Advertisement

ಅಯೋಧ್ಯೆಯಲ್ಲಿ ಪ್ರತಿಷ್ಠಾ ಕಾರ್ಯದ ಹಿನ್ನೆಲೆ: 1 ವರ್ಷ ದೇಶವ್ಯಾಪಿ ಸೇವಾ ಕೈಂಕರ್ಯ: ಪೇಜಾವರ ಶ್ರೀ

10:58 PM Jan 15, 2023 | Team Udayavani |

ಉಡುಪಿ: ಮುಂದಿನ ಜನವರಿಯಲ್ಲಿ ಆಯೋಧ್ಯೆ ರಾಮದೇವರ ಪ್ರತಿಷ್ಠಾ ಕಾರ್ಯ ನೆರವೇರಲಿದ್ದು, ಇದರ ಅಂಗವಾಗಿ 1 ವರ್ಷ ಕಾಲ ದೇಶವ್ಯಾಪಿ ಸೇವಾ ಕೈಂಕರ್ಯಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಸೇವಾ ಸಂಕಲ್ಪ ದಿನಕ್ಕೆ ಚಾಲನೆ ನೀಡಲು ಪ್ರಧಾನಿ ಮೋದಿಯವರಿಗೆ ಕೋರಿಕೆ ಸಲ್ಲಿಸಲಾಗುವುದು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

Advertisement

ಪೇಜಾವರ ಮಠದಲ್ಲಿ ರವಿವಾರ ಅಯೋಧ್ಯೆ ಶ್ರೀರಾಮ ಸೇವಾ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಧಾನಿಯವರು ದೇಶದ ಜನರಿಗೆ ಶೀಘ್ರದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಬೇಕು. ಸೇವಾ ಚಟುವಟಿಕೆಗಳನ್ನು ಕ್ರೋಡೀಕರಿಸುವ ನಿಟ್ಟಿನಲ್ಲಿ ಆ್ಯಪ್‌ ರೂಪಿಸಿ ಸಾರ್ವಜನಿಕರು ಅದರಲ್ಲಿ ವಿವರಗಳನ್ನು ದಾಖಲಿಸುವಂತೆ ಮಾಡಬೇಕು. ಮಂದಿರ ನಿರ್ಮಾಣವಾದ ಬಳಿಕ ಎಲ್ಲ ದಾಖಲೆಗಳನ್ನು ರಾಮದೇವರಿಗೆ ಸಮರ್ಪಣೆ ಮಾಡಬಹುದು ಎಂದರು.

ದೇವ ಭಕ್ತಿ ಹಾಗೂ ದೇಶ ಭಕ್ತಿ ಬೇರೆಬೇರೆಯಲ್ಲ. ಹುಂಡಿಯಲ್ಲಿ ಹಾಕಿದ ಕಾಣಿಕೆಯನ್ನು ಸರಕಾರ ಅನ್ಯಕಾರ್ಯಗಳಿಗೆ ವಿನಿಯೋಗಿಸುತ್ತದೆ ಎಂದು ದೂರುವ ಬದಲು ಸಮಾಜದ ದೀನ, ದುರ್ಬಲರಿಗೆ, ಅಶಕ್ತರಿಗೆ ಸಹಾಯ ಮಾಡಬೇಕು. ಈ ಮೂಲಕ ದೇವರಿಗೆ ಸೇವೆ ಸಲ್ಲಿಸಬೇಕು. ಮನೆ ಇಲ್ಲದವರಿಗೆ ಸೂರು ಒದಗಿಸುವುದು, ಅನಾರೋಗ್ಯಪೀಡಿತರಿಗೆ ನೆರವು, ವಿದ್ಯಾರ್ಥಿಗಳನ್ನು, ಗೋವುಗಳನ್ನು ದತ್ತು ತೆಗೆದುಕೊಳ್ಳುವುದು, ರಾಮಾಯಣ ಉಪನ್ಯಾಸಗಳನ್ನು ಏರ್ಪಡಿಸುವುದು ಮುಂತಾದ ಸೇವಾ ಚಟುವಟಿಕೆ ಕೈಗೊಳ್ಳಲು ಸಂಕಲ್ಪ ಮಾಡಬೇಕು ಎಂದರು.

ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಶಾಸಕ ಕೆ. ರಘುಪತಿ ಭಟ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಡಿಯಾಳಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ರವಿರಾಜ ಆಚಾರ್ಯ ಉಪಸ್ಥಿತರಿದ್ದರು. ವಾಸುದೇವ ಭಟ್‌ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

Advertisement

ದುರ್ಬಲರಿಗೆ 6 ಮನೆ ನಿರ್ಮಾಣ ಸಂಕಲ್ಪ
ಮುಂದಿನ ವರ್ಷ ತಮಗೆ 60 ವರ್ಷ ತುಂಬಲಿರುವ ಹಿನ್ನೆಲೆಯಲ್ಲಿ 6 ಮಂದಿ ದುರ್ಬಲರಿಗೆ ಮನೆ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದೇನೆ. ಪ್ರತಿಯೊಂದು ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯಗಳಲ್ಲಿ ಈ ಕಾರ್ಯ ಜಾರಿಯಾಗಬೇಕು. ಈ ಮೂಲಕ ರಾಮರಾಜ್ಯದ ಕನಸು ನನಸಾಗುವಲ್ಲಿ ಎಲ್ಲರೂ ಹೆಜ್ಜೆ ಇಡಬೇಕು. ರಾಮರಾಜ್ಯ ನಿರ್ಮಾಣ ನಮ್ಮ ಗುರಿ. ಒಬ್ಬ ರಾಮ ರಾಜನಾಗಿದ್ದ ಆತ ಮಾಡಿದ್ದ ರಾಜ್ಯ ರಾಮರಾಜ್ಯ. ಇವತ್ತು ಪ್ರಜಾರಾಜಾ. ಪ್ರಜೆಗಳು ರಾಮರಾದರೆ ರಾಮರಾಜ್ಯದ ಕನಸು ನನಸಾಗಲು ಸಾಧ್ಯವಿದೆ. ಶ್ರೀರಾಮನಲ್ಲಿ ಹಲವಾರು ಅತ್ಯುತ್ತಮ ಗುಣಗಳಿವೆ. ರಾಮ ಎಂದರೆ ಧರ್ಮ. ಸಕಲ ಗುಣವೂ ಅವನಲ್ಲಿದೆ. ಸಾಮಾಜಿಕವಾಗಿ ರಾಮಾಯಣ ಅಧ್ಯಯನ ಮಾಡಬೇಕು. ಒಬ್ಬಬ್ಬರು ರಾಮನ ಒಂದೊಂದು ಗುಣಗಳನ್ನು ಮೈಗೂಡಿಸಿಕೊಂಡರೆ ಸಮಾಜದಲ್ಲಿ ಶಾಂತಿ, ನೆಮ್ಮದಿ ಸಿಗಲು ಸಾಧ್ಯವಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next