Advertisement

ಸರ್ಕಾರಿ ಅಧೀನದ ಕಾರ್ಖಾನೆಯಲ್ಲೇ ಬಾಕಿ

06:00 AM Nov 20, 2018 | Team Udayavani |

ಬಾಗಲಕೋಟೆ: ಖಾಸಗಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿನ ಬಾಕಿ ಉಳಿಸಿಕೊಂಡಿದ್ದು ಇದಕ್ಕಾಗಿ ಹೋರಾಟ ನಡೆಯುತ್ತಿದ್ದರೆ, ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ಕಾರ್ಖಾನೆಯೊಂದು ಎರಡು ವರ್ಷಗಳಿಂದ ರೈತರಿಗೆ ಕಬ್ಬಿನ ಬಾಕಿ ಉಳಿಸಿಕೊಂಡಿದೆ.

Advertisement

ಜಿಲ್ಲೆಯಲ್ಲಿ ಒಟ್ಟು 14 ಸಕ್ಕರೆ ಕಾರ್ಖಾನೆಗಳಿದ್ದು ಅದರಲ್ಲಿ 2 ಕಾರ್ಖಾನೆಗಳು ಹಲವು ಕಾರಣಗಳಿಂದ ಕಬ್ಬು ನುರಿಸುವುದನ್ನು ಸ್ಥಗಿತಗೊಳಿಸಿವೆ. ಸದ್ಯ 12 ಸಕ್ಕರೆ ಕಾರ್ಖಾನೆಗಳು ಚಾಲ್ತಿಯಲ್ಲಿವೆ. ಅದರಲ್ಲಿ ನಿರಾಣಿ ಅವರ ಒಡೆತನದ (ಕುಳಗೇರಿ ಕ್ರಾಸ್‌) ಹೊಸ ಕಾರ್ಖಾನೆ ಈ ವರ್ಷ ಕಬ್ಬು ನುರಿಸುವುದು ಆರಂಭಿಸಿದೆ. ಉಳಿದ 11 ಕಾರ್ಖಾನೆಗಳು ನಿರಂತರ ಚಾಲ್ತಿಯಿದ್ದು, ಅದರಲ್ಲಿ ಒಂದು ಕಾರ್ಖಾನೆ ಸರ್ಕಾರದ ಸಹಕಾರಿ ಇಲಾಖೆಯ ಅಧೀನದಲ್ಲಿದೆ.

ರೈತರೇ ಷೇರುದಾರರಾಗಿರುವ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಗೆ ಚುನಾಯಿತ ಆಡಳಿತ ಮಂಡಳಿ ಇದ್ದು, ಬಿಜೆಪಿಯ ಹಿರಿಯ ಮುಖಂಡ ರಾಮಣ್ಣ ತಳೇವಾಡ ಅಧ್ಯಕ್ಷರಾಗಿದ್ದಾರೆ. ಆದರೆ, ಈ ಸಹಕಾರಿ ಕಾರ್ಖಾನೆಯೂ ಖಾಸಗಿ ಸಕ್ಕರೆ ಕಾರ್ಖಾನೆಗಳೊಂದಿಗೆ ಕೂಡಿದೆ ಎಂಬ ಆರೋಪ ಕೆಲವರದ್ದು. ಪಕ್ಕದ ವಿಜಯಪುರ ಜಿಲ್ಲೆಯಲ್ಲೂ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಿದೆ. ಇಲ್ಲೂ ರೈತರು ಷೇರುದಾರರಿದ್ದು, ಚುನಾಯಿತ ಆಡಳಿತ ಮಂಡಳಿಯಿದೆ. ಈ ಕಾರ್ಖಾನೆ ಕಬ್ಬು ಹಂಗಾಮು ಆರಂಭಿಸುವ ಮುನ್ನ ಕಬ್ಬು ಬೆಳೆಗಾರರ ಸಭೆ ನಡೆಸುತ್ತದೆ. ಎಲ್ಲರ ಅಭಿಪ್ರಾಯ ಪಡೆದು ಬೆಲೆ ಘೋಷಣೆ ಮಾಡುತ್ತಾರೆ. ಆದರೆ, ನಮ್ಮ ಜಿಲ್ಲೆಯಲ್ಲೂ ಇರುವ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ, ನಂದಿ ಕಾರ್ಖಾನೆ ಮಾದರಿ ಏಕೆ ಕಾರ್ಯ ನಿರ್ವಹಿಸುತ್ತಿಲ್ಲ. ಕಬ್ಬು ನುರಿಸುವ ಹಂಗಾಮು ಆರಂಭಿಸುವ ಮುನ್ನ ರೈತರ ಸಭೆ ನಡೆಸುವುದಿಲ್ಲ. ರೈತರಿಗೆ ಯೋಗ್ಯ ಬೆಲೆ ನೀಡುತ್ತಿಲ್ಲವೆಂಬ ಆರೋಪ ಷೇರುದಾರರಾಗಿರುವ ರೈತರದ್ದು.

