Advertisement

ಖಾಸಗಿತನಕ್ಕೆ ಪೆಗಾಸಸ್‌ ಕನ್ನ

10:04 AM Nov 04, 2019 | mahesh |

ಸಾಮಾಜಿಕ ಜಾಲತಾಣಗಳಿಂದ ಮಾಹಿತಿ ಕದಿಯುವ ಆರೋಪ ಹಳೆಯದು. ಆದರೆ ಇತ್ತೀಚೆಗೆ ಸದ್ದು ಮಾಡುತ್ತಿರುವ ಇಸ್ರೇಲ್‌ನ ಪೆಗಾಸಸ್‌ ಎಂಬ ಸ್ಪೈ ಸಾಫ್ಟ್ವೇರ್‌ ವಾಟ್ಸ್‌ಆ್ಯಪ್‌ ಮೂಲಕ ಸ್ಮಾರ್ಟ್‌ಫೋನ್‌ ಪ್ರವೇಶಿಸಿ ಮಾಹಿತಿ ಕದಿಯುತ್ತಿದೆ ಎಂಬುದು ಸುದ್ದಿ ಮಾಡಿದೆ. ವಾಟ್ಸ್‌ಆ್ಯಪ್‌ ಮೂಲಕ ಮಾಹಿತಿ ಕಳವಿಗೆ ಒಳಗಾದವರಲ್ಲಿ ಭಾರತೀಯರೂ ಇದ್ದು, ಪತ್ರಕರ್ತರು, ರಾಜಕಾರಣಿಗಳು, ಸಾಮಾಜಿಕ ಹೋರಾಟಗಾರರ ಮೇಲೆ ಕಣ್ಣಿಡಲಾಗಿತ್ತು ಎನ್ನಲಾಗಿದೆ. ಹಾಗಾದರೆ, ಪೆಗಾಸಸ್‌ ಎಂದರೆ ಏನು? ಅದು ಹೇಗೆ ಕೆಲಸ ಮಾಡುತ್ತದೆ ಎಂಬ ಕುರಿತ ಮಾಹಿತಿ ಇಲ್ಲಿದೆ.

Advertisement

ಪೆಗಾಸಸ್‌ ಎನ್ನುವುದು ಒಂದು ಗೂಢಚರ ತಂತ್ರಾಂಶ. ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌
(NSO Group) ಈ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ. ಮೊಬೈಲ್‌ ಬಳಕೆದಾರರ ಮಾಹಿತಿ ದೋಚಲು ಇದು ಸಹಕರಿಸುತ್ತಿದೆ. ಬಳಕೆದಾರರಿಗೆ ತಿಳಿಯದೆಯೇ ಅವರ ಸ್ಮಾರ್ಟ್‌ಫೋನ್‌ ಸೇರಿ ಕೊಳ್ಳುತ್ತದೆ. ಹಾಗೆಯೇ ಅವರ ಫೋನಿನ ಎಲ್ಲ ಮಾಹಿತಿಗಳನ್ನು ತನ್ನ ತಂಡಕ್ಕೆ ರವಾನಿಸುತ್ತದೆ.

ಪೆಗಾಸಸ್‌ ಯಾಕೆ?
ವಾಟ್ಸ್‌ಆ್ಯಪ್‌ ಮೂಲಕ ಜನರ ಮಾಹಿತಿಯನ್ನು ಕದಿಯಲಾಗುತ್ತದೆ ಎಂಬ ಆರೋಪ ಕೇಳಿ ಬಂದ ಬಳಿಕ ಸಂಸ್ಥೆ ಸ್ಪಷ್ಟನೆ ನೀಡಿದೆ. ಉಗ್ರರ ಚಲನವಲನಗಳನ್ನು ಗಮನಿಸಲು ಸರಕಾರಗಳಿಗೆ ನೀಡಲಾಗುವ ಸಾಫ್ಟ್ ವೇರ್‌ ಇದಾಗಿದೆ. ಇದನ್ನು ಆಯಾ ಸರಕಾರಗಳು ದುರ್ಬಳಕೆ ಮಾಡಿಕೊಂಡಿರಬಹುದು ಎಂದು ಎನ್‌ಎಸ್‌ಒ ಗ್ರೂಪ್‌ ಹೇಳಿದೆ. ಇದರ ಬಳಿಕ ಕೇಂದ್ರ ಸರಕಾರದ ಮೇಲೆ ಆರೋಪಗಳು ಕೇಳಿಬಂದವು.

