ಚಿತ್ತಾಪುರ: ಮನುಷ್ಯನಿಗೆ ಶಾಂತಿ, ನೆಮ್ಮದಿ ಸಂತೆ ಮಾರ್ಕೆಟ್‌ನಲ್ಲಿ ಸಿಗುವ ವಸ್ತು ಅಲ್ಲ. ಗುರುವಿನ ಪಾದ ದರ್ಶನ ಮಾಡಿದಾಗ ಶಾಂತಿ-ನೆಮ್ಮದಿ ಸಿಗುತ್ತದೆ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಗವಾಯಿ ಶ್ರೀ ಕಲ್ಲಯ್ಯಜ್ಜ ಹೇಳಿದರು.
ತಾಲೂಕಿನ ದಿಗ್ಗಾಂವ ಗ್ರಾಮದ ಪಂಚಗೃಹ ಹಿರೇಮಠದಲ್ಲಿ ಹಮ್ಮಿಕೊಂಡ ಕಾರ್ತಿಕ ಮಾಸ ದೀಪೋತ್ಸವ ಹಾಗೂ ನೂತನ ರಥೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರನ್ನು ಮೀರಿಸುವ ಶಕ್ತಿ ಗುರುವಿನಲ್ಲಿದೆ. ಕಣ್ಣು ಇಲ್ಲದ ಅನಾಥ ಮಕ್ಕಳನ್ನು ಗದುಗಿನ ನಮ್ಮ ಆಶ್ರಮಕ್ಕೆ ನೀಡಬೇಕು. ಅವರನ್ನು ನಾವು ಪೋಷಣೆ ಮಾಡುತ್ತೇವೆ ಎಂದರು.
ದಿಗ್ಗಾಂವ ಪಂಚಗೃಹ ಹಿರೇಮಠದ ಸಿದ್ದವೀರ ಶಿವಾಚಾರ್ಯರು ನೇತೃತ್ವ ವಹಿಸಿ, ದಿಗ್ಗಾಂವ ಮಠ ಇಂದು ಕೈಲಾಸದಂತೆ ಕಂಗೊಳಿಸುತ್ತಿದೆ. ಮಠದಲ್ಲಿ ಆರಂಭಗೊಂಡ ಪ್ರಥಮ ವರ್ಷದ ರಥೋತ್ಸವ ಇನ್ನು ಮುಂದೆ ಪ್ರತಿ ವರ್ಷವೂ ಜರುಗುತ್ತದೆ ಎಂದು ಹೇಳಿದರು.
ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ, ನಿರಗುಡಿಯ ಹವಾ ಮಲ್ಲಿನಾಥ ಮಹಾರಾಜ, ಬಮ್ಮನಳ್ಳಿಯ ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ದಂಡೋತಿ ಸಿದ್ದಲಿಂಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಗವಾಯಿ ಶ್ರೀ ಕಲ್ಲಯ್ಯಜ್ಜ ಅವರಿಗೆ 1606ನೇ ನಾಣ್ಯಗಳ ತುಲಾಭಾರ, ದಿಗ್ಗಾಂವದಸಿದ್ದವೀರ ಶಿವಾಚಾರ್ಯರಿಗೆ ನಾಣ್ಯಗಳಿಂದ ತುಲಾಭಾರ ಜರುಗಿತು. ಪಲ್ಲಕ್ಕಿ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಮಠಕ್ಕೆ ತಲುಪಿತು.
ಮಠದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರ ಮಧ್ಯೆ ಪ್ರಥಮ ರಥೋತ್ಸವ ಜರುಗಿತು. ಭಕ್ತರ ಜಯ ಘೋಷಗಳು ಮುಗಿಲು ಮುಟ್ಟಿದವು. ತೇರಿಗೆ ಭಕ್ತರು ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗದುಗಿನ ಪಂ| ಜಗದೀಶ ಶಾಸ್ತ್ರಿಗಳು ಪ್ರವಚನ ನಡೆಸಿಕೊಟ್ಟರು.
ತಾಳಿಕೋಟಿ ಶ್ರೀ, ಗೌವನಳ್ಳಿ ಶ್ರೀ, ಮುಖಂಡರಾದ ತಿಪ್ಪಣ್ಣ ಸಂಗಾವಿ, ಶರಣು ಸಜ್ಜನಶೆಟ್ಟಿ, ಮಲ್ಲಿನಾಥ ಬಾಗೋಡಿ, ಶ್ರೀಮಂತ ಗುತ್ತೇದಾರ, ಸಿದ್ದಣ್ಣಗೌಡ ಆರ್‌ಡಿ, ಶಂಭು ಭಂಗಿ, ಮಲ್ಲಿಕಾರ್ಜುನ ಪಾಟೀಲ್ ತೇಗಲತಿಪ್ಪಿ, ದೇವಿಂದ್ರಪ್ಪ ಅಣಿಕೇರಿ, ಸಾಹೇಬಗೌಡ ಪಾಟೀಲ್ ಸಾತನೂರ, ಅನಿಲ ಸ್ವಾಮಿ, ವೈಜನಾಥ ಝಳಕಿ, ಭೂಮಿಕಾ ಮಂಗಲಗಿ, ಸಿದ್ರಾಮಯ್ಯಸ್ವಾಮಿ, ವಿಜಯಕುಮಾರ, ಬಸವರಾಜ ಅಣಿಕೇರಿ, ಜಗದೀಶ ತೆಂಗಳಿ, ವಿಶ್ವನಾಥ ಇದ್ದರು. ನಾಗಭೂಷಣಸ್ವಾಮಿ ಹಿರೇಮಠ ಸ್ವಾಗತಿಸಿದರು. ಶರಣು ಊಡಗಿ ನಿರೂಪಿಸಿದರು.