Advertisement

Pejawar Swamiji; ಸರಕಾರದ ನಿಯಂತ್ರಣದಿಂದ ದೇವಸ್ಥಾನಗಳು ಮುಕ್ತವಾಗಲಿ

03:52 PM Sep 29, 2024 | Team Udayavani |

ವೈದ್ಯಶಾಸ್ತ್ರ ಪರಿಣತಿ ಹೊಂದಿದವರಿಂದಲೇ ವೈದ್ಯಕೀಯ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳುತ್ತೇವೆ. ಅಡುಗೆ ಬಲ್ಲವರಿಂದಲೇ ಅಡುಗೆ ಮಾಡಿಸಿಕೊಳ್ಳುತ್ತೇವೆ. ಅದರಂತೆಯೇ ಧಾರ್ಮಿಕ ವಿಧಿ ವಿಧಾನಗಳನ್ನು ಬಲ್ಲವರ ಮುಖೇನವೇ ಮಾಡಿಸಬೇಕು. ಲೆಕ್ಕಪರಿಶೋಧನೆಯನ್ನು ಬೇರೆ ಯಾವುದೋ ಹುದ್ದೆಯವರು ಮಾಡಲು ಸಾಧ್ಯವಿಲ್ಲ. ಲೆಕ್ಕಪರಿಶೋಧಕರೇ ಅದನ್ನು ನಿರ್ವಹಿಸಬೇಕು. ಹಾಗೆಯೇ ದೇವಸ್ಥಾನ/ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ನಿರ್ವಹಣೆಯನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ನಡೆಸಬೇಕೇ ಹೊರತು ಸರಕಾರ ಅಲ್ಲ.
ಹಿಂದೂ ದೇವಸ್ಥಾನ, ಧಾರ್ಮಿಕ ಕೇಂದ್ರಗಳು ಸರಕಾರದ ಹಿಡಿತದಿಂದ ಹೊರಬರಬೇಕು ಎಂಬ ಆಂದೋಲನ ದಶಕಗಳಿಂದ ನಡೆಯುತ್ತಾ ಬಂದಿದೆ. ರಾಜ್ಯ ರಾಜ್ಯಗಳಲ್ಲಿ ಸರಕಾರಕ್ಕೆ ಪ್ರತ್ಯೇಕ ಮನವಿಗಳನ್ನು ನೀಡಲಾಗಿದೆ. ಹಲವು ರೀತಿಯಲ್ಲಿ ಕೋರಿಕೆಗಳು ಹೋಗಿವೆ. ಸರಕಾರದ ಅಧೀನದಲ್ಲಿದ್ದರೆ ಏನಾಗಬಹುದು ಎಂಬುದಕ್ಕೆ ಅನೇಕ ಘಟನೆಗಳು ಘಟಿಸಿದ್ದನ್ನು ಉಲ್ಲೇಖೀಸಲಾಗಿದೆ. ಸರಕಾರಗಳ ಅಧೀನದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಇದ್ದಾಗ ಸರಕಾರದಿಂದ ಅದಕ್ಕೆ ಪೂರ್ಣ ಪ್ರಮಾಣದಲ್ಲಿ ನ್ಯಾಯ ಒದಗಿಸಲು ಎಂದಿಗೂ ಸಾಧ್ಯವೇ ಇಲ್ಲ. ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಮತ್ತು ಮಾಡಬೇಕಾದುದ್ದನ್ನು ಹೇಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಹಾಗೂ ನಂಬಿಕೆಗೆ ಧಕ್ಕೆಯಾಗದಂತೆ ನಿರ್ವಹಿಸಬೇಕು ಎಂಬುದು ಹಿಂದೂ ಧಾರ್ಮಿಕ ಕೇಂದ್ರಗಳು ಬಲ್ಲವು. ಧಾರ್ಮಿಕತೆಯ ವಿಚಾರದಲ್ಲಿ ಸ್ಪಷ್ಪತೆಯೂ ಇರುತ್ತದೆ. ಸರಕಾರದ ಹತೋಟಿ ಪೂರ್ಣವಾಗಿ ಇಲ್ಲ ಎನ್ನಲೂ ಆಗದು. ಪ್ರತ್ಯೇಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಹತೋಟಿ ಇರುತ್ತದೆ. ಪ್ರಜ್ಞಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಸ್ವತಂತ್ರವಾಗಿ ಅವರ ಮನೆಯಲ್ಲಿ ಅವರ ಇಚ್ಛೆಗೆ ಅನುಗುಣವಾಗಿ ಬದುಕಬಹುದು. ಧಾರ್ಮಿಕ ಆಚರಣೆಗಳನ್ನು ನಡೆಸಬಹುದು. ಹಾಗೆಂದ ಮಾತ್ರಕ್ಕೆ ಅವರ ಮೇಲೆ ಸರಕಾರದ ನಿಯಂತ್ರಣವೇ ಇಲ್ಲ ಎನ್ನಲಾಗದು. ಮತ್ತೂಬ್ಬರೊಂದಿಗೆ ಹೇಗಿರಬೇಕು? ಹೇಗೆ ವ್ಯವಹರಿಸಬೇಕು? ಇನ್ನೊಬ್ಬರಿಗೆ ತೊಂದರೆ ನೀಡಬಾರದು, ಮೋಸ, ಅನ್ಯಾಯ ಮಾಡಬಾರದು ಎಂಬಿತ್ಯಾದಿಗಳು ಇದ್ದೆ ಇರುತ್ತದೆ. ಇದೆಲ್ಲವನ್ನು ಮೀರಿ ದುರ್ಘ‌ಟನೆಗಳನ್ನು ನಡೆಸಿದಾಗ ಸರಕಾರದ ನಿಯಂತ್ರಣ ಬರುತ್ತದೆ.

