Advertisement

ಮುತ್ತೇ ಪ್ರಥಮ ಫ್ಯಾಷನ್ನೇ ಅದರ ನಿಯಮ

06:00 AM Dec 12, 2018 | |

ವಿಶೇಷವೆಂದರೆ, ಮುತ್ತುಗಳನ್ನು ಧರಿಸಿ ಬರುವುದು ಫ್ಯಾಷನ್‌ ಮಾಡುವ ಉದ್ದೇಶದಿಂದಲ್ಲ. ಜಾಗೃತಿ ಮೂಡಿಸುವ ಸದಾಶಯದಿಂದ ಈ ಆಚರಣೆಯನ್ನು ಎಲ್ಲ ದೇಶಗಳ ಜನರೂ ಮೆಚ್ಚಿಕೊಂಡಿದ್ದಾರೆ, ಒಪ್ಪಿಕೊಂಡಿದ್ದಾರೆ…

Advertisement

2015 ಡಿಸೆಂಬರ್‌ 15ರಿಂದ ಅಮೆರಿಕಾದಲ್ಲಿ ವೇರ್‌ ಯುವರ್‌ ಪರ್ಲ್ಸ್ ಡೇ (ಅಂದರೆ, ನಿಮ್ಮ ಮುತ್ತಿನ ಆಭರಣಗಳನ್ನು ತೊಡುವ ದಿನ) ಆಚರಿಸಲಾಗುತ್ತಿದೆ. ಈ ದಿನವನ್ನು ಬೇರೆ ದೇಶಗಳೂ ಆಚರಿಸಲು ಆರಂಭಿಸಿದವು. ವಿಶೇಷವೆಂದರೆ, ಈ ದಿನವನ್ನು ಫ್ಯಾಷನ್‌ಗಾಗಿ ಅಲ್ಲ, ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತದೆ. ಮುತ್ತಿನ ಆಭರಣ ತೊಡುವುದರಿಂದ ಅದೇನು ಜಾಗೃತಿ ಮೂಡಿಸಲು ಸಾಧ್ಯ ಎಂದು ನೀವು ಯೋಚಿಸುವುದಾದರೆ, ಇಲ್ಲಿದೆ ಉತ್ತರ. ಮೋಟಿವೇಶನಲ್‌ ಸ್ಪೀಕರ್‌ ಹಾಗು ಪ್ರಸಿದ್ಧ ಲೇಖಕಿ ಡಿಯಾನ್ನಾ ಬುಕರ್ಟ್‌ ಅವರು ಈ ವಿಶಿಷ್ಟ ದಿನ ಹುಟ್ಟಲು ಕಾರಣಕರ್ತರು. 

ಹೊಳೆಯುವ ಮುತ್ತಾಗಬೇಕು
ಖನ್ನತೆ ವಿರುದ್ಧ ತಮ್ಮ ಹೋರಾಟ ಮತ್ತು ಗೆಲುವನ್ನು ಬಿಂಬಿಸುವ ಮುತ್ತುಗಳನ್ನು ತೊಟ್ಟಾಗಲೆಲ್ಲ ಆಕೆಗೆ ತಾನು ನಡೆದು ಬಂದ ದಾರಿ ನೆನಪಾಗುತ್ತಿತ್ತಂತೆ. ಜೀವನದಲ್ಲಿ ಎಂದೂ ಧೈರ್ಯ ಕಳೆದುಕೊಳ್ಳಬಾರದು ಎಂದು ತಮಗೆ ತಾವು ನೆನಪು ಮಾಡಿಕೊಳ್ಳುತ್ತಿರಲು ಮುತ್ತುಗಳನ್ನು ತೊಟ್ಟರಂತೆ. ಸಾಗರದಲ್ಲಿ ಅದೆಷ್ಟೇ ಜೀವ ಜಂತುಗಳು ಇದ್ದರೂ, ಮುತ್ತು ಕದಿಯುವ ಕಡಲ್ಗಳ್ಳರು ಇದ್ದರೂ, ಮರಳಿನ ಆ ಒಂದು ಕಣ ಸಿಂಪಿಯೊಳಗೆ ನುಗ್ಗಿ ತಾಳ್ಮೆಯಿಂದ ಯಾವ ರೀತಿ ಹೊಳೆಯುವ ಮುತ್ತು ಆಗುತ್ತದೋ ಅದೇ ರೀತಿ, ನಾವು ಮನುಜರು, ಬದುಕಿನಲ್ಲಿ ಅದೆಷ್ಟೇ ಕಷ್ಟ ಬಂದರೂ ತಾಳ್ಮೆ ಕಳೆದುಕೊಳ್ಳದೆ ಮುತ್ತಾಗುವ ಬಗ್ಗೆಯಷ್ಟೇ ಯೋಚಿಸುತ್ತಾ ಇರಬೇಕು. ಮುಂದೊಂದು ದಿನ ನಾವು ಹೊಳೆಯುವ ಅಮೂಲ್ಯ ಮುತ್ತಾಗುತ್ತೇವೆ ಎಂಬುದು ಇವರ ನಂಬಿಕೆ. ಹಾಗಾಗಿ, ವರ್ಷದಲ್ಲಿ ಒಂದು ದಿನವಾದರೂ ಮುತ್ತಿನ ಹಾರ, ಉಂಗುರ, ಕೈ ಬಳೆ, ಕಿವಿಯೋಲೆಯಂಥ ಆಭರಣ ತೊಟ್ಟು ನಮಗೆ ನಾವೇ ಧೈರ್ಯ ಹೇಳಿಕೊಳ್ಳಬೇಕು ಎಂದು ಇವರು ಹೇಳುತ್ತಾರೆ. ಆದ್ದರಿಂದಲೇ ಈ ದಿನ ಪ್ರಾಮುಖ್ಯತೆ ಪಡೆಯಿತು. ನೀವೂ ಈ ದಿನವನ್ನು ಆಚರಿಸುವುದಾದರೆ ಹೆಚ್ಚು ಯೋಚಿಸಬೇಕಾಗಿಲ್ಲ. ಯಾವುದೇ ಮುತ್ತಿನ ಆಭರಣವನ್ನು ತೊಟ್ಟುಕೊಳ್ಳಬಹುದು.

