Advertisement

ಪ್ರಸ್ತಾವನೆಯಲ್ಲೇ ಬಾಕಿಯಾದ ಮಿಂಚುಬಂಧಕ ಟವರ್‌  

12:45 AM May 26, 2020 | Sriram |

ಸವಣೂರು: ಮಳೆಗಾಲ ಪ್ರಾರಂಭ ಮತ್ತು ಕೊನೆಯಲ್ಲಿ ಕರಾವಳಿ ಭಾಗದಲ್ಲಿ ಸಿಡಿಲಬ್ಬರ ಜೋರಾಗಿಯೇ ಇರುತ್ತದೆ. ಸಿಡಿಲಿನಿಂದ ಪ್ರಾಣ ರಕ್ಷಣೆಗೆ ಸರಕಾರಕ್ಕೆ ಜನರು 5 ವರ್ಷಗಳ ಹಿಂದೆ ಮನವಿ ಮಾಡಿದ್ದರು.

Advertisement

ಇದಕ್ಕೆ ಪೂರಕವಾಗಿ ಪುತ್ತೂರು ತಾಲೂಕಿನ ಕೆಲವೊಂದು ಸ್ಥಳಗಳಲ್ಲಿ ಮಿಂಚು ಬಂಧಕ ಟವರ್‌ (ಲೈಟ್ನಿಂಗ್‌ ಟವರ್‌)ನಿರ್ಮಾಣಕ್ಕೆ ಅಧಿಕಾರಿಗಳೂ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಇದು ಕಾರ್ಯ ರೂಪಕ್ಕೆ ಬಂದಿಲ್ಲ.

ಏನಿದು ಟವರ್‌?
ಎತ್ತರದ ಸ್ಥಳವನ್ನು ಆಯ್ಕೆ ಮಾಡಿ ಜನವಸತಿ ಇಲ್ಲದ ಪ್ರದೇಶಗಳಲ್ಲಿ ಟವರ್‌ ನಿರ್ಮಿಸಲಾಗುತ್ತದೆ. ಅತ್ಯಂತ ಎತ್ತರದ ಸ್ಥಳದಲ್ಲಿ ಟವರ್‌ ನಿರ್ಮಾಣ ಮಾಡಿದ್ದಲ್ಲಿ ಸುತ್ತಮುತ್ತಲ ಏಳೆಂಟು ಗ್ರಾಮದ ವ್ಯಾಪ್ತಿಯನ್ನು ಟವರ್‌ ಹೊಂದಿರುತ್ತದೆ.

ಒಳಮೊಗ್ರು ಗ್ರಾಮವನ್ನೇ ಕೇಂದ್ರೀಕರಿಸಿ ಮೊದಲ ಟವರ್‌ ನಿರ್ಮಾಣ ನಡೆಯಲಿದೆ ಎಂದು ಅಂದಿನ ಪುತ್ತೂರು ತಹಶೀಲ್ದಾರ್‌ ಆಗಿದ್ದ ಕುಳ್ಳೇಗೌಡ ಮಾಹಿತಿ ನೀಡಿದ್ದರು.
ಒಳಮೊಗ್ರು ಗ್ರಾಮದಲ್ಲಿ ಟವರ್‌ ನಿರ್ಮಾಣವಾದಲ್ಲಿ ಸುತ್ತಲ ಕೆದಂಬಾಡಿ, ಕೆಯ್ಯೂರು, ಅರಿಯಡ್ಕ, ಬಡಗನ್ನೂರು, ಬೆಟ್ಟಂಪಾಡಿ, ಕುರಿಯ, ಆರ್ಯಾಪು, ಮುಂಡೂರು ಗ್ರಾಮ ವ್ಯಾಪ್ತಿಯಲ್ಲಿ ಉಂಟಾಗುವ ಸಿಡಿಲಾಘಾತವನ್ನು ತಡೆಯುವ ಶಕ್ತಿಯನ್ನು ಹೊಂದಿರುತ್ತದೆ. ಸವಣೂರು ಭಾಗದಲ್ಲಿ ನಿರ್ಮಾಣವಾದರೆ ಪಾಲ್ತಾಡಿ, ಮಣಿಕ್ಕರ, ಸವಣೂರು, ಪುಣcಪ್ಪಾಡಿ, ಕಾಣಿಯೂರು, ಬೆಳಂದೂರು, ಕುದ್ಮಾರು ಭಾಗದ ಸಿಡಿಲಿನ ತೀವ್ರತೆಯನ್ನು ತಡೆ ಹಿಡಿಯುವ ಶಕ್ತಿ ಹೊಂದಿರುತ್ತದೆ. ಟವರ್‌ ನಿರ್ಮಾಣಕ್ಕೆ ಲಕ್ಷಾಂತರ ರೂ. ಆವಶ್ಯಕತೆ ಇರುವುದರಿಂದ ಇದು ಸರಕಾರಿ ಮಟ್ಟದಲ್ಲೇ ನಡೆಯಬೇಕಾದ ಕಾಮಗಾರಿ.

ಈ ಬಾರಿ ನಿರ್ಮಾಣವಾಗಬಹುದೇ?
ಈ ಬಾರಿಯ ಮಳೆಗಾಲಕ್ಕೆ ಮುನ್ನ ಟವರ್‌ ನಿರ್ಮಾಣ ಕಾಮಗಾರಿ ನಡೆಸಲು ಜನಪ್ರತಿನಿಧಿಗಳು, ಶಾಸಕರು, ಸಚಿವರು ಗಮನಹರಿಸಬೇಕಿದೆ.

Advertisement

ಪ್ರಸ್ತಾವನೆ ಮಾತ್ರ
2015ರಲ್ಲಿ ಪುತ್ತೂರು ತಾಲೂಕಿನಲ್ಲಿ ಕಾಣಿಯೂರು, ಪಾಲ್ತಾಡಿ, ನರಿಮೊಗರು, ಈಶ್ವರ ಮಂಗಲ ಮೊದಲಾದೆಡೆ ಸಿಡಿಲಾಘಾತಕ್ಕೆ 10 ಮಂದಿಗೂ ಅಧಿಕ ಮಂದಿ ಬಲಿಯಾಗಿದ್ದರು. ಇದನ್ನು ಮನಗಂಡ ಇಲಾಖೆ ಟವರ್‌ ನಿರ್ಮಾಣದ ಅಗತ್ಯವನ್ನು ಒತ್ತಿ ಹೇಳಿತ್ತು.ಜಿಲ್ಲೆಯ ಇನ್ನೂ ಅನೇಕ ಕಡೆಗಳಲ್ಲಿ ಟವರ್‌ ನಿರ್ಮಾಣ ಮಾಡುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಅಧಿಕಾರಿಗಳು ಸಲ್ಲಿಸಿದ ಪ್ರಸ್ತಾವನೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಕಡತದಲ್ಲೇ ಬಾಕಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next