Advertisement
ಕಣ್ವತೀರ್ಥದಿಂದ ಬಂದ ಶ್ರೀರಾಮ, ವಿಠಲನ ರೂಪದಲ್ಲಿ ಶ್ರೀಕೃಷ್ಣ ಮತ್ತು ಉಡುಪಿಯ ಬಾಲಕೃಷ್ಣನಿಗೆ ಪೂಜೆ ಸಲ್ಲಿಸುವ, ಆರಾಧಿಸುವ ಅಪೂರ್ವ ಭಾಗ್ಯ ಪೇಜಾವರ ಶ್ರೀಗಳದ್ದಾಗಿತ್ತು. ಪೇಜಾವರ ಶ್ರೀಗಳು ಅಯೋಧ್ಯೆ ಚಳವಳಿಯಲ್ಲಿ ಮುಂಚೂ ಣಿಯಲ್ಲಿದ್ದವರು. 1996ರ ಡಿ. 6ರಂದು ಕಟ್ಟಡ ಕುಸಿದ ಬಳಿಕ ಅದರೊಳಗಿದ್ದ ರಾಮಲಲ್ಲಾನ ವಿಗ್ರಹವನ್ನು ಕಾರ್ಯಕರ್ತರು ಎಲ್ಲೋ ಕೊಂಡೊಯ್ದಿದ್ದರು. ಪ್ರಾಯಃ ಇದಾಗುವಾಗ ಬೆಳಗ್ಗಿನ ಜಾವ ಆಗಿತ್ತು. ಸಾವಿರಾರು ಜನರ ಜಮಾವಣೆ, ಎಲ್ಲೆಡೆ ಗಂಭೀರ ವಾತಾವರಣವಿತ್ತು. ಡಿ. 7ರ ಬೆಳಗ್ಗೆ ಪೇಜಾವರ ಶ್ರೀಗಳೂ ತರಾತುರಿಯಲ್ಲಿ ಹೋಗುವಾಗ ದಾರಿ ಮಧ್ಯೆ ಕಾರ್ಯಕರ್ತರು ಆ ವಿಗ್ರಹವನ್ನು ಮೂಲ ಸ್ಥಳದಲ್ಲಿ ಇರಿಸುವಂತೆ ಹೇಳಿದರು. ಶ್ರೀಗಳು ಘಳಿಗೆ, ಮುಹೂರ್ತ ಯಾವುದನ್ನೂ ಕಾಣದೆ ತತ್‌ಕ್ಷಣವೇ ರಾಮಮಂತ್ರವನ್ನು ಹೇಳಿ ಪ್ರತಿಷ್ಠಾಪನೆ ಮಾಡಿದರು.
1999ರ ಪ್ರಥಮೈಕಾದಶಿಯಂದು ಶ್ರೀಗಳಿಗೆ ಜ್ವರ ಬಾಧಿಸಿತ್ತು. ಬೆಂಗಳೂರಿನಲ್ಲಿ ಮಧ್ಯಾಹ್ನ ಸಾವಿರಾರು ಶಿಷ್ಯರಿಗೆ ತಪ್ತಮುದ್ರಾಧಾರಣೆ ಮಾಡಿ ಸಂಜೆ ಚೆನ್ನೈಗೆ ತೆರಳಿ ಅಲ್ಲಿಯೂ ತಪ್ತಮುದ್ರೆ ಅನುಗ್ರಹಿಸಿ ಮರುದಿನ ಬೆಳಗ್ಗೆ ಬೆಂಗಳೂರಿಗೆ ಬಂದರು. ಒಂದೆಡೆ ಜ್ವರ ಬಾಧೆ, ಇನ್ನೊಂದೆಡೆ ನಿರಶನದ ದೃಢ ದೀಕ್ಷೆ. ಇದಾಗಿ ಎರಡು ದಶಕಗಳ ಬಳಿಕ ಅದೇ ರೀತಿ ಜ್ವರ ಬಂದಿತ್ತು. ಆದರೂ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡಿದರು. 1999ರಲ್ಲಿ ಅವರ ದೇಹ ಈಗಿನಿಂದ ಹೆಚ್ಚು ದೃಢವಾಗಿತ್ತು. ಆದರೆ ಈಗ ವಯೋಸಹಜವಾಗಿ ದೇಹ ದುರ್ಬಲವಾದ ಕಾರಣ ಅಸೌಖ್ಯವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ.
Related Articles
1967ರಲ್ಲಿ ಬಿಹಾರದಲ್ಲಿ ಭೀಕರ ಬರಗಾಲ. ಕರ್ನಾಟಕದ ಮೂಲೆ ಮೂಲೆಗಳಿಂದ ಸಹಾಯ ಕೇಳಿದರು. “ದೇವರ ಕೃಪೆ ಬಯಸುವ ಸಜ್ಜನರಿಗೆ ಇದೊಂದು ಸದವಕಾಶ. ಗ್ರಹಣದಂತೆ ಇದೂ ಒಂದು ಪರ್ವಕಾಲ. ದುಃಖ ಪೀಡಿತರ ಸೇವೆ ಮಾಡಿ ಆ ಮೂಲಕ ಸರ್ವಾಂತರ್ಯಾಮಿ ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗುವ ದೊಡ್ಡ ಅವಕಾಶ’ ಎಂದು ಘೋಷಿಸಿದರು. ಉರಿಬಿಸಿಲಿನಲ್ಲಿ ಪಾದಯಾತ್ರೆ ಕೈಗೊಂಡರು. “ಎಲ್ಲೋ ದೂರದ ಸಮಸ್ಯೆಗೆ ನಾವೇಕೆ ಕೊಡಬೇಕು’ ಎಂದು ಕೆಲವರು ಪ್ರಶ್ನಿಸಿದರು. “ನಮ್ಮ ದೇಹದ ಒಂದು ಅಂಗಕ್ಕೆ ತೊಂದರೆಯಾದರೂ ಇಡೀ ದೇಹವೇ ಕಾಳಜಿ ವಹಿಸುತ್ತದೆ. ಅದರಂತೆ ಭರತಖಂಡ ನಮ್ಮದು. ಅದರ ಒಂದು ಭಾಗದಲ್ಲಿ ತೊಂದರೆಯಾದರೂ ಇಡೀ ದೇಶವೇ ಸಹಾಯಕ್ಕೆ ಸಜ್ಜಾಗಬೇಕು’ ಎಂದರು.
Advertisement