Advertisement

ರಸ್ತೆ ದುರಸ್ತಿ ಮಾಡದಿದ್ರೂ ಬಿಲ್ ಪಾವತಿ

09:17 AM Jun 20, 2019 | Team Udayavani |

ಹುಬ್ಬಳ್ಳಿ: ತಾಲೂಕಿನ ನೂಲ್ವಿ-ಬೆಳಗಲಿ ರಸ್ತೆ ಪ್ಯಾಚ್ ವರ್ಕ್‌ ಕಾಮಗಾರಿ ಮಾಡದೆ ಬಿಲ್ ಪಾಸ್‌ ಮಾಡಿಸಿಕೊಳ್ಳಲಾಗಿದೆ ಎಂದು ತಾಪಂ ಸದಸ್ಯ ಫರ್ವೇಜ್‌ ಬ್ಯಾಹಟ್ಟಿ ಲೋಕಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಯಮಕನಮರಡಿ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

Advertisement

ಇಲ್ಲಿನ ಮಿನಿ ವಿಧಾನಸೌಧದ ತಾಪಂ ಸಭಾಭವನದಲ್ಲಿ ಬುಧವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಕೇಳಿದರು. ಆದರೆ, 2016ರಲ್ಲಿ ನೂಲ್ವಿ-ಬೆಳಗಲಿ ಮಧ್ಯದ ರಸ್ತೆಗೆ ಪ್ಯಾಚ್ ವರ್ಕ್‌ ಮಾಡಲಾಗಿದೆ ಎಂದು ಹೇಳಿ ಇಲಾಖೆಯಿಂದ ಸುಮಾರು 16 ಲಕ್ಷ ರೂ.ಗಳ ಬಿಲ್ನ್ನು ಹಿಂದಿನ ಅಧಿಕಾರಿ ಪಾಸು ಮಾಡಿಸಿಕೊಂಡಿದ್ದು, ರಸ್ತೆಯಲ್ಲಿ ಕಳೆದ ಹಲವು ವರ್ಷಗಳಿಂದ ಒಂದೇ ಒಂದು ಪ್ಯಾಚ್ ವರ್ಕ್‌ ಮಾಡಲಾಗಿಲ್ಲ ಎಂದು ಆರೋಪಿಸಿದರು.

ಪಿಡಬ್ಲ್ಯುಡಿ ಕಾರ್ಯನಿರ್ವಾಹಕ ಅಭಿಯಂತರ ಯಮಕನಮರಡಿ ಮಾತನಾಡಿ, 2016ರಲ್ಲಿ ನಾನು ಇರಲಿಲ್ಲ. ಈ ಹಿಂದೆ ಇದ್ದ ಅಧಿಕಾರಿಗಳಿಂದ ಮಾಹಿತಿ ಪಡೆದು ತಿಳಿಸಲಾಗುವುದು ಎಂದರು.

ಹೆಸ್ಕಾಂ ವಲಯ ಕಚೇರಿಗೆ ಒತ್ತಾಯ: ತಾಲೂಕಿನಾದ್ಯಂತ ವಿದ್ಯುತ್‌ ಸಮಸ್ಯೆ ಹೆಚ್ಚಾಗುತ್ತಿದ್ದು, ಕೆಲಸದ ಒತ್ತಡ ಹೆಚ್ಚು ಇರುವುದರಿಂದ ಶಿರಗುಪ್ಪಿ ಭಾಗದಲ್ಲಿ ಒಂದು ವಲಯ ಕಚೇರಿ ಆರಂಭಿಸುವಂತೆ ಮೂರು ವರ್ಷಗಳ ಹಿಂದೆ ಸ್ಥಳ ತೋರಿಸಿದರೂ ಕಚೇರಿ ಆರಂಭವಾಗಿಲ್ಲ ಎಂದರು.

ಹೆಸ್ಕಾಂ ಅಧಿಕಾರಿ ಕಿರಣಕುಮಾರ ಮಾತನಾಡಿ, ಸಿಬ್ಬಂದಿ ಕೊರತೆ ಇದ್ದು, ಇರುವ ಸಿಬ್ಬಂದಿಯಿಂದ ಕೆಲಸ ನಿರ್ವಹಿಸಿಕೊಳ್ಳಲಾಗುತ್ತಿದೆ. ಇದು ಅಲ್ಲದೆ ಶಿರುಗುಪ್ಪಿಯಲ್ಲಿ ವಲಯ ಆರಂಭಿಸಿದರೆ ಸಿಬ್ಬಂದಿ ಅಲ್ಲಿಗೆ ಹೋಗಲು ಸಿದ್ದರಿಲ್ಲ ಎಂಬ ಅನಿಸಿಕೆಗೆ, ಆಕ್ರೋಶ ವ್ಯಕ್ತಪಡಿಸಿದ ಚೈತ್ರಾ ಶಿರೂರ, ಅಧಿಕಾರಿಗಳು, ಸಿಬ್ಬಂದಿ ಎಲ್ಲಿ ಹೋದರು ಕೆಲಸ ಮಾಡಬೇಕು. ಏಕೆ ಬರುವುದಿಲ್ಲ. ಈ ಕುರಿತು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