ರಾಜಮನೆತನದ ಪ್ರತೀಕ
ಮುತ್ತಿನ ಉಂಗುರ, ಓಲೆ, ಬಳೆ, ಬ್ರೇಸ್‌ಲೆಟ್‌, ಮಾಟಿ, ಡಾಬು, ವಂಕಿ, ಸೊಂಟಪಟ್ಟಿ ಮತ್ತು ಇತರ ಆಭೂಷಣಗಳನ್ನು ನೃತ್ಯಗಾರರು ಮತ್ತು ವಧು ತೊಡುತ್ತಾರೆ. ಇವೆಲ್ಲ ಅಲ್ಲದೆ, ಮಹಿಳೆಯರು, ಮುತ್ತಿನ ಹಾರವನ್ನು ಕತ್ತಿಗೆ ಹಾಕುವ ಬದಲು ಮುಡಿಗೇರಿಸಿ ಸಿಂಗಾರ ಮಾಡುತ್ತಾರೆ. ಸರಳ ಬನ್‌ (ತುರುಬು) ಸುತ್ತಲೂ ಮುತ್ತಿನ ಹಾರವನ್ನು ಕಟ್ಟಿ ಕೇಶ ವಿನ್ಯಾಸ ಮಾಡಲಾಗುತ್ತದೆ. ಏರ್‌ ಹೋಸ್ಟೆಸ್‌ (ಗಗನ ಸಖೀಯರು)ಗಳೂ ಇಂಥ ಹೇರ್‌ಸ್ಟೈಲ್‌ ಮಾಡಿಕೊಳ್ಳುತ್ತಾರೆ.

ಪಾಶ್ಚಾತ್ಯ ಮತ್ತು ಸಾಂಪ್ರದಾಯಿಕ, ಎರಡೂ ಬಗೆಯ ಉಡುಪುಗಳ ಜೊತೆ ತೊಡಬಹುದಾದ ಆಭರಣಗಳಲ್ಲಿ ಒಂದು, ಮುತ್ತಿನ ಹಾರ. ನಮ್ಮ ಅಜ್ಜಿ, ಮುತ್ತಜ್ಜಿಯರೂ ತೊಡುತ್ತಿದ್ದ ಈ ಸರಳ ಆದರೂ ಸುಂದರವಾದ ಒಡವೆ ಇಂದಿಗೂ ಕ್ಲಾಸಿಕ…. ತೊಟ್ಟ ಉಡುಗೆಗೆ ಇನ್ನಷ್ಟು ಮೆರಗು ನೀಡುವ ಈ ಮುತ್ತಿನ ಹಾರವನ್ನು ರಾಜಮನೆತನದವರು, ಹಾಲಿವುಡ್‌, ಬಾಲಿವುಡ್‌, ಸ್ಯಾಂಡಲ್‌ವುಡ್‌, ಎಲ್ಲ ಭಾಷೆಯ ಚಿತ್ರ ನಟಿಯರು, ರಾಜಕಾರಣಿಗಳು, ವಾರ್ತಾವಾಚಕರು ತೊಟ್ಟಿದ್ದನ್ನು ನೀವು ನೋಡಿರಬಹುದು. ಆಫೀಸ್‌, ಹಬ್ಬ, ಪಾರ್ಟಿ, ಎಲ್ಲಿಬೇಕಾದರೂ ತೊಟ್ಟು ಹೋಗಬಹುದು! ಹಾಗಾಗಿ ನಿಮ್ಮ ಕಪಾಟಿನಲ್ಲಿರುವ ಹಳೇ ಮುತ್ತಿನ ಆಭರಣಗಳನ್ನು ಹೊರತೆಗೆಯಿರಿ. ಮುತ್ತು ತೊಟ್ಟು ನೀವು ಕೂಡ ಖನ್ನತೆಯ ಬಗ್ಗೆ ಜಾಗೃತಿ ಮೂಡಿಸಿ.

Advertisement

ಖನ್ನತೆ,  ಮಾನಸಿಕ ಒತ್ತಡ, ದುಗುಡ ಮತ್ತು ಇತರ ಸಮಸ್ಯೆಗಳ ವಿರುದ್ಧ ಸಮರ ಸಾರಿ ಗೆದ್ದು ಬರಲು ಮುತ್ತಿನ ಆಭರಣ ತೊಟ್ಟು ಸಂಭ್ರಮಿಸಬೇಕು ಎನ್ನುವುದೇ ಈ ದಿನದ ವೈಶಿಷ್ಟ. 

– ಅದಿತಿಮಾನಸ ಟಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next