ವರದಿ : ಡಾ|ಬಸವರಾಜ ಹೊಂಗಲ್
ಧಾರವಾಡ: ಕಬ್ಬು ಕಳಿಸಿ ಆರು ತಿಂಗಳಾದರೂ ರೈತರ ಖಾತೆಗೆ ಬರದ ಹಣ, ಬಾಕಿ ಹಣ ಕೊಡುವಂತೆ ಕೇಳಿಕೊಂಡ ರೈತರಿಗೆ ಧಮಕಿ ಹಾಕುತ್ತಿರುವ ಖಾಸಗಿ ಸಕ್ಕರೆ ಕಾರ್ಖಾನೆಗಳು, ರೈತರ ಸಂಕಷ್ಟಕ್ಕೆ ಸ್ಪಂದಿಸಲು ಹಿಂಜರಿಯುತ್ತಿರುವ ಜನಪ್ರತಿನಿಧಿಗಳು, ಕೊರೊನಾ ಮತ್ತೂಂದು ಅಲೆಯ ಮಧ್ಯದಲ್ಲಿ ಸಾಲ ಮಾಡಿ ಕಬ್ಬು ಬೆಳೆಯುವ ಅನಿವಾರ್ಯತೆಗೆ ಸಿಲುಕಿದ ರೈತರು. ಒಟ್ಟಿನಲ್ಲಿ ಕೃಷಿಗೆ ಕಾಸಿಲ್ಲ, ಕೊರೊನಾಕ್ಕೆ ಕರುಣೆ ಇಲ್ಲ.
ಹೌದು. ಮೊದಲೆ ಬೆಳೆಗೆ ತಕ್ಕ ಬೆಲೆ ಸಿಕ್ಕಲಿಲ್ಲ ಎಂದು ರೈತರು ಕಂಗಾಲಾಗಿರುವಾಗ, ಒಂದಿಷ್ಟು ಹಣಕಾಸು ಅಡಚಣೆಯನ್ನು ಸರಿದೂಗಿಸುವ ಸಾಮರ್ಥ್ಯ ಕಬ್ಬಿಗಿದೆ ಎಂಬ ನಂಬಿಕೆ ಮತ್ತೆ ಹುಸಿಯಾಗುತ್ತಿದೆ. ವಾಣಿಜ್ಯ ಬೆಳೆಗಳಿಂದ ಆರ್ಥಿಕವಾಗಿ ಕೊಂಚ ಚೇತರಿಕೆ ಕಾಣುವ ಕನಸು ಕಂಡಿದ್ದ ಅನ್ನದಾತರಿಗೆ ಸಹಕಾರ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳು ಮೇಲಿಂದ ಮೇಲೆ ಅಘಾತ ನೀಡುತ್ತಿದ್ದು, ಇದೀಗ ಕಬ್ಬು ಕಳುಹಿಸಿದ ರೈತರಿಗೆ ಹಣ ಕೊಡದೇ ಸತಾಯಿಸುತ್ತಿವೆ. ಅಷ್ಟೇಯಲ್ಲ, ರೈತರು ಹಣಕ್ಕಾಗಿ ಒತ್ತಾಯ ಮಾಡಿದರೆ ಸಣ್ಣಗೆ ತೆರೆಮರೆಯಲ್ಲಿ ಧಮಕಿ ಕೊಡುತ್ತಿವೆ ಎನ್ನುವ ಆರೋಪ ರೈತರಿಂದಲೇ ಕೇಳಿ ಬರುತ್ತಿದೆ.
