ಗದಗ: ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹೊರಗುತ್ತಿಗೆ ಕಸ ಸಾಗಿಸುವ ವಾಹನ ಚಾಲಕರು, ವಾಟರ್ ಮನ್, ಡಾಟಾ ಆಪರೇಟರ್, ಕಸ ನಿರ್ವಹಣೆ ಸಹಾಯಕರು, ಒಳಚರಂಡಿ ಕಾರ್ಮಿಕರು, ಸ್ಮಶಾನ ಕಾವಲುಗಾರರು, ಸ್ಯಾನಿಟರಿ ಸೂಪರ್ ವೈಸರ್ಗಳನ್ನು ಪೌರಕಾರ್ಮಿಕರ ಮಾದರಿಯಲ್ಲಿ ನೇರ ವೇತನ ಜಾರಿಗೊಳಿಸುವಂತೆ ಆಗ್ರಹಿಸಿ ಹೊರಗುತ್ತಿಗೆ ನೌಕರರು ನಗರಸಭೆ ಎದುರು ಧರಣಿ ನಡೆಸಿದರು.
ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಪ್ಪ ಜಂಬಲದಿನ್ನಿ ಮಾತನಾಡಿ, ಮೇ 19ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ನೇರ ವೇತನಕ್ಕೊಳಪಡಿಸುವಂತೆ ಹಾಗೂ ಪೌರಕಾರ್ಮಿಕರ ಎರಡನೇ ಹಂತದ ನೇಮಕಾತಿಗೆ ಒತ್ತಾಯಿಸಲಾಗಿತ್ತು. ಜುಲೈಗೂ ಮುನ್ನವೇ ಬೇಡಿಕೆ ಕುರಿತು ಸಕಾರಾತ್ಮಕ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದ ಮುಖ್ಯಮಂತ್ರಿಗಳು ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಹೇಳಿದರು.
ರಾಜ್ಯದ ಎಲ್ಲ 312 ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಗರಗಳ ಸ್ವತ್ಛತೆ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಯಲ್ಲಿ 10 ಸಾವಿರಕ್ಕೂ ಹೆಚ್ಚು ಗುತ್ತಿಗೆ ನೌಕರರು ತೊಡಗಿಕೊಂಡಿದ್ದಾರೆ. ಕಸ ಸಾಗಿಸುವ ವಾಹನ ಚಾಲಕರು ಕಸ ನಿರ್ವಹಣೆಯ ಸಹಾಯಕರು ವಾಟರ್ ಮನ್ ಒಳಚರಂಡಿ ಕಾರ್ಮಿಕರು, ಡಾಟಾ ಆಪರೇಟರ್ಗಳು, ಸ್ಮಶಾನ ಕಾವಲುಗಾರರು ಸೇರಿ ನಾನಾ ವಿಭಾಗಗಳಲ್ಲಿ ಕಳೆದ 30ವರ್ಷಗಳಿಂದ ಪೌರಕಾರ್ಮಿಕರೊಟ್ಟಿಗೆ ದುಡಿಯುತ್ತಾ ಬಂದಿದ್ದಾರೆ.
ಅವರನ್ನು ಸಂಪೂರ್ಣವಾಗಿ ಖಾಯಂಗೊಳಿಸಲಿಲ್ಲ. ಈ ಕುರಿತು ಕಳೆದ ಐದು ವರ್ಷಗಳಿಂದ ಹಂತ ಹಂತವಾಗಿ ಹೋರಾಟ ನಡೆಸಿಕೊಂಡು ಬರಲಾಗಿದ್ದು ಈಗ ನಿರ್ಣಾಯಕ ಘಟ್ಟ ತಲುಪಿದೆ ಎಂದು ಹೇಳಿದರು. ಈ ವೇಳೆ ಹೊರಗುತ್ತಿಗೆ ನೌಕರರು ಇದ್ದರು.