ಮುಂಬಯಿ: ನಾನು ಮುಂಬಯಿಗೆ ಕಾಲಿಟ್ಟ ಅನೇಕ ಸಲ ಬಿಲ್ಲವ ಭವನಕ್ಕೆ ಭೇಟಿ ನೀಡುವುದು ವಾಡಿಕೆ. ಕಾರಣ ನಾನು ಬರಬೇಕು ಎನ್ನುವುದು ಇಲ್ಲಿನ ಭಕ್ತಾಭಿಮಾನಿಗಳ ಆಶಯ. ಇಲ್ಲಿನ ಜನತೆಗೆ ನನ್ನ ಮೇಲೂ ವಿಶೇಷ ಪ್ರೀತಿ, ಅಭಿಮಾನ. ಬಿಲ್ಲವ ಭವನ ಒಂದು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಭವನವಾಗಿ ತಲೆ ಎತ್ತಿ ನಿಂತಿದ್ದರೆ ಇನ್ನೊಂದೆಡೆ ಕಲಾಪೋಷಣೆಯೊಂದಿಗೆ ಕಲಾ ಭವನವಾಗಿ, ಸಂಸ್ಕೃತಿಯ ಬೆಳವಣಿ ಗೆಗೆ ಸಾಂಸ್ಕೃತಿಕ ಭವನವಾಗಿಯೂ ನಾಮಾಂಕಿತಗೊಂಡಿದೆ. ಆದ್ದರಿಂದ ಬಿಲ್ಲವರ ಭವನ ಬರೀ ಬಿಲ್ಲವರದ್ದಲ್ಲ. ಸಾಮರಸ್ಯದ ಪ್ರತೀಕವೆನಿಸಿದ ಎಲ್ಲರ ಭವನವಾಗಿದೆ. ತಮ್ಮೆಲ್ಲರ ಇಂತಹ ಸೇವೆಗಳೊಂದಿಗೆ ಹಿಂದೂ ಧರ್ಮದ ಉಳಿವು ಸಾಧ್ಯವಾಗಿದೆ. ಕರ್ನಾಟಕದ ಕರಾವಳಿಯಲ್ಲಿ ನಾರಾಯಣ ಗುರುಗಳೂ ಹಿಂದುಳಿದ ಸಮಾಜದಲ್ಲಿ ಬಲ ತುಂಬಿದವರು. ಅವರ ಅನುಯಾಯಿಗಳಾದ ಬಿಲ್ಲವರು ಇಂದು ಎಲ್ಲೆಲ್ಲೂ ಪಸರಿಸಿಕೊಂಡು ಮುಂದಿದ್ದಾರೆ ಎಂದು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಅಭಿಪ್ರಾಯಿಸಿದರು.
ಐತಿಹ್ಯ ಪಂಚಮ ಪರ್ಯಾಯ ಮಹೋತ್ಸವ ಪೂರೈಸಿದ ಬಳಿಕ ಮೊದಲ ಬಾರಿ ಮುಂಬಯಿಗೆ ಆಗಮಿಸಿದ ಶ್ರೀಗಳು, ಜು. 28ರಂದು ಶನಿವಾರ ಸಂಜೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಂತಾಕ್ರೂಜ್‌ನ ಬಿಲ್ಲವರ ಭವನಕ್ಕೆ ಭೇಟಿನೀಡಿ ಆಶೀರ್ವಚನ ನೀಡಿದರು. ಬಿಲ್ಲವರ ಅಸೋಸಿಯೇಶನ್‌ನ ನೂತನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅವರು ಇತರ ಪದಾಧಿಕಾರಿಗಳನ್ನು ಒಳಗೊಂಡು ಪೇಜಾವರ ಶ್ರೀಗಳನ್ನು ಸ್ವಾಗತಿಸಿದರು.
ಶ್ರೀಗಳು ಬ್ರಹ್ಮಶ್ರೀ ನಾರಾಯಣ ಗುರು ಪ್ರತಿಮೆಗೆ ಆರತಿ ಬೆಳೆಗಿಸಿ ನೆರೆದ ಸದ್ಭಕ್ತರನ್ನು ಉದ್ದೇಶಿಸಿ ಅನುಗ್ರಹಿಸಿದರು. ಈ ಸಂದರ್ಭದಲ್ಲಿ ಅಸೋಸಿಯೇಶನ್‌ನ ಉಪಾಧ್ಯಕ್ಷ ಶಂಕರ ಡಿ. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್. ಕೋಟ್ಯಾನ್, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಗೌರವ ಜತೆ ಕಾರ್ಯದರ್ಶಿಗಳಾದ ಹರೀಶ್ ಜಿ. ಸಾಲ್ಯಾನ್, ಕೇಶವ ಕೆ. ಕೋಟ್ಯಾನ್, ಧರ್ಮೆàಶ್ ಎಸ್. ಸಾಲ್ಯಾನ್, ಜತೆ ಕೋಶಾಧಿಕಾರಿಗಳಾದ ಶಿವರಾಮ ಕೆ. ಸಾಲ್ಯಾನ್, ಸದಾಶಿವ ಎ. ಕರ್ಕೇರ, ಮಹಿಳಾ ವಿಭಾಗಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್, ಭಾರತ್ ಬ್ಯಾಂಕಿನ ನಿರ್ದೇಶಕರುಗಳಾದ ಭಾಸ್ಕರ್ ಎಂ. ಸಾಲ್ಯಾನ್, ಗಂಗಾಧರ್ ಜೆ. ಪೂಜಾರಿ, ಸಾಮಾಜಿಕ ಮತ್ತು ಧಾರ್ಮಿಕ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್‌ದಾಸ್ ಜಿ. ಪೂಜಾರಿ ಸೇರಿದಂತೆ ಅಸೋಸಿಯೇಶನ್‌ನ ಉಪ ಸಮಿತಿ, ಸ್ಥಳೀಯ ಸಮಿತಿಗಳ ಮುಖ್ಯಸ್ಥರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಧ್ಯಕ್ಷ ಚಂದ್ರಶೇ ಖರ ಪೂಜಾರಿ ಶ್ರೀಗಳನ್ನು ಶಾಲು ಹೊದೆಸಿ ಫಲಪುಷ್ಪಗಳನ್ನಿತ್ತು ಗೌರವಿಸಿದರು. ಸಾಮಾಜಿಕ ಮತ್ತು ಧಾರ್ಮಿಕ ಸಮಿತಿಯ ಕಾರ್ಯದರ್ಶಿ ರವೀಂದ್ರ ಎ. ಅಮೀನ್ ಪೂಜೆಯನ್ನು ನೆರವೇರಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್