ಉಡುಪಿ: ಅಯೋಧ್ಯೆ ಮಂದಿರ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಪ್ರಸ್ತುತ ಗರ್ಭಗುಡಿಯ ಪೀಠದ ಮೇಲೆ ಸ್ತಂಭಗಳ ಜೋಡಣೆ ಮತ್ತು ಗೋಡೆ ನಿರ್ಮಾಣ ನಡೆಯುತ್ತಿದೆ.
ಮುಂದಿನ ಹತ್ತು ದಿನಗಳಲ್ಲಿ ಮೇಲ್ಛಾವಣಿಯ ಶಿಲಾ ಬೀಮ್ ಮತ್ತು ಶಿಲಾ ಹೊದಿಕೆಗಳನ್ನು ಅಳವಡಿಸುವ ಕಾರ್ಯ ಆರಂಭವಾಗಲಿದೆ. ಮಂದಿರದ ಲೋಕಾರ್ಪಣೆ ವೇಳೆಗೆ ದೇಶಾದ್ಯಂತದಿಂದ ಆಗಮಿಸುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ 25 ಸಾವಿರ ಜನರ ವಸತಿ ಸಾಮರ್ಥ್ಯದ ಬೃಹತ್ ಯಾತ್ರಿ ಭವನ ನಿರ್ಮಿಸಲಾಗುತ್ತಿದೆ ಎಂದು ಅಯೋಧ್ಯಾ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ತರಾಗಿರುವ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ಮಂಗಳವಾರ ಅಯೋಧ್ಯೆಗೆ ಭೇಟಿ ನೀಡಿ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.
ಉತ್ತಮ ಶಿಲೆಯಿಂದ ವಿಗ್ರಹ ನಿರ್ಮಾಣ
ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವ ಶ್ರೀ ರಾಮ, ಲಕ್ಷ್ಮಣ, ಸೀತೆಯ ವಿಗ್ರಹಗಳ ನಿರ್ಮಾಣಕ್ಕಾಗಿ ಕರ್ನಾಟಕದ ಹೆಗ್ಗಡೆ ದೇವನಕೋಟೆ, ಕಾರ್ಕಳ, ತಮಿಳುನಾಡಿನ ಮಹಾಬಲಿಪುರಂ, ರಾಜಸ್ಥಾನ ಹಾಗೂ ನೇಪಾಲಗಳಿಂದ ಶಿಲೆಗಳನ್ನು ತರಲಾಗಿದ್ದು, ಶಿಲ್ಪಿಗಳು ಅವುಗಳ ಪರಿಶೀಲನೆ ನಡೆಸಿ ಉತ್ತಮವಾದವುಗಳನ್ನು ಆಯ್ದುಕೊಂಡು ಪ್ರತಿಮೆಗಳನ್ನು ನಿರ್ಮಿಸಲಾಗುತ್ತದೆ ಎಂದರು.
Related Articles
ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್, ವಿಹಿಂಪ ಮುಖಂಡ ಗೋಪಾಲ್, ಮಠದ ಕೃಷ್ಣ ಭಟ್, ಅಯೋಧ್ಯೆ ಪೇಜಾವರ ಮಠದ ವ್ಯವಸ್ಥಾಪಕ ಮಹೇಂದ್ರ ದುಬೆ ಉಪಸ್ಥಿತರಿದ್ದರು.