ವಿಧಾನ ಪರಿಷತ್ತು: ನಗರದಲ್ಲಿ ಲಕ್ಷಾಂತರ ನಾಯಿಗಳಿಗೆ ರೇಬಿಸ್ ರೋಗ ನಿರೋಧಕ (ಎಆರ್‌ವಿ) ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಬಾಕಿ ಇರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಈ ನಿಟ್ಟಿನಲ್ಲಿ ಬಿಬಿಎಂಪಿ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಸದಸ್ಯೆ ಜಯಮಾಲಾ ಸದನದ ಗಮನ ಸೆಳೆದರು.
ಸದನದಲ್ಲಿ ಬುಧವಾರ ನಿಯಮ 330ಎ ಅಡಿ ವಿಷಯ ಪ್ರಸ್ತಾಪಿಸಿದ ಅವರು, ಕಳೆದ ವರ್ಷ 28,872 ನಾಯಿಗಳಿಗೆ ಹಾಗೂ ಪ್ರಸಕ್ತ ಸಾಲಿನಲ್ಲಿ 28,864 ನಾಯಿಗಳಿಗೆ ಎಆರ್‌ವಿ ನೀಡಲಾಗಿದೆ. ಇದರ ಹೊರತಾಗಿಯೂ ಅಂದಾಜು 2.50 ಲಕ್ಷ ನಾಯಿಗಳಿಗೆ ಎಆರ್‌ವಿ ನೀಡುವುದು ಇನ್ನು ಪ್ರಗತಿಯಲ್ಲಿದೆ. ಜನವರಿಯಿಂದ ಈವರೆಗೆ ರಾಜ್ಯದಲ್ಲಿ ಐವರು ರೇಬಿಸ್‌ಗೆ ಬಲಿಯಾಗಿದ್ದು, ಈ ಪೈಕಿ ನಗರದಲ್ಲೇ ಎರಡು ಪ್ರಕರಣಗಳು ನಡೆದಿವೆ ಎಂದು
“ಉದಯವಾಣಿ’ ವಿಶೇಷ ವರದಿಯ ಅಂಶಗಳನ್ನು ಉಲ್ಲೇಖೀಸಿದರು. ಅಷ್ಟೇ ಅಲ್ಲ, ಈ ಸಂಬಂಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಂಗಳವಾರ
“ಉದಯವಾಣಿ’ಯ ನಗರ ಆವೃತ್ತಿ ಯಲ್ಲಿ ಈ ಸಂಬಂಧ ವಿಶೇಷ ವರದಿ ಪ್ರಕಟಗೊಂಡಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ, ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೇಬಿಸ್ ಲಸಿಕೆಗಳ ಲಭ್ಯತೆ ಎಷ್ಟಿದೆ? ಬೇಡಿಕೆ ಎಷ್ಟಿದೆ? ಮತ್ತಿತರ ಅಂಶಗಳ ಕುರಿತು ವರದಿ ನೀಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದೆ. ಜತೆಗೆ, ಬರುವ ಪಾಲಿಕೆ ಬಜೆಟ್‌ನಲ್ಲಿ ವ್ಯಾಘ್ರ ನಾಯಿಗಳ ಪಾಲನಾ ಕೇಂದ್ರಕ್ಕೆ ಹತ್ತು ಕೋಟಿ ರೂ.ಮೀಸಲಿಡಲು ತೀರ್ಮಾನಿಸಿದೆ.
ಚುಚ್ಚುಮದ್ದು ನೀಡಲಾದ ನಾಯಿಗಳಿಗೆ ಹಾಕಿದ ಗುರುತು ಕೆಲವೇ ದಿನಗಳಲ್ಲಿ ಅಳಿಸಿ ಹೋಗುತ್ತಿದ್ದು, ಹೆಚ್ಚೆಂದರೆ ಎರಡು ವಾರಗಳ ಕಾಲ ಉಳಿಯುತ್ತಿದೆ. ಇದರಿಂದ ಚುಚ್ಚುಮದ್ದು ಹಾಕಿದ ನಾಯಿಗಳನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ. ಪರಿಣಾಮ ಸಮರ್ಪಕವಾಗಿ ಈ ಪ್ರಕ್ರಿಯೆ ನಡೆಯುತ್ತಿಲ್ಲ. ಆದ್ದರಿಂದ ಶಾಶ್ವತವಾಗಿ ಉಳಿಯುವಂತಹ ಬಣ್ಣದ ಗುರುತುಗಳನ್ನು ಹಾಕುವ ಅವಶ್ಯಕತೆ ಇದೆ.
ಈ ದಿಸೆಯಲ್ಲಿ ಬಿಬಿಎಂಪಿ ಹಾಗೂ ರಾಜ್ಯದ ವಿವಿಧ ನಗರಗಳಲ್ಲಿನ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳುವ ತುರ್ತು ಅಗತ್ಯ ಇದೆ ಎಂದು ಜಯಮಾಲಾ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.