Advertisement

ಧಾರ್ಮಿಕ ಸಂಸ್ಥೆ ಹೇಗೆ ನಡೆಯಬೇಕು ಎಂಬ ನೆಲೆಯಲ್ಲಿ ಧಾರ್ಮಿಕ ಕಟ್ಟುಪಾಡುಗಳು ಧಾರ್ಮಿಕ ಸಂಸ್ಥೆಗಳಿಗೆ ಪೂರ್ಣ ಪ್ರಮಾಣದಲ್ಲಿ ಬಿಡಬೇಕು. ಧಾರ್ಮಿಕ ಸಂಸ್ಥೆಗಳು ಸಮಾಜದೊಂದಿಗೆ ಹೇಗೆ ವ್ಯವಹರಿಸಬೇಕು, ಅಲ್ಲಿನ ಆಚರಣೆ, ಲೆಕ್ಕಪತ್ರ, ನಿರ್ವಹಣೆ ಇದೆಲ್ಲವೂ ಅತಿ ಮುಖ್ಯವೇ ಆಗಿರುತ್ತದೆ. ಮುಂದೆ ಯಾರೋ ಒಬ್ಬರ ಕೈಗೆ ಹೋಗುವುದು ಅದರಿಂದ ಇನ್ನೊಂದು ರೀತಿಯ ಸಮಸ್ಯೆ ಆಗವುದೂ ಆಗಬಾರದು. ಸರಕಾರಿ ವ್ಯವಸ್ಥೆಯಿಂದ ದೇವಸ್ಥಾನಗಳು ಸಂಪೂರ್ಣ ಹೊರಬರಬೇಕು. ಧಾರ್ಮಿಕ ಕೇಂದ್ರದ ಮೂಲಕವೇ ಅದರ ನಿರ್ವಹಣೆ, ಮುನ್ನೆಡೆಸುವುದು ಆಗಬೇಕು. ಸರಕಾರದ ಹಿಡಿತದಲ್ಲಿದ್ದಾಗ ಇಂತಹ (ತಿರುಪತಿ ಲಡ್ಡು ಘಟನೆ) ಅಪಚಾರಗಳು ತಪ್ಪಿದ್ದಲ್ಲ. ನಿರಂತರ ಅಪಚಾರಗಳನ್ನು ಎದುರಿಸಬೇಕಾಗುತ್ತದೆ. ತಿರುಮಲ ತಿರುಪತಿ ದೇವಸ್ಥಾನ ಹಿಂದೂಗಳ ಶ್ರದ್ಧಾಕೇಂದ್ರಗಳಲ್ಲಿ ಒಂದು. ಅಲ್ಲಿ ಶ್ರೀನಿವಾಸ ದೇವರಿಗೆ ಹಸುವಿನ ತುಪ್ಪದ ಬದಲಿಗೆ ಅನೇಕ ಪ್ರಾಣಿಜನ್ಯ ಕೊಬ್ಬಿನ ಮಿಶ್ರಣದಿಂದ ಪ್ರಸಾದ ತಯಾರಿಸಿದ್ದು, ಇಡೀ ಹಿಂದೂ ಸಮಾಜ, ಭಗವಂತನಿಗೆ ಮಾಡಿರುವ ದೊಡ್ಡ ಅಪಚಾರ. ಗೋವುಗಳನ್ನು ರಕ್ಷಿಸಲು ತಾನೇ ಏಟು ತಿಂದ ಶ್ರೀನಿವಾಸ ದೇವರಿಗೆ ಹಸುವಿನ ಕೊಬ್ಬಿನ ಪ್ರಸಾದ ನೀಡಿರುವುದು ಹಿಂದೂಗಳ ನಂಬಿಕೆಯ ಮೇಲೆ ಪೆಟ್ಟು