Advertisement
ನಗರದಲ್ಲಿ ಗೈಲ್, ಜಲಸಿರಿ ಮಹಾನಗರ ಪಾಲಿಕೆ, ಸ್ಮಾರ್ಟ್‌ಸಿಟಿ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಕೆಲವೊಂದು ಕಾಮಗಾರಿ ಫುಟ್‌ಪಾತ್ ಬಳಿಯೇ ನಡೆಯುತ್ತಿದೆ. ಬಿಜೈನಿಂದ ಲಾಲ್‌ಬಾಗ್ ರಸ್ತೆಯಲ್ಲಿ ಕಳೆದ ಕೆಲ ತಿಂಗಳ ಹಿಂದೆ ಅಭಿವೃದ್ಧಿಗೊಳಿಸಲಾಗಿತ್ತು. ಆ ವೇಳೆ ಫುಟ್‌ಪಾತ್ ಕೂಡ ವ್ಯವಸ್ಥಿತವಾಗಿ ನಿರ್ಮಾಣಗೊಂಡಿತ್ತು. ಅದೇ ಭಾಗದಲ್ಲಿ ಸದ್ಯ ಪೈಪ್‌ಲೈನ್ ಕಾಮಗಾರಿಗೆಂದು ಅಗೆಯಲಾಗಿದೆ. ಈ ರಸ್ತೆಯ ಫುಟ್‌ಪಾತ್‌ನಲ್ಲಿ ಪ್ರತೀ ದಿನ ಅನೇಕರು ಸಂಚರಿಸುತ್ತಿದ್ದು, ಕಳೆದ ಹಲವು ತಿಂಗಳಿನಿಂದ ಫುಟ್‌ಪಾತ್‌ನಲ್ಲಿ ಸೂಚನ ಫಲಕ, ಪೈಪ್, ಜನರೇಟರ್ ಸಹಿತ ಕಲ್ಲುಗಳ ರಾಶಿ ಹಾಕಲಾಗಿದೆ. ಇದೇ ಕಾರಣ ಈ ಭಾಗದ ಫುಟ್‌ಪಾತ್‌ನಲ್ಲಿ ಸಾರ್ವಜನಿಕರು ನಡೆಯುವುದು ಕಷ್ಟ. ಆರ್‌ಟಿಒ ಕಚೇರಿ ಬಳಿ ಇತ್ತೀಚೆಗೆಯಷ್ಟೇ ಫುಟ್‌ಪಾತ್ ಅಭಿವೃದ್ಧಿಗೊಂಡಿದ್ದು, ಕಬ್ಬಿಣದ ಕಂಬಗಳನ್ನು ಅಲ್ಲೇ ಇಡಲಾಗಿದೆ. ಕೆ.ಎಸ್. ರಾವ್ ರಸ್ತೆಯುದ್ದಕ್ಕೂ ಫುಟ್‌ಪಾತ್ ಕಾಮಗಾರಿ ನಡೆಯುತ್ತಿದೆ. ಸದ್ಯ ಕಾಮಗಾರಿಗೆಂದು ರಾಶಿ ಹಾಕಿದ್ದ ಸಿಮೆಂಟ್, ಕಲ್ಲು ಅಲ್ಲೇ ಇದೆ. ಫುಟ್ ಪಾತ್‌ನಲ್ಲಿ ಕೇಬಲ್ ರಾಶಿ ಹಾಕಲಾಗಿದೆ. ನಗರದ ಕೆಲವು ಕಡೆಗಳಲ್ಲಿ ಫುಟ್‌ಪಾತ್‌ನಲ್ಲಿಯೇ ಅನಧಿಕೃತವಾಗಿ ತಳ್ಳುಗಾಡಿ ಇಟ್ಟು ವ್ಯಾಪಾರ ಮಾಡಲಾಗುತ್ತಿದೆ. ಇಲ್ಲೇ, ಕುಳಿತು ಗ್ರಾಹಕರು ತಿಂಡಿ ತಿನ್ನುತ್ತಾರೆ. ಈ ಹಿಂದೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನೇಕ ಬಾರಿ ಈ ವಿಚಾರ ಚರ್ಚೆ ನಡೆಸಲಾಗಿತ್ತು. ಕೆಲವು ತಿಂಗಳ ಹಿಂದೆ ಪಾಲಿಕೆ ಟೈಗರ್ ಕಾರ್ಯಾಚರಣೆ ನಡೆಸಿತ್ತು. ಆದರೂ ನಗರದ ಲೇಡಿಹಿಲ್, ಮಣ್ಣಗುಡ್ಡೆ, ಚಿಲಿಂಬಿ ಸಹಿತ ಹಲವು ಕಡೆ ಫುಟ್‌ಪಾತ್ ಅತಿಕ್ರಮಣ ನಡೆದಿದೆ.
