Advertisement

ಪೇಟೆಗೆ ಬರಲು ಹೊಳೆ ದಾಟುವುದೇ ಕಷ್ಟ !

09:19 PM Jul 22, 2021 | Team Udayavani |

ಕುಂದಾಪುರ: ಹಂಗಳೂರಿನ ವಿನಾಯಕ ಥಿಯೇಟರ್‌ ಬಳಿಯಿಂದ ಕೋಡಿ ಪ್ರದೇಶಕ್ಕೆ ಹೋಗುವ ರಸ್ತೆಯಲ್ಲಿ ನಡೆಯಬೇಕಿದ್ದ ಸೇತುವೆ ಕಾಮಗಾರಿ ನಡೆಯದ ಕಾರಣ ಆ ಭಾಗದ ಜನರು ನಿರ್ಬಂಧಿತರಾಗಿದ್ದಾರೆ. ತಾತ್ಕಾಲಿಕವಾಗಿ ಮಾಡಿಕೊಟ್ಟ ರಸ್ತೆಯನ್ನು ಮಳೆಯ ಕಾರಣದಿಂದ ತೆರವು ಮಾಡಲಾಗಿದ್ದು ಜನ ಹೊಳೆ ದಾಟಿಕೊಂಡು ಬರಬೇಕಾದ ಸ್ಥಿತಿ ಇದೆ.

Advertisement

ಕೋಟಿ ರೂ.ಗಳ ಕೋಡಿ ಸೇತುವೆ:

ಕೋಡಿ ಭಾಗಕ್ಕೆ ಎರಡು ಸೇತುವೆಗಳು 2 ಕೋ.ರೂ. ವೆಚ್ಚದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮೂಲಕ ಮಂಜೂರಾಗಿದೆ. ಕಾಮಗಾರಿ ಮಾರ್ಚ್‌ ವೇಳೆಗೆ ಮುಗಿದು ಜನರ, ವಾಹನಗಳ ಓಡಾಟಕ್ಕೆ ದೊರೆಯಬೇಕಿತ್ತು. ಆದರೆ ಕಾಮಗಾರಿ ಸಂದರ್ಭ ಸಮೀಪದ ಮನೆಗಳಿಗೆ ತೊಂದರೆಯಾಗುತ್ತಿದೆ ಎಂದು ಕಾಮಗಾರಿಯ ನೀಲನಕಾಶೆಯಲ್ಲೇ ಬದಲಾವಣೆ ಮಾಡಲಾಯಿತು. ಅದಾದ ಬಳಿಕ ಒಂದು ಬಾರಿ ಮಾಡಿದ ಕಾಮಗಾರಿಯನ್ನು ಇಲಾಖೆ ಇನ್ನಷ್ಟು ಗಟ್ಟಿಯಾಗಿ ನಿರ್ಮಿಸಬೇಕೆಂದು ಅಗೆದು ತೆಗೆಸಿ ಹಾಕಿತು. ಆ ಕಾರಣದಿಂದ ವಿಳಂಬ ಆದರೂ ಕಾಮಗಾರಿಯ ಬಾಳಿಕೆ ಹೆಚ್ಚು ಬರುತ್ತದೆ ಎಂದು ಗುಣಮಟ್ಟದ ಕಾಮಗಾರಿಯ ಕಾಳಜಿಗಾಗಿ ಇಲಾಖೆಯ ಮೇಲೆ ಜನ ಹೆಚ್ಚಿನ ವಿಶ್ವಾಸ ಇಟ್ಟರು. ಆದರೆ ಅನಂತರದ ದಿನಗಳಲ್ಲಿ ಕಾಮಗಾರಿ ವೇಗ ಪಡೆದುಕೊಳ್ಳಲೇ ಇಲ್ಲ

ಅಪೂರ್ಣ:

