ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಮರ್ಪಣ ಆಭಿಯಾನ ನಡೆಯಿತು. ಅದೇ ರೀತಿ ರಾಮ ರಾಜ್ಯದ ಕನಸು ನನಸು ಮಾಡಲು ಸಮಾಜದ ದೀನ, ದುರ್ಬಲರಿಗೆ ಒಂದು ಸೂರು ಕಟ್ಟಿಸಿಕೊಡುವ ಅಭಿಯಾನ ಹಾಗೂ ಸಂಕಲ್ಪ ತೊಡಬೇಕೆಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣಕ್ಕೆ ದೇಶ-ವಿದೇಶಗಳಿಂದ ನೆರವು ಹರಿದು ಬಂತು. ಸಮರ್ಪಣ ಅಭಿಯಾನ ಮೂಲಕ ನಿರ್ಮಾಣ ಕಾರ್ಯ ಸಾಗಿದ್ದು, ಒಂದು ವರ್ಷದೊಳಗೆ ಒಂದು ಹಂತದ ಕಾರ್ಯ ಪೂರ್ಣಗೊಳ್ಳಲಿದೆ. ಶ್ರೀರಾಮ ಮಂದಿರ ನಿರ್ಮಾಣ ದಿಂದ ದೇಶಕ್ಕೆ ಏನು ಕೊಡುಗೆ ಎಂಬುದನ್ನು ಇತಿಹಾಸ ದಲ್ಲಿ ಉಳಿಯುವಂತೆ ಮಾಡುವ ಸಂಕಲ್ಪ ತೊಡಬೇಕು. ಅದಕ್ಕಾಗಿ ದುರ್ಬಲರಿಗೆ ಮನೆ ನಿರ್ಮಿಸಿ ಕೊಡುವ ಸಂಕಲ್ಪ ತೊಡಬೇಕು. ಇದು ಶ್ರೀರಾಮ ನಿರ್ಮಿಸಿಕೊಟ್ಟ ಮಂದಿರ ಎನ್ನುವ ಭಾವನೆ ಅವರಿಗೆ ಬರಬೇಕು. ಶ್ರೀರಾಮನಿಗೆ ಸಮರ್ಪಿತ ಎನ್ನುವ ಭಾವನೆ ಕಟ್ಟಿಸಿ ಕೊಟ್ಟವನಿಗೆ ಬರಬೇಕು. ಶ್ರೀರಾಮನಿಗೆ ಇದಕ್ಕಿಂತ ಬೇರೇನೋ ಕೊಡಬೇಕಿಲ್ಲ ಎಂದರು.
ಮನೆ ಕಟ್ಟಿಸಿ ಕೊಡುವ ಸಂಕಲ್ಪ ಈಗಾಗಲೇ ಉಡುಪಿಯಲ್ಲಿ ಘೋಷಿಸಲಾಗಿದೆ. ಈ ಸೇವಾ ಕಾರ್ಯ ದೇಶಾದ್ಯಂತ ಪಸರಲು ಪ್ರಧಾನಿ ನರೇಂದ್ರ ಮೋದಿ ಸೂಕ್ತ ದಿನ ನೋಡಿ ಸಂಕಲ್ಪ ದಿನವನ್ನಾಗಿ ಘೋಷಿಸಬೇಕು. ಈ ನಿಟ್ಟಿನಲ್ಲಿ ಅವರಿಗೆ ಪತ್ರ ಬರೆಯುತ್ತೇನೆ. ಈ ಸೇವಾ ಸಂಕಲ್ಪ ದಿನದ ಘೋಷಣೆ ಉಡುಪಿ ಶ್ರೀ ಕೃಷ್ಣನ ಸನ್ನಿಧಾನದಿಂದ ಆಗಬೇಕೆನ್ನುವ ಅಭಿಪ್ರಾಯ ನಮ್ಮದಾಗಿದೆ ಎಂದರು.
ರಾಮ ಮಂದಿರದ ನಿರ್ಮಾಣ ಕುರಿತು ಹಲವು ಚರ್ಚೆಗಳು ಉಡುಪಿಯ ಮಠದಲ್ಲಿ ನಡೆದಿದ್ದವು. ಹೀಗಾಗಿ ರಾಮನ ಹೆಸರಿನಲ್ಲಿ ಮಾಡುತ್ತಿದ್ದೇವೆ. ಇತರ ಧರ್ಮದವರು ತಮಗೆ ಸೂಕ್ತ ಎನಿಸುವ ದೇವರ ಹೆಸರಿನ ಮೂಲಕ ಈ ಕಾರ್ಯ ಮಾಡಬೇಕು. ಒಟ್ಟಾರೆ ಅರ್ಹರಿಗೆ ಸೂರು ದೊರಕಬೇಕು. ಜನ್ಮದಿನ, ವಿವಾಹ ವಾರ್ಷಿಕೋತ್ಸವ ಇಂತಹ ವಿಶೇಷ ದಿನವನ್ನು ಈ ಕಾರ್ಯದ ಮೂಲಕ ಶಾಶ್ವತವಾಗಿಡಲು ಸಂಕಲ್ಪ ತೊಡಬೇಕು ಎಂದರು.