ಕಲಬುರಗಿ: ಜಿಲ್ಲೆಯಲ್ಲಿರುವ ಸರ್ಕಾರಿ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರ ಗುತ್ತಿಗೆ ನೌಕರರ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಬುಧವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ ಸದಸ್ಯರು ಧರಣಿ ಮಾಡಿ ಸರ್ಕಾರವನ್ನು ಆಗ್ರಹಿಸಿದರು.
ಕಳೆದ ಹಲವು ತಿಂಗಳಿಂದ ಸಂಬಳ ನೀಡುತ್ತಿಲ್ಲ. ಅದೂ ಅಲ್ಲದೇ, ನೌಕರರ ಹೆಸರಿನಲ್ಲಿ ಇಪಿಎಫ್ ಮತ್ತು ಇಎಸ್‌ಐ ಹಣವನ್ನು ಪ್ರತಿ ತಿಂಗಳು ತುಂಬುತ್ತಿಲ್ಲ. ಕನಿಷ್ಟ ವೇತನ ನೀಡುವಂತೆ ಸರ್ಕಾರದ ಆದೇಶವಿದ್ದರೂ ಗುತ್ತಿಗೆದಾರರು ಸರಿಯಾಗಿ ಸಂಬಳ ನೀಡುತ್ತಿಲ್ಲ. ಈ ಕುರಿತು ಹಲವಾರು ಬಾರಿ ನಾವು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೆ ಕೇವಲ ಮನವಿ ಪಡೆದು ಸುಮ್ಮನಾಗುವುದು ವಾಡಿಕೆಯಾದಂತಿದೆ. ಆದ್ದರಿಂದ ಇಂತಹ ನಿರ್ಲಕ್ಷ್ಯ ಮನೋಭಾವ ಖಂಡಿಸಿ ನಾವು ಒಂದು ದಿನದ ಸಾಂಕೇತಿಕ ಧರಣಿ ಮಾಡುತ್ತಿದ್ದೇವೆ. ಈ ಸಮಸ್ಯೆ ಕೂಡಲೇ ಬಗೆ ಹರಿಯದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಧರಣಿ ನಿರತರು ಎಚ್ಚರಿಸಿದ್ದಾರೆ.
ಸಂಘದ ಜಿಲ್ಲಾ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಉಪಾಧ್ಯಕ್ಷ ಮೇಘರಾಜ ಕಠಾರೆ, ಜಗದೇವಿ ಚಂದನಕೇರಾ, ಮಾಪಣ್ಣ ಜಾನಕರ್, ಪರಶುರಾಮ ಹಡಲಗಿ, ಬಾಬು ಹೊಸಮನಿ, ಚಂದ್ರಕಾಂತ ಮಾಂಗ್ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.