ಜಿಲ್ಲೆಯಲ್ಲಿ ಅತೀ ಹೆಚ್ಚು ಕಬ್ಬು ಕಲಘಟಗಿ ತಾಲೂಕಿನಲ್ಲಿ ಉತ್ಪಾದನೆಯಾಗುತ್ತಿದ್ದು, ನಂತರದ ಸ್ಥಾನ ಧಾರವಾಡ-ಅಳ್ನಾವರ ತಾಲೂಕಿಗೆ ಇದೆ. ಒಬ್ಬೊಬ್ಬ ರೈತರು ಕನಿಷ್ಠ 400 ಟನ್ ಕಬ್ಬು ಸಕ್ಕರೆ ಕಾರ್ಖಾನೆಗಳಿಗೆ ಕಳಿಸಿದ್ದಾರೆ. ಒಂದು ಟನ್‌ಗೆ ಬರೀ 2300 ರೂ.ಗಷ್ಟೇ ಎಂದುಕೊಂಡರೂ, 9.20 ಲಕ್ಷ ರೂ.ಗಳಾಯಿತು. ಇಷ್ಟು ಹಣಕ್ಕೆ ಆರೇಳು ತಿಂಗಳಿಗೆ ಬಡ್ಡಿ ಹಣ ಎಷ್ಟಾಯಿತು? ಇದನ್ನು ಕೊಡುವವರು ಯಾರು? ಎಂಬ ಪ್ರಶ್ನೆ ರೈತ ಮುಖಂಡರದ್ದು. 1.7 ಲಕ್ಷ ಟನ್ ಕಬ್ಬು ಉತ್ಪಾದನೆ: ಕಳೆದ ಹತ್ತು ವರ್ಷಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಅತ್ಯಧಿಕ ಕಬ್ಬು ಬೆಳೆಯಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಪ್ಯಾರಿ ಶುಗರ್ ಕಾರ್ಖಾನೆ ಆರಂಭಗೊಂಡ ಬೆನ್ನಲ್ಲೆ, ಖಾನಾಪೂರ, ಸವದತ್ತಿ ತಾಲೂಕಿನಲ್ಲಿ ಹೊಸ ಕಬ್ಬಿನ ಕಾರ್ಖಾನೆಗಳು ತಲೆ ಎತ್ತಿದವು. ಈ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೂ ಧಾರವಾಡ ಜಿಲ್ಲೆಯಿಂದ ಅಧಿಕ ಕಬ್ಬು ರವಾನೆಯಾಗುತ್ತಿದೆ. ಹತ್ತು ವರ್ಷಗಳ ಹಿಂದೆ ಬರೀ ಹಳಿಯಾಳ ಕಾರ್ಖಾನೆ ಮಾತ್ರ ರೈತರಿಂದ ಕಬ್ಬು ಖರೀದಿಸುತ್ತಿತ್ತು. ಆದರೆ ಕಳೆದೆರಡು ವರ್ಷಗಳಿಂದ ಖಾನಾಪೂರ ತಾಲೂಕಿನ ಎರಡೂ¾ರು ಖಾಸಗಿ ಸಕ್ಕರೆ ಕಾರ್ಖಾನೆಗಳು ಧಾರವಾಡ ಜಿಲ್ಲೆಯಿಂದ ಅತ್ಯಧಿಕ ಕಬ್ಬು ಖರೀದಿಸುತ್ತಿವೆ. ಅದರಲ್ಲೂ ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆಗೆ ಕಳೆದ 20-30 ವರ್ಷಗಳಿಂದಲೂ ಜಿಲ್ಲೆಯ ರೈತರು ಷೇರುದಾರರಿದ್ದು ಕಬ್ಬು ರವಾನಿಸುತ್ತಾರೆ. ಜಿಲ್ಲೆಯಲ್ಲಿ 2010ರಲ್ಲಿ ಬರೀ 20 ಸಾವಿರ ಟನ್ ಕಬ್ಬು ಉತ್ಪಾದನೆಯಾಗುತ್ತಿತ್ತು. 2015ರಲ್ಲಿ ಇದು 80 ಸಾವಿರ ಟನ್‌ಗೆ ಏರಿಕೆಯಾಯಿತು. 2020ನೇ ಸಾಲಿನಲ್ಲಿ ಅಂದರೆ ಕಳೆದ ವರ್ಷ ಜಿಲ್ಲೆಯಲ್ಲಿ ಬರೊಬ್ಬರಿ 1.7 ಲಕ್ಷ ಟನ್ ಕಬ್ಬು ಉತ್ಪಾದನೆಯಾಗಿದೆ. ಈ ಪೈಕಿ 70 ಸಾವಿರ ಟನ್ ಮಲಪ್ರಭಾ ಸಕ್ಕರೆ ಕಾರ್ಖಾನೆಯೊಂದಕ್ಕೆ ಹೋಗಿದೆ. ಇನ್ನುಳಿದದ್ದು ಖಾನಾಪುರದ ಖಾಸಗಿ ಕಂಪನಿಗಳು ಖರೀದಿಸಿವೆ.
