ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಂಸದ ಪಿ.ಸಿ.ಮೋಹನ್, ಶುಕ್ರವಾರ ನಾಮಪತ್ರ ಸಲ್ಲಿಸಿದರು. ಬಿಜೆಪಿ ಲೋಕಸಭಾ ಚುನಾವಣೆ ಉಸ್ತುವಾರಿ ಆರ್.ಅಶೋಕ್, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಶಾಸಕರಾದ ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ ಮತ್ತು ಸಿ.ರಘು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಸುವ ಮುನ್ನ ನಡೆದ ರ್ಯಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರು. ಬೃಹತ್ ಮೆರವಣಿಗೆ ಮೂಲಕ ಬಿಬಿಎಂಪಿ ಕಚೇರಿಯಲ್ಲಿ ಇರುವ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಮುಖವಾಡಗಳನ್ನು ಕಾರ್ಯಕರ್ತರು ಧರಿಸಿದ್ದರು.
ಅಭ್ಯರ್ಥಿಯ ಆಸ್ತಿ ವಿವರ: ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಅಭ್ಯರ್ಥಿಯ ಬಳಿ 6.53 ಲಕ್ಷ, ಪತ್ನಿ ಶೈಲಾ ಮೋಹನ್ ಬಳಿ 5 ಲಕ್ಷ ಹಾಗೂ ಹತ್ತಿರದ ಸಂಬಂಧಿ ಬಳಿ 2 ಲಕ್ಷ ನಗದು ಇದೆ. ಪಿ.ಸಿ.ಮೋಹನ್ ಬಳಿ 15 ಲಕ್ಷ ಮೌಲ್ಯದ ಫಾರ್ಚುನರ್ ಕಾರು ಹೊರತುಪಡಿಸಿ ಬೇರ್ಯಾವ ವಾಹನ ಇಲ್ಲ.
ಮೋಹನ್ ಬಳಿ 17.50 ಲಕ್ಷ ಮೌಲ್ಯದ 500 ಗ್ರಾಂ. ಚಿನ್ನ, 1.50 ಲಕ್ಷ ಮೌಲ್ಯದ 3 ಕೆ.ಜಿ ಬೆಳ್ಳಿ, ಪತ್ನಿ ಹೆಸರಿನಲ್ಲಿ 18 ಲಕ್ಷ ಮೌಲ್ಯದ 500 ಗ್ರಾಂ. ಚಿನ್ನ, 2.50 ಲಕ್ಷ ಮೌಲ್ಯದ 5 ಕೆ.ಜಿ. ಚಿನ್ನ ಹಾಗೂ ಸಂಬಂಧಿ ಹೆಸರಿನಲ್ಲಿ 78 ಲಕ್ಷ ಮೌಲ್ಯದ 2250 ಕೆ.ಜಿ. ಚಿನ್ನ, 7.50 ಲಕ್ಷ ಮೌಲ್ಯದ 17 ಕೆ.ಜಿ. ಚಿನ್ನ ಹೊಂದಿದ್ದಾರೆ ಎಂದು ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ.
-ಒಟ್ಟು ನಗದು 13,53,879 ರೂ.
-ಒಟ್ಟು ಮಾರುಕಟ್ಟೆ ಮೌಲ್ಯ 50,09,01,572 ರೂ.
-ಚರಾಸ್ತಿ 25,46,27,742 ರೂ.
-ಸರ್ಕಾರಿ ಬಾಕಿ 84,44,424 ರೂ.
-ಸಾಲ 31,25,21,957 ರೂ.