10 ಕೋಟಿ ಬಾಕಿ: ಜಿಲ್ಲೆಯ ಖಾಸಗಿ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆ ಎಂಬುದು ರೈತರ ಲೆಕ್ಕ. ರೈತರೇ ಹೇಳುವ ಪ್ರಕಾರ, ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯೂ 2 ವರ್ಷದಿಂದ ಬಾಕಿ ಉಳಿಸಿಕೊಂಡಿದೆ. 2016-17ನೇ ಸಾಲಿಗೆ 2.88 ಕೋಟಿ ಹಾಗೂ 2017-18ನೇ ಸಾಲಿಗೆ 7.73 ಕೋಟಿ ಸೇರಿ ಒಟ್ಟು 10.61 ಕೋಟಿ ಬಾಕಿ ಉಳಿಸಿಕೊಂಡಿದೆ. ಖಾಸಗಿ ಕಾರ್ಖಾನೆ ಮಾಲೀಕರು, ಲೆಕ್ಕಾಚಾರದ ಬೆಲೆ ಘೋಷಿಸಿ ಬಾಕಿ ಉಳಿಸಿಕೊಳ್ಳುವುದು ಸಾಮಾನ್ಯ. ಆದರೆ, ಸರ್ಕಾರದ ಅಧೀನದಲ್ಲಿ ಬರುವ ಈ ಕಾರ್ಖಾನೆಯೂ ರೈತರ ಬಾಕಿ ಏಕೆ ಉಳಿಸಿಕೊಂಡಿದೆ ಎಂಬುದು ರೈತರ ಪ್ರಶ್ನೆ.

285 ಕೋಟಿ ಬಾಕಿ: ಜಿಲ್ಲೆಯ ಐದು ಸಕ್ಕರೆ ಕಾರ್ಖಾನೆಗಳು 2016-17ನೇ ಸಾಲಿಗೆ 66.58 ಕೋಟಿ ಹಾಗೂ 10 ಕಾರ್ಖಾನೆಗಳು 2017-18ನೇ ಸಾಲಿಗೆ 219 ಕೋಟಿ ಸೇರಿ ಒಟ್ಟು ಎರಡು ವರ್ಷಗಳಲ್ಲಿ  285.58 ಕೋಟಿ ಬಾಕಿ ಉಳಿಸಿಕೊಂಡಿವೆ.

Advertisement

ರಾಜಕಾರಣಿಗಳೇ ಒಡೆಯರು
ಜಿಲ್ಲೆಯ ಒಟ್ಟು 14 ಕಾರ್ಖಾನೆಗಳ ಪೈಕಿ ಬಾದಾಮಿಯ ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರ ಬಾದಾಮಿ ಶುಗರ್ ಮತ್ತು ಇದೇ ತಾಲೂಕಿನ ಕೆರಕಲಮಟ್ಟಿಯ ಕೇದಾರನಾಥ ಶುಗರ್ ಸ್ಥಗಿತಗೊಂಡಿವೆ. ಇನ್ನುಳಿದ 12 ಕಾರ್ಖಾನೆಗಳು ರಾಜಕೀಯ ನಾಯಕರ ಒಡೆತನದಲ್ಲಿವೆ.

ರೈತರ ಹಿತಾಸಕ್ತಿಯೇ ನಮಗೆ ಮುಖ್ಯ. ಕಬ್ಬು ನುರಿಸುವುದನ್ನು ಆರಂಭಿಸಲು ರೈತರೇ ಒತ್ತಾಯಿಸಿದ್ದರು. ಈಗ ಕೆಲವು ರೈತರು ಸ್ಥಗಿತಗೊಳಿಸಲು ಒತ್ತಾಯಿಸಿದ್ದಾರೆ. ಹೀಗಾಗಿ ರೈತರಿಗೆ ಹಾನಿಯಾಗಬಾರದೆಂಬ ಉದ್ದೇಶದಿಂದ ಈಗಾಗಲೇ ಕಟಾವು ಮಾಡಿದ 300 ಲೋಡ್‌ನ‌ಷ್ಟಿರುವ ಕಬ್ಬು ನುರಿಸಿ, ಸ್ಥಗಿತಗೊಳಿಸಲಾಗುವುದು.
– ರಾಮಣ್ಣ ತಳೇವಾಡ, ಅಧ್ಯಕ್ಷರು, ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next