Advertisement

ಕೊರೊನಾ ನೆಗೆಟಿವ್‌ ದೃಢಪತ್ರವಿಲ್ಲದೆ ಸಮುದ್ರದಲ್ಲೇ ಬಾಕಿ!

12:43 AM Mar 17, 2020 | mahesh |

ಮಂಗಳೂರು: ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡ್‌ ಬಂದರಿನಲ್ಲಿ “ಗ್ರ್ಯಾಂಡ್‌ ಪ್ರಿನ್ಸೆಸ್‌- ಯುಎಸ್‌ಎ’ ಎನ್ನುವ ಹಡಗಿನಲ್ಲಿ ಕೆಲಸ ಮಾಡುತ್ತಿರುವ ಮಂಗಳೂರು ಮೂಲದ ಇಬ್ಬರು ಯುವಕರು ಸಹಿತ 131 ಮಂದಿ ಭಾರತೀಯರು ಭಾರತಕ್ಕೆ ಮರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮನ್ನು ಕೂಡಲೇ ಹಡಗಿನಿಂದ ರಕ್ಷಣೆ ಮಾಡುವುದಕ್ಕೆ ತುರ್ತು ಕ್ರಮವನ್ನು ಭಾರತ ಸರಕಾರ ಕೈಗೊಳ್ಳುವಂತೆ ಕೋರಿ ತುಳು ಹಾಗೂ ಹಿಂದಿ ಭಾಷೆಯಲ್ಲಿ ಆಡಿಯೋ ಹಾಗೂ ವೀಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ರವಾನಿಸಿದ್ದಾರೆ.

Advertisement

ಪ್ರಮಾಣಪತ್ರವಿಲ್ಲದೆ ಸಮಸ್ಯೆ
ಮಂಗಳೂರಿನ ನಟೇಶ್‌ ಮತ್ತು ಇನ್ನೋರ್ವ ಯುವಕ ಒಂದೂವರೆ ವರ್ಷಗಳಿಂದ ಯುಎಸ್‌ಎಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೊಂದಿಗೆ ವಿವಿಧ ರಾಜ್ಯಗಳ ಇತರ 130 ಮಂದಿ ಉದ್ಯೋಗದಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿರುವ ಕೊರೊನಾದಿಂದಾಗಿ ಇವರೊಂದಿಗೆ ಕೆಲಸ ಮಾಡುತ್ತಿದ್ದ ಇತರ ದೇಶಗಳ ಯುವಕರನ್ನು ಅವರ ದೇಶದ ಸರಕಾರಗಳು ಸ್ವದೇಶಕ್ಕೆ ಕರೆಸಿಕೊಂಡಿವೆ. ಆದರೆ ಭಾರತ ಸರಕಾರವು ಭಾರತದ ಯುವಕರನ್ನು ಸ್ವದೇಶಕ್ಕೆ ಕರೆಸಿಕೊಳ್ಳಲು ಕೊರೊನಾ ನೆಗೆಟಿವ್‌ ದೃಢಪಡಿಸುವ ವೈದ್ಯಕೀಯ ಪ್ರಮಾಣಪತ್ರ ಬೇಕೆಂದು ಕೇಳುತ್ತಿರುವುದರಿಂದ ಯುವಕರು ಸಂಕಷ್ಟಕ್ಕೊಳಗಾಗಿದ್ದಾರೆ.

ಭಾರತಕ್ಕೆ ಮರಳಲು ಸೋಮವಾರ ವಿಮಾನ ನಿಲ್ದಾಣಕ್ಕೆ ತೆರಳುವ ಬಸ್‌ನಲ್ಲಿ ಕುಳಿತಿದ್ದ ಯುವಕರನ್ನು ಭಾರತ ಸರಕಾರಕ್ಕೆ ಕೊರೊನಾ ನೆಗೆಟಿವ್‌ ಎಂದು ಸಾಬೀತುಪಡಿಸುವ ದೃಢಪತ್ರ ಬೇಕೆಂಬ ಕಾರಣಕ್ಕೆ ಮತ್ತೆ ಹಿಂದೆ ಕರೆಸಲಾಗಿದೆ. ಯುಎಸ್‌ಎಯಲ್ಲಿ ತಪಾಸಣೆ ಮಾಡಲಾಗುತ್ತಿದೆ, ಇಂತಹ ಪ್ರಮಾಣಪತ್ರ ನೀಡುವುದಿಲ್ಲ ಎಂದು ಯುಎಸ್‌ಎ ಸರಕಾರ ಹೇಳಿದೆ. ಆದರೆ ಭಾರತ ಸರಕಾರ ಪ್ರಮಾಣಪತ್ರ ಬೇಕೆಂದು ಕೇಳುತ್ತಿರುವುದರಿಂದ ನಾವು ಸಂಕಷ್ಟಕ್ಕೊಳಗಾಗಿದ್ದೇವೆ. ಭಾರತಕ್ಕೆ ಬರುವ ಬಗ್ಗೆ ದಾರಿ ತಿಳಿಯುತ್ತಿಲ್ಲ ಎಂದು ಆಡಿಯೋ ಮತ್ತು ವೀಡಿಯೋ ಮಾಡಿ ಯುವಕರು ಅಲವತ್ತುಕೊಂಡಿದ್ದಾರೆ.

ಶಿಪ್‌ನಲ್ಲಿ ಬಂದಿಯಾಗುತ್ತೇವೆ!
“ನಾವು ಕೆಲಸ ಮಾಡುತ್ತಿರುವ ಹಡಗು ಮಂಗಳವಾರ ಸಂಜೆ ಓಕ್‌ಲ್ಯಾಂಡ್‌ ಬಂದರಿನಿಂದ ಹೊರಟು 70 ಕಿ.ಮೀ. ದೂರದಲ್ಲಿ ಪ್ರತ್ಯೇಕಿಸಿ ನಿಲುಗಡೆ ಮಾಡಲಾಗುತ್ತದೆ. ಈಗ ಈ ಶಿಪ್‌ನಲ್ಲಿದ್ದು, ಶಿಪ್‌ ಹೊರಟ ಮೇಲೆ 14 ದಿನ ಅದರಿಂದ ಹೊರಗಡೆ ಬರದಂತೆ ಬಂದಿ ಮಾಡಲಾಗುತ್ತದೆ. ಆ ನಂತರದಲ್ಲಿ ನಮ್ಮನ್ನು ಸಂಪರ್ಕಿ ಸುವುದಕ್ಕೂ ಕಷ್ಟವಾಗಲಿದೆ. ಹೀಗಾಗಿ ಮಂಗಳವಾರ ಶಿಪ್‌ ಹೊರಡುವು ದರೊಳಗೆ ಭಾರತ ಸರಕಾರವು ಇಲ್ಲಿಂದ ರಕ್ಷಿಸುವುದಕ್ಕೆ ತುರ್ತು ಕ್ರಮ ತೆಗೆದುಕೊಳ್ಳಬೇಕೆಂದು’ ಆ ಯುವಕರು ವೀಡಿಯೋದಲ್ಲಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಸರಕಾರದ ಎಲ್ಲ ಪ್ರತಿನಿಧಿಗಳಿಗೆ ಈ ಬಗ್ಗೆ ವೀಡಿಯೋ, ಆಡಿಯೋ, ಟ್ವೀಟರ್‌ ಸಹಿತ ಸಾಮಾಜಿಕ ತಾಣಗಳಲ್ಲಿ ಮಾಹಿತಿ ಹಾಕಿ ಗಮನಕ್ಕೆ ತಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next