.