ಕೊಟ್ಟಿರುವುದಲ್ಲದೇ ಮತ್ತಿನ್ನೇನು? ಇದು ಹಿಂದುಗಳ ಧಾರ್ಮಿಕ ಶ್ರದ್ಧೆಯ ಮೇಲೆ ಎಸಗಿರುವ ಅತ್ಯಂತ ದೊಡ್ಡ ಹಲ್ಲೆ. ಈ ರೀತಿಯ ಘಟನೆಗಳು ಭಿನ್ನ ರೂಪದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹೀಗಾಗಿಯೇ ದೇವಸ್ಥಾನಗಳು ಸರಕಾರದ ಹಿಡಿತದಿಂದ ಹೊರಬರಬೇಕು. ಸರಕಾರದ ಹಿಡಿತದಿಂದ ದೇವಸ್ಥಾನಗಳನ್ನು ಮುಕ್ತಗೊಳಿಸಲು ಹಲವು ಆಂದೋಲನಗಳು ನಡೆದಿವೆ. ಇದೆಲ್ಲದಕ್ಕೂ ಮಿಗಿಲಾಗಿ ಸರ್ವೋಚ್ಚ ನ್ಯಾಯಾಲಯವು ಈ ಸಂಬಂಧ ತೀರ್ಪೊಂದನ್ನು ನೀಡಿದೆ. ಧಾರ್ಮಿಕ ಶ್ರದ್ಧಾಕೇಂದ್ರದಲ್ಲಿ ಸರಕಾರ ಹಸ್ತಕ್ಷೇಪ ಇರಕೂಡದು ಅದನ್ನು ಧಾರ್ಮಿಕ ಸಂಸ್ಥೆಗಳಿಗೆ ಒಪ್ಪಿಸಬೇಕು ಎಂಬ ಸ್ಪಷ್ಟ ತೀರ್ಪು ನೀಡಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಕಾರ್ಯಗತ ಗೊಳಿಸಲು ಮೀನಮೇಷ ಯಾಕೆ? ಹಿಂದೂಗಳ ಶ್ರದ್ಧಾ ಕೇಂದ್ರದ ಮೇಲೆಯೇ ಯಾಕಿಷ್ಟು ಸರಕಾರದ ಹತೋಟಿ? ಇನ್ನೂ ಅನೇಕ ಕಡೆಗಳಲ್ಲಿ ದೇವಸ್ಥಾನದ ಆಸ್ತಿ, ವಸ್ತುಗಳು ಸ್ಥಳೀಯಾಡಳಿತ ಸಂಸ್ಥೆಗಳ ಅಧೀನದಲ್ಲಿವೆ. ದುರುಪಯೋಗದ ಜತೆಗೆ ಒತ್ತುವರಿಯೂ ಆಗುತ್ತಿವೆ. ದೇವಸ್ಥಾನದ ಜಮೀನು ಲೋಕಲ್‌ ಪಂಚಾಯತಿಗಳ ಅಧೀನಕ್ಕೆ ಯಾಕೆ ನೀಡಬೇಕು? ಇದೆಲ್ಲವೂ ನಿಲ್ಲಬೇಕಾದರೆ ಸರಕಾರದ ಹತೋಟಿಯಿಂದ ದೇವಸ್ಥಾನಗಳನ್ನು ತಪ್ಪಿಸಲೇ ಬೇಕಾಗುತ್ತದೆ.

