ಹಾಸನ: ರಾಜ್ಯದಲ್ಲಿ ಮತಾಂತರ ಮತ್ತು ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ ಎಂದು ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ನಗರದ ಶ್ರೀಗುರುರಾಘವೇಂದ್ರ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸರ್ಕಾರಗಳು ಕಾಲಕಾಲಕ್ಕೆ ಜನರ ಬೇಡಿಕೆಗಳಿಗೆ ಅನುಗುಣವಾಗಿ, ಸಮಾಜದ ಸ್ಥಿತಿಗತಿಗಳಿಗೆ ಪೂರಕವಾಗಿ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಆದರೆ, ಆ ಕಾನೂನುಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗದೆ, ಜನರ ಕಣ್ಣೊರೆಸುವ ತಂತ್ರ ಆಗುತ್ತಿವೆ. ಕಾನೂನನ್ನು ಯಥಾವತ್ತಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದರು.
ವಿಶೇಷ ಗಮನಹರಿಸಿ: ಈಗ ಮತಾಂತರ ಕಾಯ್ದೆ ಜಾರಿಯಲ್ಲಿದ್ದರೂ, ಮತಾಂತರ ನಡೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಗೋ ಹತ್ಯೆಗಳೂ ನಡೆಯುತ್ತಿವೆ. ಕಾನೂನು ಇದ್ದರೂ ಶಿಕ್ಷೆಗೊಳಪಡುವ ಭಯವಿಲ್ಲದಿರುವುದರಿಂದ ಕಾನೂನುಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಕಾನೂನು ಉಲ್ಲಂ ಸುವವರಿಗೆ ಶಿಕ್ಷೆ ಆಗಬೇಕು. ಆಗ ಮಾತ್ರ ಕಾನೂನುಗಳಿಗೆ ಅರ್ಥ ಬರುತ್ತದೆ. ಹೀಗಾಗಿ, ಸರ್ಕಾರ ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಬೇಕು. ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು.
ಗಂಭೀರವಾಗಿ ಚಿಂತನೆ ನಡೆಸಿ: ಹಿಂದೂಗಳು ಪೂಜ್ಯ ಭಾವನೆಯಿಂದ ಕಾಣುವ ಗೋವುಗಳ ಹತ್ಯೆ ನಡೆಯುತ್ತಿರುವುದರಿಂದ ಹಿಂದೂಗಳ ಭಾವನೆಗಳಿಗೆ ಘಾಸಿಯಾಗುವುದಷ್ಟೇ ಅಲ್ಲ, ಹೈನುಗಾರಿಕೆಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಹೈನುಗಾರಿಕೆಯನ್ನೇ ನಂಬಿರುವ ಅದೆಷ್ಟೋ ಕುಟುಂಬಗಳು ಸಂಕಷ್ಟಕ್ಕೊಳಗಾಗುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಮತಾಂತರದಿಂದ ಜಾತಿ, ಜಾತಿಗಳ ನಡುವೆ ಸಂಘರ್ಷವಲ್ಲ, ಮನೆ ಮನೆಯಲ್ಲಿಯೂ ಸಂಘರ್ಷ ನಡೆಯುತ್ತಿವೆ. ಇಂತಹ ಬೆಳವಣಿಗೆಗಳಿಗೆ ಅವಕಾಶ ಇರಬಾರದು ಎಂದರೆ ಕಾನೂನು ಕಠಿಣವಾಗಿರಬೇಕು ಎಂದು ತಿಳಿಸಿದರು.