Advertisement

ಬೆಳೆ ವಿಮೆ ಕಂತು ಪಾವತಿಸಿ: ಡಿಸಿ ರಾಮಚಂದ್ರನ್‌

08:04 AM Jun 21, 2019 | Suhan S |

ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ ಮುಂಗಾರು ಹಂಗಾಮಿಗೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ತೋಟಗಾರಿಕೆ ಬೆಳೆ ವಿಮಾ ಯೋಜನೆ ಅನುಷ್ಠಾನ ಗೊಳಿಸಲಾಗುತ್ತಿದ್ದು, ವಿಮೆ ಕಂತು ಪಾವತಿಸಲು ಜೂ.30 ಕೊನೆಯ ದಿನವಾಗಿದೆ. ರೈತರು ತಪ್ಪದೇ ವಿಮೆಗೆ ಒಳಪಡಿಸುವಂತೆ ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಹೇಳಿದರು.

Advertisement

ನವನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಅನುಷ್ಠಾನ ಕುರಿತು ಹಾಗೂ ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಳ ಟರ್ಮ್ಶೀಟ್‌ಗಳ ಅನುಮೋದನೆಗಾಗಿ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸತತವಾಗಿ ಬರಗಾಲ, ಅತಿವೃಷ್ಟಿ, ಅನಾವೃಷ್ಟಿ ಆವರಿಸುತ್ತಿದೆ. ರೈತರು ತೋಟಗಾರಿಕೆ ಬೆಳೆಗೆ ಬೆಳೆ ವಿಮೆಗೆ ಒಳಪಡಿಸುವಂತೆ ಮಾಡಬೇಕು. ರೈತರು ಪ್ರತಿಯೊಂದು ಬೆಳೆಯ ವಿಮಾ ಸರಿಯಾಗಿ ಭರಿಸಬೇಕು. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.

ತೋಟಗಾರಿಕೆ ಉಪ ನಿರ್ದೇಶಕ ಪ್ರಭುರಾಜ ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ದಾಳಿಂಬೆ ಬೆಳೆಗೆ 128 ಅಧಿಸೂಚಿತ ಗ್ರಾಮ ಪಂಚಾಯತಿಗಳಿದ್ದು, ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ.1,27,000 ಇದೆ. ಪ್ರತಿ ಹೆಕ್ಟೇರ್‌ಗೆ 6,350 ರೂ. ವಿಮಾ ಕಂತು ಪಾವತಿಸಬೇಕು ಎಂದು ಹೇಳಿದರು.

ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಈರುಳ್ಳಿ (ನೀರಾವರಿ, ಮಳೆ ಆಶ್ರಿತ), ಕೆಂಪು ಮೆಣಸಿನಕಾಯಿ (ನಿರಾವರಿ, ಮಳೆ ಆಶ್ರಿತ) ಹಾಗೂ ಅರಿಷಿಣ ವಿಮೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಈರುಳ್ಳಿ ಬೆಳೆಗೆ ವಿಮೆ ಕಂತು ಪಾವತಿಸುವ ಕೊನೆಯ ದಿನ ಆಗಸ್ಟ್‌ 14. ಕೆಂಪು ಮೆಣಸಿನಕಾಯಿ (ನೀರಾವರಿ) ಜುಲೈ31, ಕೆಂಪು ಮೆಣಸಿನಕಾಯಿ (ಮಳೆ ಆಶ್ರಿತ) ಆ. 14 ಹಾಗೂ ಅರಿಷಿಣ ಬೆಳೆಗೆ ಜುಲೈ 31 ಕೊನೆಯ ದಿನವಾಗಿದೆ ಎಂದು ತಿಳಿಸಿದರು.

Advertisement

ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಕಂತಿನ ಮೊತ್ತ ಒಂದೇ ಆಗಿದೆ. ಮುಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆಯ ಅನುಷ್ಠಾನಕ್ಕಾಗಿ ರೈತರು ಪಹಣಿ, ಆಧಾರ, ಬ್ಯಾಂಕ್‌ ಪಾಸ್‌ಬುಕ್‌ ನಕಲು ಪ್ರತಿ, ಸ್ವಯಂ ಘೋಷಿತ ಬೆಳೆ ವಿವರ ಹತ್ತಿರದ ಬ್ಯಾಂಕ್‌ಗಳಲ್ಲಿ ನೀಡಿ ಆನ್‌ಲೈನ್‌ ಮೂಲಕ ನೋಂದಾಯಿ ಸಿಕೊಳ್ಳಬಹುದಾಗಿದೆ ಎಂದರು.

ಜಿಲ್ಲೆಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮಾ ಯೋಜನೆಗೆ ಓರಿಯೆಂಟಲ್ ಇನ್ಸೂರನ್ಸ್‌ ಕಂಪನಿ ಹಾಗೂ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಗೆ ಫ್ಯೂಚರ್‌ ಜೆನೆರಾಲಿ ಇಂಡಿಯಾ ಇನ್ಸೂರನ್ಸ್‌ ಕಂಪನಿ ಅಧಿಸೂಚಿತ ವಿಮಾ ಕಂಪನಿಗಳಾಗಿವೆ ಎಂದು ತಿಳಿಸಿದರು.

ಸಭೆಯಲ್ಲಿ ತೋಟಗಾರಿಕಾ ಸಹಾಯಕ ನಿರ್ದೇಶಕರು ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next