ಬೆಂಗಳೂರು: ಮುಂಬೈನ ತಾಜ್ ಹೋಟೆಲ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯ ತಡೆಯಲು ವಿಫಲರಾದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ಇದೇ ವೇಳೆ ಅರ್ಜಿದಾರ ಟಿಡಿಆರ್ ಹರಿಶ್ಚಂದ್ರ ಗೌಡ ಎಂಬುವರಿಗೆ 5 ಸಾವಿರ ದಂಡ ವಿಧಿಸಿರುವ ನ್ಯಾಯಾಲಯ, ದಂಡದ ಮೊತ್ತವನ್ನು ಮುಂದಿನ 30 ದಿನಗಳ ಒಳಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವಂತೆ ಆದೇಶಿಸಿದೆ.
ಗುರುವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ಪೀಠ, ಈ ಅರ್ಜಿ ನೈಜ ಸಾಮಾಜಿಕ ಕಾಳಜಿ ಹೊಂದಿಲ್ಲ ಎಂದು ಅಭಿಪ್ರಾಯಪಟ್ಟಿತು. ಅರ್ಜಿದಾರರು ಈ ಹಿಂದೆ ಕೂಡ ಅನಗತ್ಯ ಹಾಗೂ ಸಾಮಾಜಿಕ ಕಾಳಜಿ ಇಲ್ಲದ ಪಿಐಎಲ್ ಗಳನ್ನು ಸಲ್ಲಿಸಿದ್ದ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಇಂತಹ ಪಿಐಎಲ್ ಸಲ್ಲಿಸುವುದಿಲ್ಲ ಎಂದು ಹರಿಶ್ಚಂದ್ರಗೌಡ ಅವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿತು.
ಪೂಜೆ ಮಾಡಿದರೆ ಸ್ಫೋಟವಿಲ್ಲ!: ವಿಚಾರಣೆ ವೇಳೆ ಸ್ವತಃ ವಾದಿಸಿದ ಹರಿಶ್ಚಂದ್ರಗೌಡ, “ಮುಂಬೈನಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದಕರು ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆಯಿದೆ. ಮಹರಾಷ್ಟ್ರದ ಅಂದಿನ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್, ಶಿವಮೊಗ್ಗ ಜಿಲ್ಲೆಯ ತುಡೂರಿನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರೆ ಯಾವುದೇ ಸ್ಫೋಟ ಸಂಭವಿಸುವುದಿಲ್ಲ ಎಂದು ಅಂದಿನ ಕೇಂದ್ರ ರಕ್ಷಣಾ ಸಚಿವರು ಹಾಗೂ ಇತರರಿಗೆ 2005ರ ನ.26ರಂದು ಪತ್ರ ಬರೆದಿದ್ದೆ. ಆದರೆ. ಈ ಪತ್ರವನ್ನು ಆಡಳಿತ ವರ್ಗ ಗಂಭೀರವಾಗಿ ಪರಿಗಣಿಸಲಿಲ್ಲ. ನಂತರ 2008ರಲ್ಲಿ ಉಗ್ರರ ದಾಳಿ ನಡೆದು ಹಲವರು ಪ್ರಾಣ ಕಳೆದುಕೊಂಡರು. ಹೀಗಾಗಿ ಅಧಿಕಾರಿ ವರ್ಗದ ವಿರುದ್ಧ ತನಿಖೆಗೆ ಆದೇಶಿಸಬೇಕು’ ಎಂದು ಕೋರಿದರು.
ಈ ವಾದ ಆಲಿಸಿದ ನ್ಯಾಯಪಿಠ, ಈ ಪ್ರಕರಣ ಸಂಭವಿಸಿ ಹತ್ತು ವರ್ಷಗಳೇ ಕಳೆದಿವೆ. ಅಲ್ಲದೆ ಅರ್ಜಿಯೂ ಸಾರ್ವಜನಿಕ ಹಿತಾಸಕಿತ್ಯ ಅಂಶಗಳಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.