Advertisement

ವಿಧಾನಪರಿಷತ್‌ನ ಎರಡು ಕ್ಷೇತ್ರಗಳಿಗೆ ಶಾಂತಿಯುತ ಮತದಾನ

11:30 AM Jun 09, 2018 | Team Udayavani |

ಪುತ್ತೂರು: ವಿಧಾನಪರಿಷತ್‌ನ ನೈಋತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶುಕ್ರವಾರ ತಾಲೂಕು ಕೇಂದ್ರದಲ್ಲಿ ಶಾಂತಿಯುತ ಮತದಾನ ಪ್ರಕ್ರಿಯೆ ನಡೆಯಿತು.

Advertisement

ತಾ.ಪಂ. ಕಚೇರಿ ವ್ಯಾಪ್ತಿಯ 3 ಮತದಾನ ಕೇಂದ್ರಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 5ರ ತನಕ ಮತದಾನ ಪ್ರಕ್ರಿಯೆ ನಡೆಯಿತು. ಪದವೀಧರ ಮತದಾರ ಕ್ಷೇತ್ರದ ಮತ ಚಲಾವಣೆಗೆ ಸಂಬಂಧಿಸಿದಂತೆ ಮತಗಟ್ಟೆ 18ರ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಒಟ್ಟು
875 ಮತದಾರರು, ಮತಗಟ್ಟೆ 18 ‘ಎ’ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ 875 ಮತದಾರರಿಗೆ ಮತದಾನ ಕೇಂದ್ರವನ್ನು ತೆರೆಯಲಾಗಿತ್ತು. ಶಿಕ್ಷಕ ಕ್ಷೇತ್ರದ ಮತದಾನಕ್ಕೆ ಸಂಬಂಧಿಸಿದಂತೆ ಸಾಮರ್ಥ್ಯಸೌಧದಲ್ಲಿ 805 ಮಂದಿ ಮತದಾರರಿಗೆ ಮತದಾನ ಕೇಂದ್ರವನ್ನು ತೆರೆಯಲಾಗಿತ್ತು.

ಕೇಂದ್ರ ಸಚಿವ, ಶಾಸಕರಿಂದ ಮತದಾನ
ಪುತ್ತೂರಿನಲ್ಲಿ ಮತದಾನ ಹಕ್ಕನ್ನು ಹೊಂದಿರುವ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಶಾಸಕ ಸಂಜೀವ ಮಠಂದೂರು ಅವರು ಬೆಳಗ್ಗೆ 10ರಿಂದ ಮತದಾನ ಕೇಂದ್ರಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ತಮ್ಮ ಮತ ಚಲಾಯಿಸಿದರು. ಬಿಜೆಪಿ ಪಕ್ಷದ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಆರ್‌.ಸಿ. ನಾರಾಯಣ, ಡಿ. ಶಂಭು ಭಟ್‌, ಪುಲಸ್ತ್ಯಾ ರೈ, ರಾಮದಾಸ್‌ ಹಾರಾಡಿ, ಚಂದ್ರಶೇಖರ್‌ ಬಪ್ಪಳಿಗೆ, ರಾಕೇಶ್‌ ರೈ ಕೆಡೆಂಜಿ ಮತಚಲಾಯಿಸಿದರು.

ಪದವೀಧರ ಕ್ಷೇತ್ರದ ಮತಗಟ್ಟೆಯಲ್ಲಿ ಸುಳ್ಯ ಹಾಗೂ ಮಡಪ್ಪಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ಶ್ಯಾಮ್‌ಪ್ರಸಾದ್‌ ಮತ್ತು ಪ್ರವೀಣ್‌ ಕುಮಾರ್‌, ಶಿಕ್ಷಕ ಕ್ಷೇತ್ರದ ಮತಗಟ್ಟೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿ ಶಿವರಾಜ್‌ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.

ಮತದಾರರಿಗೆ ನೀಡಲಾದ ನೇರಳೆ ಬಣ್ಣದ ಸ್ಕೆಚ್‌ ಪೆನ್‌ನಲ್ಲಿ ತಮ್ಮ ಆದ್ಯತೆಗೆ ಅನುಗುಣವಾಗಿ  ಪ್ರಾಶಸ್ತ್ಯದ ಮತವನ್ನು ಅಂಕೆಗಳ ಮೂಲಕ ಬ್ಯಾಲೆಟ್‌ ಪೇಪರ್‌ನಲ್ಲಿ ನಮೂದಿಸಿದರು. ಈ ಚುನಾವಣೆಗೆ ಇವಿಎಂ ಮತಯಂತ್ರದ ಬಳಕೆ ಇರಲಿಲ್ಲ.

