Advertisement
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ನಿರ್ವಹಣೆಯಲ್ಲಿ ಸಮ್ಮಿಶ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್-ಕಾಂಗ್ರೆಸ್ ಎರಡೂ ಪಕ್ಷಗಳು ಹೆಣಗಾಡುತ್ತಿವೆ. ಇತ್ತ ವಿರೋಧ ಪಕ್ಷವಾಗಿರುವ ಬಿಜೆಪಿ, ರೈತರ ಪರವಾಗಿ ಧ್ವನಿ ಎತ್ತದೇ ಕೇವಲ ಸಮ್ಮಿಶ್ರ ಸರ್ಕಾರ ಬಿದ್ದರೆ ಅಧಿಕಾರಕ್ಕೆ ಬರಬೇಕೆಂಬ ಹಠದಲ್ಲಿದೆ. ಹೀಗಾಗಿ ರೈತರ ಪಾಲಿಗೆ ಸರ್ಕಾರ ಸತ್ತಿದೆ. ವಿರೋಧ ಪಕ್ಷ ಕೋಮಾ ಸ್ಥಿತಿಯಲ್ಲಿದೆ ಎಂದು ಟೀಕಿಸಿದರು.
Related Articles
Advertisement
ಬಿಎಸ್‌ವೈ ಡೋಂಗಿ ಹೋರಾಟ: ಜಿಂದಾಲ್ ಕಂಪನಿಗೆ ಯಾವುದೇ ಕಾರಣಕ್ಕೂ ಭೂಮಿ ಮಾರಾಟ ಮಾಡಬಾರದು. ಕೈಗಾರಿಕೆಗೆ ಭೂಮಿ ಕೊಡಲೇಬೇಕಿದ್ದರೆ, ಲೀಜ್ ಆಧಾರದ ಮೇಲೆ ಭೂಮಿ ಕೊಡಬೇಕು. ಈ ವಿಷಯದಲ್ಲಿ ಸಚಿವ ಡಿ.ಕೆ. ಶಿವಕುಮಾರ ಅಪ್ರಭುದ್ಧತೆಯ ಹೇಳಿಕೆ ನೀಡಿದ್ದಾರೆ. ಕಂಪನಿಗೆ ಭೂಮಿ ಕೊಟ್ಟರೆ ತೆರಿಗೆ ಕಟ್ಟುತ್ತಾರೆ, ರೈತರಿಂದ ಏನು ತೆರಿಗೆ ಬರುತ್ತದೆ ಎಂದು ಹೇಳಿರುವುದು ಮೂರ್ಖತನದ್ದು. ರೈತರು, ಬೆಳೆದಾಗ ಇಡೀ ದೇಶ ಅನ್ನ ತಿನ್ನುತ್ತದೆ. ಪರೋಕ್ಷವಾಗಿ ರೈತರು, ಈ ದೇಶಕ್ಕೆ ತೆರಿಗೆ ಕಟ್ಟುತ್ತಾರೆ ಎಂದು ಹೇಳಿದರು.
ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ಜಿಂದಾಲ್ ಕಂಪನಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿವೆ. ಬಿಜೆಪಿ ಒಂದೆಡೆ ಹೋರಾಟ ನಡೆಸಿದ್ದರೆ, ಇನ್ನೊಂದೆಡೆ ಅದೇ ಪಕ್ಷದ ಮಾಜಿ ಸಚಿವ, ಶಾಸಕ ಬಿ. ಶ್ರೀರಾಮುಲು, ಜಿಂದಾಲ್ ಕಂಪನಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನೀವು ಭೂಮಿ ಪಡೆಯುವ ವಿಷಯದಲ್ಲಿ ಮುಂದುವರಿಯಿರಿ ಎಂದು ಹೇಳುತ್ತಾರೆ. ಮತ್ತೂಂದೆಡೆ ಯಡಿಯೂರಪ್ಪ ನೇತೃತ್ವದಲ್ಲಿ ಹೋರಾಟ ನಡೆಸಿದ್ದಾರೆ. ಹೀಗಾಗಿ ಬಿಜೆಪಿಯ ಹೋರಾಟ ಡೋಂಗಿತನದಿಂದ ಕೂಡಿದೆ ಎಂದು ಆರೋಪಿಸಿದರು.
ಅಧಿಸೂಚನೆ ಹೊರಡಿಸಿ: ಮಹದಾಯಿ ಹಾಗೂ ಕೃಷ್ಣಾ ನ್ಯಾಯಾಧೀಕರಣಗಳ ಅಂತಿಮ ತೀರ್ಪು ಹೊರ ಬಂದರೂ ಈ ವರೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ಅದೇ ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ತಮಿಳುನಾಡಿನ ಲಾಬಿಗೆ ಮಣಿದು ಅಧಿಸೂಚನೆ ಹೊರಡಿಸಲಾಗಿದೆ. ಕೃಷ್ಣಾ ಮತ್ತು ಮಹದಾಯಿ ನೀರು ಹಂಚಿಕೆ ತೀರ್ಪಿಗೆ ಅಧಿಸೂಚನೆ ಹೊರಡಿಸಿಲ್ಲ. ಈ ವಿಷಯದಲ್ಲಿ ರಾಜ್ಯದ 28 ಜನ ಸಂಸದರೂ ಕೇಂದ್ರದ ಮೇಲೆ ಒತ್ತಡ ತರಬೇಕು. ಅದರಲ್ಲೂ ಬಿಜೆಪಿಯಿಂದ 25 ಜನ ಸಂಸದರಾಗಿದ್ದು, ಇವರ ಜವಾಬ್ದಾರಿ ಹೆಚ್ಚಿದೆ. ಕೂಡಲೇ ಅಧಿಸೂಚನೆ ಹೊರಡಿಸದಿದ್ದರೆ ರಾಜ್ಯ ಸಂಸದರ ವಿರುದ್ಧ ರೈತ ಸಂಘ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಜಿ. ಶಾಂತಸ್ವಾಮಿಮಠ, ಜೆ.ಪಿ. ರಾಮಸ್ವಾಮಿ, ರವಿಕಿರಣ ಪೂಜಾರ, ಶಿವನಗೌಡ ಪಾಟೀಲ, ಎನ್. ರಾಮು, ಶ್ರೀಶೈಲ ನಾಯಿಕ, ಸಿದ್ದಪ್ಪ, ಗೋವಿಂದಪ್ಪ ಮುಂತಾದವರು ಉಪಸ್ಥಿತರಿದ್ದರು.