ಮಾಹಿತಿ ಕದಿಯೋದು ಹೇಗೆ?
ವಾಟ್ಸ್‌ಆ್ಯಪ್‌ ಮೂಲಕ ಪೆಗಾಸಸ್‌ ಮಾಹಿತಿ ಕದಿಯುತ್ತದೆ. ಆ್ಯಪ್‌ಗೆ ವೀಡಿಯೋ ಕರೆ ಬಂದಾಕ್ಷಣ (ಕರೆ ರಿಸೀವ್‌ ಮಾಡದೇ ಇದ್ದರೂ) ನಿಗೂಢ ತಂತ್ರಾಂಶ ಫೋನ್‌ ಪ್ರವೇಶಿಸುತ್ತದೆ. ಅಲ್ಲಿಂದ ಮಾಹಿ ತಿಗಳನ್ನು ಸರ್ವರ್‌ ನಿಯಂತ್ರಿಸುವ ವ್ಯಕ್ತಿಗೆ ಕಳಿಸುತ್ತದೆ.

ಏನೆಲ್ಲಾ ಮಾಹಿತಿ ಕದಿಯುತ್ತೆ?
ಖಾಸಗಿ ದತ್ತಾಂಶಗಳು, ಪಾಸ್‌ವರ್ಡ್‌, ಕಾಂಟ್ಯಾಕ್ಟ್, ಕ್ಯಾಲೆಂಡರ್‌ ಮಾಹಿತಿಗಳು, ನೋಟ್ಸ್‌, ಟೆಕ್ಸ್ಟ್ ಮೆಸೇಜ್‌, ಕ್ಲೌಡ್‌ ದತ್ತಾಂಶಗಳು, ಮೆಸೆಂಜಿಂಗ್‌ ಆ್ಯಪ್‌ಗ್ಳ ಮೂಲಕ ಮಾಡುವ-ಸ್ವೀಕರಿಸುವ ಕಾಲ್‌ಗ‌ಳ ವಿವರಗಳೂ ಸರ್ವರ್‌ನಲ್ಲಿ ದಾಖಲಾಗುತ್ತದೆ.

Advertisement

ಕೆಮರಾ ಬಳಕೆ
ನೀವು ಎಲ್ಲಿ ಇದ್ದೀರಿ ಎಂಬ ಮಾಹಿತಿಯು “ಗೂಗಲ್‌ ಲೊಕೇಶನ್‌’ ಮೂಲಕ ಹಂಚಿಕೆಯಾಗುತ್ತದೆ. ಗೌಪ್ಯ ಸ್ಥಳದಲ್ಲಿ ನೀವು ಇದ್ದರೆ ನಿಮ್ಮ ಗಮನಕ್ಕೆ ಬಾರದೇ ಮೊಬೈಲ್‌ ಕೆಮರಾಗಳು, ಮೈಕ್ರೋಫೋನ್‌ಗಳು ತನ್ನಿಂದ ತಾನಾಗಿಯೇ ಚಾಲೂ ಆಗುತ್ತವೆ. ಈ ಮೂಲಕ ಸ್ಥಳವನ್ನು ಜಾಹೀರುಮಾಡುತ್ತದೆ.

ಸರಕಾರಗಳು ಭಾಗಿ
ಇನ್ನು ಜಗತ್ತಿನ ಹಲವು ದೇಶಗಳು ಈ ಪೆಗಾಸಸ್‌ ಸ್ಪೈವೇರ್‌ ಬಳಕೆ ಮಾಡುತ್ತಿವೆೆ. ಮೆಕ್ಸಿಕೊ ದೇಶ ಅತೀ ಹೆಚ್ಚಿನ ಪ್ರಮಾಣದಲ್ಲಿ ಈ ಸೈಬರ್‌ ಗೂಢಚರ್ಯೆ ಕೃತ್ಯ ನಡೆಸಿತ್ತು. ಅಲ್ಲಿನ ಸರಕಾರ 2016-17ರಿಂದ ಅಂದಾಜು 220 ಕೋಟಿ ರೂಪಾಯಿ ವೆಚ್ಚ ಮಾಡಿ 500ಕ್ಕೂ ಹೆಚ್ಚು ಮಂದಿಯ ಫೋನ್‌ಗನ್ನು ಟ್ಯಾಪ್‌ ಮಾಡಿ ಗೂಢಚರ್ಯೆ ನಡೆಸಿತ್ತು.

