ಉಡುಪಿ: ಉಡುಪಿ ಶ್ರೀ ಕೃಷ್ಣಮಠ ಹಾಗೂ ಶ್ರೀ ಅನಂತೇಶ್ವರ ಸನ್ನಿಧಿಗೆ ಅರಸ ರಾಮಭೋಜ ಎನ್ನುವವರು ಜಾಗ ನೀಡಿರುವುದಕ್ಕೆ ಅಗತ್ಯ ದಾಖಲೆ ಹಾಗೂ ಶಾಸನಗಳು ಇವೆ. ದಾಖಲೆ ರಹಿತ ಹೇಳಿಕೆಗಳು ಮತ್ತು ಅದರ ಮೇಲಿನ ಚರ್ಚೆ ಅರ್ಥಹೀನ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಯಾರು ಏನೇ ಹೇಳಿಕೆ ನೀಡಿದರೂ ಸೂಕ್ತ ಆಧಾರವನ್ನು ನೀಡಿದಾಗ ಅದಕ್ಕೊಂದು ಬೆಲೆ ಇರುತ್ತದೆ. ಆಧಾರ ರಹಿತವಾದ ಹೇಳಿಕೆ ಮತ್ತು ಅದರ ಮೇಲೆ ಚರ್ಚೆ ಬೆಳೆಸುವುದು ಅರ್ಥಹೀನವಾಗುತ್ತದೆ. ಉಡುಪಿಯ ಅನಂತೇಶ್ವರ ಸನ್ನಿಧಿ, ಶ್ರೀಕೃಷ್ಣ ಮಠದ ಸನ್ನಿಧಿಗೆ ರಾಮಭೋಜ ಎನ್ನುವ ಅರಸ, ಕುಂಜಿತ್ತಾಯ ಮನೆತನದವರು ಜಮೀನು ನೀಡಿದ್ದಾರೆ ಎನ್ನುವುದಕ್ಕೆ ದಾಖಲೆಗಳು, ಶಿಲಾಶಾಸನಗಳು ಇವೆ ಎಂದರು.
ಶಾಸಕ ಕೆ. ರಘುಪತಿ ಭಟ್ ಉಡುಪಿಯಲ್ಲಿ ಪ್ರತಿಕ್ರಿಯಿಸಿ, ಮುಸ್ಲಿಂ ಅರಸರು ಶ್ರೀಕೃಷ್ಣಮಠ ಅಥವಾ ಶ್ರೀ ಅನಂತೇಶ್ವರಕ್ಕೆ ಜಾಗ ನೀಡಿಲ್ಲ. ಮಧ್ವಸರೋವರದಲ್ಲಿರುವ ಶಾಸನದಲ್ಲಿ ಇದಕ್ಕೆ ಸಂಬಂಧಿಸಿದ ದಾಖಲೆಗಳು ಇವೆ. ಸೌಹಾರ್ದತೆಗೆ ಉಡುಪಿ ಹೆಸರು ಪಡೆದಿದೆ. ಹಾಜಿ ಅಬ್ದುಲ್ಲಾ ಸಾಹೇಬರು ಶ್ರೀ ಕೃಷ್ಣನ ಭಕ್ತರಾಗಿ ಮಠಕ್ಕೆ ಸಹಾಯ ಮಾಡಿರುವ ಉಲ್ಲೇಖವಿದೆ ಎಂದಿದ್ದಾರೆ.