Related Articles
Advertisement
ಪಾಲಿಕೆಯ ಎದುರಿನ ಸೈಬಿನ್ ಕಾಂಪ್ಲೆಕ್ಸ್ ಬಳಿ ಫುಟ್‌ಪಾತ್‌ಗೆ ಅಳವಡಿಸಿದ್ದ ಸ್ಲ್ಯಾಬ್ ಮುರಿದು ಹಲವು ತಿಂಗಳುಗಳು ಕಳೆದಿವೆ. ಪರಿಣಾಮ ಅಲ್ಲಿ ಅಪಾಯಕಾರಿ ಗುಂಡಿ ಉಂಟಾಗಿದ್ದು, ಸಾರ್ವಜನಿಕರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಇದೇ ಫುಟ್‌ಪಾತ್‌ನಲ್ಲಿ ಪ್ರತೀ ದಿನ ನೂರಾರು ಮಂದಿ ಪಾದಚಾರಿಗಳು ನಡೆದುಕೊಂಡು ಬರುತ್ತಿದ್ದು, ಆಯ ತಪ್ಪಿದರೆ ಗುಂಡಿಗೆ ಬೀಳುವ ಆತಂಕ ಎದುರಾಗಿದೆ. ಅದರಲ್ಲೂ ರಾತ್ರಿ ವೇಳೆಯಂತೂ ಈ ದೊಡ್ಡ ಗುಂಡಿ ಸಾರ್ವಜನಿಕರು ತೊಂದರೆಗೊಳಗಾಗಿದ್ದಾರೆ.
ಫುಟ್‌ಪಾತ್‌ನಲ್ಲೇ ವಾಹನ ಸಂಚಾರ
ಪಾದಚಾರಿಗಳಿಗೆ ಅನುಕೂಲವಾಗ ಲೆಂದು ಫುಟ್‌ಪಾತ್ ವ್ಯವಸ್ಥೆ ಕಲ್ಪಿಸಿದರೆ, ನಗರದ ಹಲವು ಕಡೆಗಳಲ್ಲಿ ಫುಟ್‌ಪಾತ್‌ನಲ್ಲಿಯೇ ದ್ವಿಚಕ್ರ ವಾಹನಗಳು ಸಂಚರಿಸುತ್ತಿದೆ. ನಗರದ ಎಂ.ಜಿ. ರಸ್ತೆ, ಕೆ.ಎಸ್. ರಾವ್ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ವಿವಿಧ ಕಡೆಗಳಲ್ಲಿ ಫುಟ್‌ಪಾತ್ ರಸ್ತೆ ಮಟ್ಟಕ್ಕಿಂತ ತುಂಬಾ ಎತ್ತರದಲ್ಲಿಲ್ಲ. ಪರಿಣಾಮ ಟ್ರಾಫಿಕ್ ಒತ್ತಡ ಹೆಚ್ಚಿದ್ದಾಗ ದ್ವಿಚಕ್ರ ವಾಹನ ಸವಾರರು ಫುಟ್‌ಪಾತ್ ಮುಖೇನ ಸಂಚರಿಸುತ್ತಾರೆ. ಆಗ ಪಾದಾಚಾರಿಗಳು ಫುಟ್‌ಪಾತ್ ಬದಲು ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಕೆಲವೆಡೆ ಮಾತ್ರ ಸಿ.ಸಿ. ಕೆಮರಾ ಅಳವಡಿಸಲಾಗಿದ್ದು, ಈ ರೀತಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಆದರೆ ಹಲವು ಕಡೆಗಳಲ್ಲಿ ಪೊಲೀಸರು ಕಾವಲು ಇರುವುದಿಲ್ಲ, ಸಿಸಿ ಕೆಮರಾ ಇರುವುದಿಲ್ಲ. ಇದೇ ಕಾರಣಕ್ಕೆ ಫುಟ್‌ಪಾತ್ ಅತಿಕ್ರಮಣ ನಗರದಲ್ಲಿ ನಡೆಯುತ್ತಿದೆ.