ಪೆಗಾಸಸ್‌ ಹೇಗೆ ಭಿನ್ನ?
ಮಾಹಿತಿ-ದತ್ತಾಂಶಗಳನ್ನು ಕದಿಯುವ ಅನೇಕ ಸ್ಪೈವೇರ್‌ಗಳಿವೆ. ಇವುಗಳು ನಿರ್ದಿಷ್ಟ ಕಂಪೆನಿಯ ಆ್ಯಪ್‌ಗ್ಳಲ್ಲದೆ ಥರ್ಡ್‌ ಪಾರ್ಟಿ ಆ್ಯಪ್‌ಗ್ಳನ್ನು ಇನ್‌ಸ್ಟಾಲ್‌ ಮಾಡಿದಾಗ ಫೋನ್‌ಗೆ ಇನ್‌ಸ್ಟಾಲ್‌ ಆಗಬಹುದು. ಆದರೆ ಪೆಗಾಸಸ್‌ ಹಾಗಲ್ಲ. ಯಾವುದೇ ಆ್ಯಪ್‌ಗ್ಳನ್ನು ಇನ್‌ಸ್ಟಾಲ್‌ ಮಾಡದಿದ್ದರೂ ವಾಟ್ಸ್‌ಆ್ಯಪ್‌ ಮೂಲಕ ಅದು ಮೊಬೈಲ್‌ಗೆ ಕನ್ನ ಕೊರೆಯುತ್ತದೆ.

ತಡೆ ಹೇಗೆ?
ನಮ್ಮ ಫೋನ್‌ಗಳನ್ನು ಮತ್ತು ವಾಟ್ಸ್‌ಆ್ಯಪ್‌ಗ್ಳನ್ನು ಅಪ್‌ಡೇಟ್‌ ಮಾಡಿಟ್ಟುಕೊಳ್ಳಬೇಕು. ಮಾತ್ರವಲ್ಲದೇ ಯಾವುದಾರೂ ಅನ್ಯ ಆ್ಯಪ್‌ಗ್ಳಿದ್ದರೆ ಅದನ್ನು ಆ್ಯಪ್‌ ಸೆಟ್ಟಿಂಗ್ಸ್‌ ನಲ್ಲಿ ನೋಡಬಹುದಾಗಿದೆ. ಮೊಬೈಲ್‌ ಬಳಸುತ್ತಿಲ್ಲ ಎಂದಾದರೆ, ಡಾಟಾ ಆಫ್ ಮಾಡಿಟ್ಟುಕೊಳ್ಳುವುದು ಉತ್ತಮ.

70-80 ಲಕ್ಷ ಡಾಲರ್‌
ಇಸ್ರೇಲ್‌ ಮೂಲದ ಈ ಪೆಗಾಸಸ್‌ ಸಾಫ್ಟ್ ವೇರ್‌ ಅನ್ನು ನಾವು ಖರೀದಿಸಿ ಬಳಸಬೇಕಾದರೆ ವಾರ್ಷಿಕವಾಗಿ 70-80 ಲಕ್ಷ ಡಾಲರ್‌ ನೀಡಬೇಕಾಗುತ್ತದೆ. 80 ಲಕ್ಷ ಡಾಲರ್‌ ಎಂದರೆ ಭಾರತದಲ್ಲಿ 56.56 ಕೋಟಿ ರೂ.ಗಳಾಗಿವೆ.

500 ಫೋನ್‌
ಈ ಸ್ಪೈವೇರ್‌ ವಾರ್ಷಿಕವಾಗಿ 500 ಫೋನ್‌ಗಳನ್ನು ಹ್ಯಾಕ್‌ ಮಾಡಬಹುದಾಗಿದೆ.

2016
2016ರಲ್ಲಿ ಆರಂಭವಾದ ಪೆಗಾಸಸ್‌ 20 ದೇಶಗಳ 1,400 ಬಳಕೆದಾರರಿಂದ ಮಾಹಿತಿಯನ್ನು ಕದ್ದಿದೆ ಎಂದು ದೃಢಪಟ್ಟಿದೆ. ಮೇ ತಿಂಗಳ ಅಂತ್ಯದ ವರೆಗೆ ಈ ಸ್ಪೈವೇರ್‌ ಜನರನ್ನು ನಿಗಾದಲ್ಲಿ ಇರಿಸಿದೆ.

50 ಪೆಗಾಸಸ್‌ ಏಕ ಕಾಲದಲ್ಲಿ ಸುಮಾರು 50 ಫೋನ್‌ಗಳನ್ನು ಹ್ಯಾಕ್‌ ಮಾಡುವ ಸಾಮರ್ಥ್ಯ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next