Advertisement

ನೋಂದಣಿ ನೆಪವೊಡ್ಡಿಕ್ಲೇಮ್‌ ತಿರಸ್ಕರಿಸಿದ್ದಕ್ಕೆದಂಡ; ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ

04:48 PM Mar 03, 2023 | Team Udayavani |

ಧಾರವಾಡ: ಆಕಸ್ಮಿಕ ಬೆಂಕಿ ಅವಘಡದಲ್ಲಿ ಸುಟ್ಟು ಹೋದ ಬೈಕ್‌ಗೆ ಕಾಯಂ ನೋಂದಣಿ ಆಗದ ನೆಪವೊಡ್ಡಿ ಕ್ಲೇಮ್‌ ತಿರಸ್ಕರಿಸಿದ ನ್ಯೂ ಇಂಡಿಯಾ ಅಸುರೆನ್ಸ್‌ ಕಂಪನಿ ದಂಡದ ಜತೆಗೆ ಕ್ಲೇಮ್‌ ಹಣ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗ ಸೂಚಿಸಿದೆ.

Advertisement

ಮುಂಬೈನ ಅಂಜನ್‌ ಅಟೋಮೆಟಿವ್‌ ಡೀಲ್‌ರಿಂದ ಕವಾಸಾಕಿ ಕಂಪನಿಯ ಕವಾಸಾಕಿ-900 ಸುಪರ್‌ ಬೈಕ್‌ನ್ನು ಹುಬ್ಬಳ್ಳಿ ವಿದ್ಯಾನಗರದ ನಿವಾಸಿ ತುಷಾರ ಪವಾರ ಅವರು 13-05-2021 ರಂದು 14,99,000 ರೂ.ಹಣ ನೀಡಿ ಖರೀದಿಸಿದ್ದರು. ಆ ಬೈಕ್‌ಗೆ 39,006 ಪ್ರೀಮಿಯಮ್‌ ಕಟ್ಟಿ ನ್ಯೂ ಇಂಡಿಯಾ ಅಸುರೆನ್ಸ್‌ ಕಂಪನಿಯಿಂದ ವಿಮೆ ಮಾಡಿಸಿದ್ದರು. ಆ ವಾಹನಕ್ಕೆ ಮುಂಬೈನ ಪಶ್ಚಿಮ ಆರ್‌ಟಿಒ ಕಚೇರಿಯಿಂದ ಟೆಂಪರವರಿ ರೆಜಿಸ್ಟ್ರೇಷನ್‌ ಸಹ ಆಗಿತ್ತು. ಒಂದು ತಿಂಗಳೊಳಗೆ ಆ ಬೈಕ್‌ಗೆ ಕಾಯಂ ರೆಜಿಸ್ಟ್ರೇಷನ್‌ ಮಾಡಿಸಬೇಕಿತ್ತು.

ಆದರೆ ಅದೇ ಸಮಯಕ್ಕೆ ಕೋವಿಡ್‌-19 ಬಂದು ಪೂರ್ತಿ ಲಾಕ್‌ಡೌನ್‌ ಆಗಿದ್ದರಿಂದ ಆರ್‌ಟಿಒ ಮತ್ತು ಇತರೆ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಹೀಗಾಗಿ ಬೈಕ್‌ಗೆ ಕಾಯಂ ನೋಂದಣಿ ಆಗಿರಲಿಲ್ಲ. ಈ ಮಧ್ಯೆ 27-08-2021ರಂದು ಆ ಬೈಕ್‌ಗೆ ಆಕಸ್ಮಿಕ ಬೆಂಕಿ ತಗುಲಿ, ಅದು ಸುಟ್ಟು ಹೋಯಿತು. ಬೈಕ್‌ನ ಮೇಲೆ ವಿಮೆ ಚಾಲ್ತಿಯಿದ್ದುದರಿಂದ ಅದರ ಮೌಲ್ಯ 14,99,000 ತನಗೆ ನೀಡುವಂತೆ ಇನ್ಸಶೂರೆನ್ಸ್‌ ಕಂಪನಿಗೆ ಕ್ಲೇಮ ಅರ್ಜಿ ಹಾಕಲಾಗಿತ್ತು. ಆದರೆ ಕ್ಲೇಮನ್ನು ವಿಮಾ ಕಂಪನಿ ತಿರಸ್ಕರಿಸಿತ್ತು. ಈ ನಡೆ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು.