ಒಂದು ಸೇತುವೆಯ ಸ್ಲಾéಬ್‌ ಕಾಮಗಾರಿ ಪೂರ್ಣವಾಗಿದೆ. ಅದರಿಂದ ರಸ್ತೆಗೆ  ಸಂಪರ್ಕ ಒದಗಿಸಿಲ್ಲ. ಇನ್ನೊಂದು ಸೇತುವೆಯ ಪಿಲ್ಲರ್‌ ಕಾರ್ಯ ಕೂಡ ಆಗಿಲ್ಲ. ಕಲ್ಲು ಒಡೆಯುವ ಕೆಲಸವೇ ಬಾಕಿ ಇದೆ. ಆದರೆ ರಸ್ತೆ ಅಗೆತ ಆಗಿದೆ. ವಾಹನಗಳ ಓಡಾಟಕ್ಕೆಂದು ತಾತ್ಕಾಲಿಕವಾಗಿ ಪೈಪ್‌ ಅಳವಡಿಸಿ ವ್ಯವಸ್ಥೆ ಮಾಡಿಕೊಡಲಾಗಿತ್ತು. ಬಸ್‌ ಸಂಚಾರ ಹಾಗೂ ಘನ ವಾಹನಗಳು ನಿರ್ಬಂಧಿತವಾದ ಕಾರಣ ಇದರ ಮೂಲಕ ರಿಕ್ಷಾಗಳು ಹಾಗೂ ಇತರ ವಾಹನಗಳು ಸಂಚರಿಸುತ್ತಿದ್ದವು. ಕೋಡಿ ಭಾಗಕ್ಕೆ ಸೀವಾಕ್‌, ಸಮುದ್ರ ತೀರ ಸೇರಿದಂತೆ ಪ್ರವಾಸಿಗರನ್ನು ಕರೆದೊಯ್ಯಲು ರಿಕ್ಷಾಗಳಿಗೂ ಇದೇ ಆಧಾರವಾಗಿತ್ತು.

Advertisement

ತೆರವು:

ಇಲ್ಲಿ ತಾತ್ಕಾಲಿಕ ಮೋರಿ ನಿರ್ಮಿಸಿದ ಕಾರಣ ಈ ಭಾಗದ ಜನರಿಗೇನೋ  ಅನುಕೂಲವಾಯಿತು. ಆದರೆ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿರುತ್ತದೆ. ತಡೆ ಒಡ್ಡಿದರೆ ಕೋಟೇಶ್ವರ, ಬೀಜಾಡಿ ಭಾಗದ ಗದ್ದೆಗಳು ಮುಳುಗಡೆ ಯಾಗುತ್ತದೆ. ಆಗ ಅನಿವಾರ್ಯವಾಗಿ ತಡೆಯನ್ನು ತೆರವುಗೊಳಿಸಿ ನೀರಿನ ಹರಿವನ್ನು ಸುಗಮಗೊಳಿಸಬೇಕಾ ಗುತ್ತದೆ. ತಡೆ ತೆರವಾದಾಗ ಯಾವುದೇ ವಾಹನಗಳು/ಜನ ಹೊಳೆ ದಾಟಲು ಇಲ್ಲಿ ಪರ್ಯಾಯವೇ ಇಲ್ಲ.

ರೈತರ ಆಗ್ರಹ:

ಕೋಡಿ, ಹಂಗಳೂರು ಭಾಗದ ಜನರು ತಾತ್ಕಾಲಿಕ ಮೋರಿ ನಿರ್ಮಿಸಿ ಹೊಳೆ ದಾಟಲು ವ್ಯವಸ್ಥೆ ಮಾಡಿಕೊಡಿ ಎಂದು ಆಗ್ರ ಹಿಸಿದ್ದಾರೆ. ಯಾವುದೇ ಕಾರಣಕ್ಕೂ ಹರಿಯುವ ನೀರಿಗೆ ತಡೆ ಒಡ್ಡಬೇಡಿ, ಕಷ್ಟಪಟ್ಟು ಮಾಡಿದ ಕೃಷಿ ನಾಶವಾಗುತ್ತದೆ ಎಂದು ಕೋಟೇಶ್ವರ, ಬೀಜಾಡಿ ಭಾಗದ ರೈತರು ಆಗ್ರಹಿಸಿದ್ದಾರೆ. ಇದೇ ಕಾರಣಕ್ಕೆ ರವಿವಾರ ಒಂದಷ್ಟು  ಜನ ಸೇರಿ ಮಾತಿನ ಚಕಮಕಿಯೂ ನಡೆದಿತ್ತು. ಪೊಲೀಸರು, ಅಧಿಕಾರಿಗಳು ಭೇಟಿ ನೀಡುವಂತಾಯಿತು.