Advertisement

ಬಿಗಿ ಭದ್ರತೆ
ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ಕೇಂದ್ರಗಳಲ್ಲಿ ಹಾಗೂ ಆವರಣದಲ್ಲಿ ಪಾರದರ್ಶಕ ಹಾಗೂ ಸುವ್ಯವಸ್ಥೆಯ ಹಿನ್ನೆಲೆಯಲ್ಲಿ ಸೆಕ್ಷನ್‌ ಹೇರಲಾಗಿತ್ತು. ಯಾವುದೇ ಅಹಿತಕರ ಘಟನೆಗಳಿಗೆ ಕಾರಣವಾಗದಂತೆ ಪೊಲೀಸ್‌ ಬಂದೋಬಸ್ತ್ ನಡೆಸಲಾಗಿತ್ತು. ಪುತ್ತೂರು ಸಹಾಯಕ ಕಮಿಷನರ್‌ ಎಚ್‌. ಕೆ. ಕೃಷ್ಣಮೂರ್ತಿ ಸ್ಥಳದಲ್ಲಿ ಉಪಸ್ಥಿತರಿದ್ದು ವವಸ್ಥೆಯ ಪರಿಶೀಲನೆ ನಡೆಸಿದರು.

ಸುಳ್ಯ ಬಿರುಸಿನ ಮತದಾನ 
ಸುಳ್ಯ : ವಿಧಾನಪರಿಷತ್‌ ನೈಋತ್ಯ ಪದವೀಧರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರಗಳಿಗೆ ಸಂಬಂಧಿಸಿ ಶುಕ್ರವಾರ ಸುಳ್ಯ ತಾಲೂಕು ಕಚೇರಿ ಮತ್ತು ಪಂಜ ನಾಡ ಕಚೇರಿ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು. ನೈಋತ್ಯ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿ ಸುಳ್ಯ ಮತಗಟ್ಟೆ 19ರಲ್ಲಿ 338 ಪುರುಷ, 206 ಮಹಿಳಾ ಮತದಾರರು ಸಹಿತ 544 ಮಂದಿ ಹಕ್ಕು ಚಲಾಯಿಸಿ, ಶೇ. 79.42 ಮತದಾನವಾಗಿದೆ. ಪಂಜ ಮತಗಟ್ಟೆ 20ರಲ್ಲಿ 86 ಪುರುಷರು, 71 ಮಹಿಳೆಯರು ಸಹಿತ 157 ಮಂದಿ ಹಕ್ಕು ಚಲಾಯಿಸಿ, ಶೇ. 85.33 ರಷ್ಟು ಮತದಾನವಾಗಿದೆ.

ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿ ಸುಳ್ಯ ಮತಗಟ್ಟೆ ಸಂಖ್ಯೆ 19ರಲ್ಲಿ 192 ಪುರುಷ, 153 ಮಹಿಳಾ ಮತದಾರರು ಸಹಿತ 345 ಮಂದಿ ಹಕ್ಕು ಚಲಾಯಿಸಿ, ಶೇ. 81.37ರಷ್ಟು ಮತದಾನವಾಗಿದೆ. ಪಂಜ ಮತಗಟ್ಟೆ ಸಂಖ್ಯೆ 20ರಲ್ಲಿ 68 ಪುರುಷ ಮತ್ತು 37 ಮಹಿಳಾ ಮತದಾರರು ಸಹಿತ 105 ಮಂದಿ ಹಕ್ಕು ಚಲಾಯಿಸಿ, ಶೇ. 82.03 ಮತದಾನವಾಗಿದೆ. ಅಪರಾಹ್ನ 1 ಗಂಟೆ ಹೊತ್ತಿಗೆ ನೈಋತ್ಯ ಪದವೀಧರ ಕ್ಷೇತ್ರ ಮತಗಟ್ಟೆ 19ರಲ್ಲಿ 48.91, 20ರಲ್ಲಿ 62.50 ಹಾಗೂ ಶಿಕ್ಷಕರ ಕ್ಷೇತ್ರದ 19ರಲ್ಲಿ 59.67, 20ರಲ್ಲಿ 65.63 ಶೇ. ಮತದಾನವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next