ಈ ದೂರಿಗೆ ಪ್ರತಿಯಾಗಿ ಬೈಕ್‌ಗೆ ಘಟನಾ ದಿನದಂದು ಕಾಯಂ ನೋಂದಣಿ ಆಗಿರಲಿಲ್ಲ ಆದ್ದರಿಂದ ಅದು ವಿಮಾ ಪಾಲಸಿಯ ಷರತ್ತು ಉಲ್ಲಂಘಿಸಿದಂತಾಗುತ್ತದೆ ಅನ್ನುವ ಕಾರಣದ ಮೇಲೆ ಕ್ಲೇಮ್‌ ಅನ್ನು ವಜಾ ಮಾಡಿರುವುದಾಗಿ ಹೇಳಿ ವಿಮಾ ಕಂಪನಿಯ ಆಕ್ಷೇಪಣೆಯನ್ನು ಆಯೋಗಕ್ಕೆ ಸಲ್ಲಿಸಿತ್ತು. ಈ ದೂರು ಮತ್ತು ಆಕ್ಷೇಪಣೆ ವಿಚಾರಣೆ ಕೈಗೊಂಡ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿ.ಅ.ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಒಳಗೊಂಡ ಆಯೋಗ ಕೋವಿಡ್‌-19 ಲಾಕ್‌ಡೌನ್‌ ಅವಧಿಯಲ್ಲಿ ಆರ್‌ ಟಿಒ ಕಚೇರಿಗೆ ಬಂದು ವಾಹನ ನೋಂದಣಿ ಮಾಡಿಸುವುದು ಅಸಾಧ್ಯವಾಗಿತ್ತು.

ಹೀಗಾಗಿ 2020 ಮಾರ್ಚ್‌ದಿಂದ 2021 ಅಕ್ಟೋಬರ್‌ ವರೆಗೆ ವಾಹನಗಳ ನೋಂದಣಿ ಪ್ರಕ್ರಿಯೆಯನ್ನು ವಿಸ್ತರಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಆದೇಶ ಹೊರಡಿಸಿವೆ. ಈ ಅವ ಧಿಯಲ್ಲಿ ಬೈಕ್‌ ಸುಟ್ಟು ಅವರಿಗೆ ನಷ್ಟ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಸರ್ಕಾರದ ಆದೇಶಗಳನ್ವಯ ಘಟನಾ ದಿನದಂದು ಆ ಬೈಕ್‌ಗೆ ವಾಹನ ನೋಂದಣಿ ಇತ್ತು.

Advertisement

ಆ ಬೈಕ್‌ನ ಪೂರ್ತಿ ಮೌಲ್ಯ 14,99,000 ಹಣವನ್ನು ಪರಿಹಾರವಾಗಿ ನೀಡದೇ ವಿಮಾ ಕಂಪನಿ ಸೇವಾ ನ್ಯೂನತೆ ಎಸಗಿದೆ ಎಂದು ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಇದಲ್ಲದೇ ಬೈಕ್‌ನ ಪೂರ್ತಿ ಮೌಲ್ಯ 14,99,000 ರೂ.ಗಳ ಪರಿಹಾರ ಮತ್ತು ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ 50,000 ರೂ. ಪರಿಹಾರ, ಪ್ರಕರಣದ ಖರ್ಚು ವೆಚ್ಚ 10,000 ರೂ.ಗಳನ್ನು ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ನೀಡುವಂತೆ ವಿಮಾ
ಕಂಪನಿಗೆ ಆಯೋಗವು ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next