Advertisement

ವಿವಿಧ ಇಲಾಖೆ ಸಿಬ್ಬಂದಿ ಪರದಾಟ

10:19 AM Jun 11, 2019 | Team Udayavani |

ದೇವದುರ್ಗ: ಗ್ರಾಮ ಪಂಚಾಯಿತಿ, ಪುರಸಭೆ, ಸಿಡಿಪಿಒ, ಸರ್ಕಾರಿ ಆಸ್ಪತ್ರೆ, ಸಿಡಿಪಿಒ, ವಸತಿ ನಿಲಯ ಸೇರಿ ಇಲಾಖೆ ಸಿಬ್ಬಂದಿಗೆ ಹಲವು ತಿಂಗಳ ವೇತನ ಆಗದ್ದರಿಂದ ಜೀವನ ನಿರ್ವಹಣೆ ಕಷ್ಟವಾಗಿದ್ದು, ನಿತ್ಯ ಇಲಾಖೆ ಕಚೇರಿಗೆ ಅಲೆದಾಡುವಂತಾಗಿದೆ.

Advertisement

ಗ್ರಾಪಂ ಸಿಬ್ಬಂದಿಗೆ 23 ತಿಂಗಳ ವೇತನ ಬಾಕಿ: ತಾಲೂಕಿನ 33 ಗ್ರಾಪಂ ವ್ಯಾಪ್ತಿಯ 22ಜನ ಕಂಪ್ಯೂಟರ್ ಆಪರೇಟರ್‌ಗಳಿಗೆ 23 ತಿಂಗಳಿಂದ ವೇತನ ಪಾವತಿ ಆಗಿಲ್ಲ. ನೀರು ನಿರ್ವಹಣೆ, ವಿದ್ಯುತ್‌, ಕರ ವಸೂಲಿ, ಪರಿಚಾರಕರು ಸೇರಿ ಇತರೆ ಕೆಲಸಕ್ಕೆ ನಿಯೋಜನೆಗೊಂಡ 295 ದಿನಗೂಲಿ ಸಿಬ್ಬಂದಿಗಳಿಗೆ ವರ್ಷದಿಂದ ವೇತನ ಆಗಿಲ್ಲ. ವೇತನ ಪಾವತಿಸುವಂತೆ ತಾಲೂಕು ಪಂಚಾಯಿತಿ ಸೇರಿ ಬೆಂಗಳೂರು ವಿಧಾನಸೌಧವರೆಗೆ ಸಿಬ್ಬಂದಿಗಳು ಹೋರಾಟ ಕೈಗೊಂಡರು ಅಧಿಕಾರಿಗಳು ವೇತನ ಪಾವತಿಸಿಲ್ಲ. ಹೀಗಾಗಿ ಮಕ್ಕಳ ಶಾಲಾ-ಕಾಲೇಜು ಶುಲ್ಕ ಪಾವತಿ, ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ.

ಆಶಾ ಕಾರ್ಯಕರ್ತಯರಿಗಿಲ್ಲ ವೇತನ: ಪಟ್ಟಣ ಸೇರಿ ತಾಲೂಕಿನಾದ್ಯಂತ ಸರಕಾರಿ ಆಸ್ಪತ್ರೆ ಅಧಿಧೀನದಲ್ಲಿ ಕೆಲಸ ಮಾಡುವ 236 236 ಆಶಾ ಕಾರ್ಯಕರ್ತೆಯರಿಗೆ ವೇತನ ವಿಳಂಬವಾಗಿದೆ. ಪ್ರಸಕ್ತ ವರ್ಷ ಮಾರ್ಚ್‌, ಏಪ್ರಿಲ್, ಮೇ ಮೂರು ತಿಂಗಳ ಸಹಾಯಧನ ಕೂಡ ಪಾವತಿಸಿಲ್ಲ. 2018ರಲ್ಲಿನ 9 ತಿಂಗಳ ಸಹಾಯಧನ ಬಾಕಿ ಉಳಿದಿದೆ. ಎಂಸಿಟಿಸಿ ಮೂಲಕ ಸಹಾಯಧನ ಪೂರೈಸಲಾಗುತ್ತಿತ್ತು. ಹಲವು ಬಾರಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರೂ ಸಹಾಯಧನ, ವೇತನ ವಿಳಂಬವಾಗಿದೆ ಎಂದು ಆಶಾ ಕಾರ್ಯಕರ್ತೆಯರು ದೂರಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು: ಪಟ್ಟಣ ಸೇರಿ ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 470 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು, ಸಹಾಯಕಿಯರಿಗೆ ನಾಲ್ಕು ತಿಂಗಳಿನಿಂದ ವೇತನ ಪಾವತಿಸಿಲ್ಲ. ಈಗಾಗಲೇ ಎರಡ್ಮೂರು ಬಾರಿ ತಾಪಂ ಎದುರು ಧರಣಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಹೀಗಾಗಿ ಕಾರ್ಯಕರ್ತೆಯರು ನಿತ್ಯ ಸಿಡಿಪಿಒ ಕಚೇರಿಗೆ ಅಲೆದಾಡುತ್ತಿದ್ದಾರೆ.

ಪೌರ ಸಿಬ್ಬಂದಿ: ಪುರಸಭೆಯ 45 ಜನ ದಿನಗೂಲಿ ಪೌರ ಕಾರ್ಮಿಕರಿಗೆ 15 ತಿಂಗಳಿಂದ ವೇತನ ಪಾವತಿಸಿಲ್ಲ. ಈ ಕಾರ್ಮಿಕರು ಕೆಲಸಕ್ಕೆ ಗೈರಾಗಿ ಪುರಸಭೆ ಎದುರು ಹೋರಾಟ ನಡೆಸಿದರೂ ಪುರಸಭೆ ಅಧಿಕಾರಿಗಳು ವೇತನ ಬಟವಡೆ ಮಾಡದೇ ಸತಾಯಿಸುತ್ತಿದ್ದಾರೆ ಎಂದು ಪೌರ ಕಾರ್ಮಿಕರು ದೂರಿದ್ದಾರೆ.

Advertisement

ವಸತಿ ನಿಲಯ: ಸಮಾಜ ಕಲ್ಯಾಣ, ಬಿಸಿಎಂ, ಎಸ್‌ಟಿ ಅಲ್ಪಸಂಖ್ಯಾತರ ಇಲಾಖೆಯ ವಸತಿ ನಿಲಯದಲ್ಲಿ ಅಡುಗೆ ಕೆಲಸ ಮಾಡುವ ಸಿಬ್ಬಂದಿಗಳಿಗೆ ಮೂರ್‍ನಾಲ್ಕು ತಿಂಗಳಿಂದ ವೇತನ ಪಾವತಿ ಆಗಿಲ್ಲ. ಇದೀಗ ಶಾಲಾ-ಕಾಲೇಜು ಆರಂಭವಾಗಿವೆ. ಮಕ್ಕಳ ಶಿಕ್ಷಣ ಶುಲ್ಕ ಪಾವತಿ ಸಮವಸ್ತ್ರ, ಪುಸ್ತಕ ಖರೀದಿಗೆ ಹಣದ ಅವಶ್ಯ ಅಗತ್ಯವಾಗಿದೆ. ಆದರೆ ವೇತನ ಪಾವತಿ ಆಗದ್ದರಿಂದ ನಿತ್ಯ ಕಚೇರಿಗೆ ಅಲೆಯುತ್ತಿದ್ದೇವೆ ಎಂದು ಅಡುಗೆ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

•ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next