ಹೊಳೆಯಲ್ಲಿ  ಸಂಚಾರ ಅನಿವಾರ್ಯ :

ಪಾದಚಾರಿಗಳು ಹೊಳೆ ದಾಟಿ ಬರುತ್ತಾರೆ. ನೀರಿನ ಹರಿವು ಹೆಚ್ಚಿದ್ದಾಗ ಇದು ಅಪಾಯಕ್ಕೆ ದಾರಿ. ಅಷ್ಟಲ್ಲದೆ ಕೆಲವರು ದ್ವಿಚಕ್ರ ವಾಹನಗಳು, ಸೈಕಲ್‌ ಮೊದಲಾದವನ್ನೂ ದಾಟಿಸುತ್ತಾರೆ. ಬೇರೆಲ್ಲ ವಾಹನಗಳೂ ಕೋಟೇಶ್ವರದ ಸಮೀಪ ಇರುವ ಎಂಕೋಡಿ ರಸ್ತೆ ಮೂಲಕ ಅಥವಾ ಕುಂದಾಪುರ ಚರ್ಚ್‌ ರಸ್ತೆ ಮೂಲಕ ಕೋಡಿಗೆ ಹೋಗಬೇಕು. ಈ ಅನನುಕೂಲ ಸದ್ಯದ ಮಾಹಿತಿ ಪ್ರಕಾರ ಇನ್ನೂ ಒಂದು ತಿಂಗಳು ಮುಂದುವರಿಯಲಿದೆ. ಕಾಮಗಾರಿ ವೇಗ ಪಡೆಯುತ್ತಿದ್ದರೆ ಈ ಮಳೆಗಾಲದಲ್ಲಿ ಜನರಿಗೆ ಈ ತಾಪತ್ರಯ ಇರುತ್ತಿರಲಿಲ್ಲ. ವಿಳಂಬದ ಕಾರಣ ದಿಂದಾಗಿ ಜನ ಸಂಕಷ್ಟ ಪಡುವಂತಾಗಿದೆ.

ಮಳೆ ಕಡಿಮೆಯಾದ ಬಳಿಕ ಅಥವಾ 1 ವಾರದ ಅನಂತರ ತಾತ್ಕಾಲಿಕವಾಗಿ ಮೋರಿ ಮಾಡಿ ಓಡಾಟಕ್ಕೆ ವ್ಯವಸ್ಥೆ ಮಾಡಲಾಗುವುದು. ಆ.15ರ ಅನಂತರ ಕಾಮಗಾರಿ ಆರಂಭವಾಗಲಿದ್ದು ಮುಕ್ಕಾಲಂಶ ಆದ ಸೇತುವೆ ಪೂರ್ಣವಾಗಲಿದೆ. ಬಾಕಿ ಉಳಿದ ಸೇತುವೆಯ ಕಾಮಗಾರಿಗೆ ಚಾಲನೆ ದೊರೆಯಲಿದೆ. ಕಾಮಗಾರಿ ಆರಂಭವಾದರೆ  50 ದಿನಗಳ ಅವಧಿ ಸಾಲುತ್ತದೆ.  ಹರ್ಷವರ್ಧನ, ಸಹಾಯಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಕುಂದಾಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next