ಮತ್ತೂಂದು ಕೊರೊನಾಘಾತ: ಕಳೆದ ವರ್ಷ ಕೊರೊನಾ ಮಧ್ಯೆಯೂ ಬೆವರು ಸುರಿಸಿ ದುಡಿದ ಅನ್ನದಾತರಿಗೆ ಇದೀಗ ಸಕ್ಕರೆ ಕಾರ್ಖಾನೆಗಳು ಹಾಕುತ್ತಿರುವ ಶರತ್ತು ಮತ್ತು ಬಿಲ್‌ಗಳನ್ನು ಬಾಕಿ ಉಳಿಸಿಕೊಂಡಿರುವುದು ಅನ್ನದಾತರನ್ನು ಮತ್ತಷ್ಟು ಕೆರಳಿಸಿದೆ. ಇದೀಗ ಕೊರೊನಾ ಎರಡನೇ ಅಲೆಯೂ ಅಬ್ಬರಿಸುತ್ತಿದ್ದು, ಸಂಪೂರ್ಣ ಕರ್ಫ್ಯೂ ಜಾರಿಯಾಗಿದೆ. ಕಬ್ಬು ಮತ್ತೆ ಗನ್ನು ಕಟ್ಟುವ ಹಂತದಲ್ಲಿದ್ದು, ಐದು ಅಡಿ ಎತ್ತರಕ್ಕೆ ಬೆಳೆದು ನಿಂತಿದೆ. ಬಿರು ಬೇಸಿಗೆಯಲ್ಲಿ ಹಗಲು ರಾತ್ರಿ ಎನ್ನದೇ ವಿದ್ಯುತ್‌ಗಾಗಿ ಕಾದು ಕುಳಿತು ಕೊಳವೆಬಾವಿಯಿಂದ ಕಬ್ಬಿಗೆ ನೀರು ಹಾಯಿಸುತ್ತಿದ್ದಾರೆ ರೈತರು. ಅಷ್ಟೇಯಲ್ಲ, ಮುಂಗಾರು ಪೂರ್ವ ಮಳೆಗಳು ಸುರಿದಾಗಲೆಲ್ಲ ಕೃಷಿ ಹೊಂಡಗಳಲ್ಲಿ ಶೇಖರಣೆಯಾದ ನೀರನ್ನು ಕೂಡ ಪಂಪ್‌ಸೆಟ್‌ಗಳ ಮೂಲಕ ಎತ್ತಿ ಕಬ್ಬಿನ ತೋಟಗಳಿಗೆ ಹರಿಸುತ್ತಿದ್ದಾರೆ.
ಬೋರ್‌ವೆಲ್ ಇಲ್ಲದ ರೈತರು ಗಂಟೆಗೆ 250 ರೂ.ಗಳಷ್ಟು ಹಣ ನೀಡಿ ನೀರು ಖರೀದಿಸಿ ಕಬ್ಬಿನ ತೋಟಕ್ಕೆ ನೀರು ಪೂರೈಸುತ್ತಿದ್ದಾರೆ. ಇದೀಗ ಮೇ ತಿಂಗಳಿನುದ್ದಕ್ಕೂ ಕಬ್ಬು ಬೆಳೆಗೆ ಸಾಕಷ್ಟು ಖರ್ಚುಗಳಿವೆ. ಮಳೆಗಾಲ ಆರಂಭಕ್ಕೂ ಮುನ್ನವೇ ಕಳೆ ಕಿತ್ತು, ಪೌಷ್ಟಿಕ ಗೊಬ್ಬರಗಳನ್ನು ನೀಡಬೇಕಿದ್ದು, ರೈತರಿಗೆ ಕೈಯಲ್ಲಿ ಹಣದ ಅಗತ್ಯತೆ ಇದೆ. ಬ್ಯಾಂಕ್‌ಗಳು, ಗೊಬ್ಬರದ ಅಂಗಡಿಗಳು, ರಾಸಾಯನಿಕ ಅಂಗಡಿಗಳು ಲಾಕ್‌ಡೌನ್‌ನಲ್ಲಿ ಮುಚ್ಚಿದರೆ ಏನು ಮಾಡುವುದು ಎಂಬ ಚಿಂತೆ ಅನ್ನದಾತರನ್ನು ಮತ್ತಷ್ಟು ಕಂಗಾಲು ಮಾಡಿದೆ.