ಯಾಕೆಂದರೆ, ಸರಕಾರದ ಅಧೀನದಲ್ಲಿರುವ ದೇವಸ್ಥಾನದಲ್ಲಿ ಸರಕಾರ ರಚಿಸುವ ನಿರ್ವಹಣ/ಆಡಳಿತ ಸಮಿತಿಯಲ್ಲಿ ಧಾರ್ಮಿಕ ಶ್ರದ್ಧೆ ಇಲ್ಲದೇ ಇರುವ ವ್ಯಕ್ತಿಗೂ ಅವಕಾಶ ಇರುತ್ತದೆ. ಧಾರ್ಮಿಕ ಶ್ರದ್ಧೆ ವಿರೋಧಿಸುವವರ ಕೈಯಲ್ಲಿ ದೇವಸ್ಥಾನ ಹೋದಾಗ ಅದು ಧಾರ್ಮಿಕ ಸ್ವಾತಂತ್ರ್ಯ ಧಕ್ಕೆ ಆದಂತೆ ಅಲ್ಲವೇ? ಧರ್ಮದ ವಿಚಾರದಲ್ಲಿ ಅವರವರಿಗೆ ಅವರದ್ದೇ ಸ್ವಾತಂತ್ರ್ಯ ಇದೆ ಎಂಬುದು ಆಗ ಇಲ್ಲ ಎಂದಾಗುವುದಿಲ್ಲವೇ? ಧಾರ್ಮಿಕ ಸ್ವಾತಂತ್ರ್ಯ ಎಲ್ಲರಿಗೂ ಇದೆ ಎನ್ನುವುದು ಧಾರ್ಮಿಕ ಶ್ರದ್ಧಾ ಕೇಂದ್ರದ ನಿಯಂತ್ರಣ ಸರಕಾರ ಅಥವಾ ಧಾರ್ಮಿಕ ಶ್ರದ್ಧೆ ಇಲ್ಲದವರ ಕೈಗೆ ಹೋದರೆ ಧಾರ್ಮಿಕ ಸ್ವಾತಂತ್ರ್ಯ ಎಲ್ಲಿ ಉಳಿಯಲಿದೆ? ಸರಕಾರ/ ಸರಕಾರ ನೇಮಿಸಿದ ವ್ಯಕ್ತಿಗಳು ದೇವಸ್ಥಾನದಲ್ಲಿ ತಮ್ಮದೇ ಹಕ್ಕು ಸ್ಥಾಪನೆ, ಆದೇಶ ಮಾಡಿದಾಗ ಧಾರ್ಮಿಕ ಭಾವನೆ ಉಳಿಯಲು ಹೇಗೆ ಸಾಧ್ಯ? ಹೀಗಾಗಿಯೇ ಸರ್ವೋಚ್ಚ ನ್ಯಾಯಾಲಯದ ಆದೇಶ ಪಾಲನೆ ಅಥವಾ ಅನುಷ್ಠಾನ ಮೂಲಕ ಧಾರ್ಮಿಕ ಕೇಂದ್ರಗಳನ್ನು ಸರಕಾರದ ಹತೋಟಿಯಿಂದ ತಪ್ಪಿಸಬೇಕು. ಆಗ ಇಂತಹ ದುರ್ಘ‌ಟನೆಗಳು ನಡೆಯಲು ಸಾಧ್ಯವಿಲ್ಲ. ಧಾರ್ಮಿಕ ಸ್ವಾತಂತ್ರ್ಯ, ಶ್ರದ್ಧೆ, ನಂಬಿಕೆ ಎಲ್ಲವೂ ಉಳಿಯಲಿದೆ. ಧಾರ್ಮಿಕ ಶ್ರದ್ಧಾಕೇಂದ್ರಗಳು ಹಿಂದೂ ಸಂಸ್ಥೆಗಳ ಕೈಯಲ್ಲೇ ಬರಬೇಕು. ಸವೋತ್ಛ ನ್ಯಾಯಾಲಯದ ತೀರ್ಪು ಯಾಕೆ ಸತ್ಯ ಎನ್ನುವುದು ಇಂತಹ ಘಟನೆಗಳಿಂದ ಸಾಬೀತಾಗುತ್ತಿವೆ. ದೇವಸ್ಥಾನಗಳನ್ನು ಸರಕಾರದ ಸ್ವಾಧೀನದಿಂದ ಋಣಮುಕ್ತಗೊಳಿಸಿ, ಹಿಂದೂಗಳ ಧಾರ್ಮಿಕ ಸಂಸ್ಥೆಗೆ ನೀಡಿದಾಗ ಹಿಂದೂಗಳ ನಂಬಿಕೆಯಂತೆ ನಡೆಯುತ್ತವೆ. ನಂಬಿಕೆ ಉಳಿಯುತ್ತದೆ.

ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಮಠಾಧೀಶರು, ಶ್ರೀ ಪೇಜಾವರ ಮಠ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next