ಹೆಸ್ಕಾಂ ಸಮಸ್ಯೆಗಳಿಗೆ ಸ್ಪಂದನೆ ನೀಡಲೆಂದು ಹೆಲ್ಪ್ಲೈನ್‌ ನಂಬರ್‌ ನೀಡುತ್ತೀರಿ. ಅಲ್ಲಿಗೆ ಸಂಪರ್ಕಿಸಿದರೇ ಸರಿಯಾದ ಮಾಹಿತಿ ನೀಡುವುದಿಲ್ಲ. ಹೀಗಾದರೇ ಸಮಸ್ಯೆ ಯಾರ ಬಳಿ ಪರಿಹರಿಸಿಕೊಳ್ಳುವುದು ಎಂದು ತಾಪಂ ಸದಸ್ಯರು ಅಧಿಕಾರಿಯನ್ನು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಹೆಸ್ಕಾಂ ಅಧಿಕಾರಿ ಭರವಸೆ ನೀಡಿದರು.

ಪಶುವೈದ್ಯಾಧಿಕಾರಿಗಳು ಎಲ್ಲಿ?: ತಾಲೂಕಿನ ಹಲವು ಪಶುವೈದ್ಯಕೀಯ ಕೇಂದ್ರಗಳಲ್ಲಿ ವೈದ್ಯರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಇರುವ ವೈದ್ಯರು ಸರಿಯಾದ ಸಮಯಕ್ಕೆ ಕೇಂದ್ರಗಳಿಗೆ ಹೋಗುವುದಿಲ್ಲ ಎಂದು ಚೈತ್ರಾ ಶಿರೂರ ಆರೋಪಿಸಿದರು. ಕೋಳಿವಾಡ ಗ್ರಾಮದಲ್ಲಿ ಬೆಳಿಗ್ಗೆ ಬರಬೇಕಾಗಿರುವ ವೈದ್ಯರು ಮಧ್ಯಾಹ್ನ 12:00 ಗಂಟೆ ನಂತರ ಬರುತ್ತಾರೆ. ಇನ್ನು ಔಷಧಿ, ವ್ಯಾಕ್ಸಿನ್‌ಗಳನ್ನು ಹೊರಗಡೆ ಬರೆದು ಕೊಡುವ ಬಗ್ಗೆ ದೂರುಗಳು ಬಂದಿವೆ ಎಂದು ಡಾ| ಕೊಂಡಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ| ಕೊಂಡಿ, ಕೋಳಿವಾಡಕ್ಕೆ ತೆರಳುವ ವೈದ್ಯರು ಮೊದಲಿಗೆ ಶಿರಗುಪ್ಪಿಯಲ್ಲಿ ನಿರ್ಮಿಸಿರುವ ಮೇವು ವಿತರಣಾ ಕೇಂದ್ರಕ್ಕೆ ತೆರಳಿ ಅಲ್ಲಿನ ಕೆಲಸ ಮುಗಿಸಿ ನಂತರ ಕೋಳಿವಾಡಕ್ಕೆ ತೆರಳುತ್ತಾರೆ. ಇದರಿಂದ ಕೊಂಚ ಸಮಸ್ಯೆ ಆಗಿದೆ. ವ್ಯಾಕ್ಸಿನ್‌ ಸಮಸ್ಯೆ ಇಲ್ಲ. ಹೊರಗಡೆ ಬರೆದು ಕೊಡುವುದಿಲ್ಲ. ಔಷಧಿಗಳ ಕೊರತೆ ಇದ್ದು, ಅದನ್ನು ಬರೆದುಕೊಡಲಾಗುತ್ತದೆ ಎಂದರು. ಮುಂಬರುವ ದಿನಗಳಲ್ಲಿ ತಾಲೂಕಿನಾದ್ಯಂತ ಬೇಕಾಗುವ ಔಷಧಿ ಕುರಿತು ಸೂಕ್ತ ವರದಿ ನೀಡುವಂತೆ ಅಧಿಕಾರಿಗೆ ಸೂಚಿಸಲಾಯಿತು.

ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಸುಮಾರು 83 ಕೊಠಡಿಗಳನ್ನು ನೆಲಸಮ ಮಾಡಿ ಮರು ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಗ್ರಾಮೀಣ ಶಿಕ್ಷಣಾಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಕುಡಿಯುವ ನೀರು: ತಾಲೂಕಿನ ಹಲವು ಕಡೆ ಇರುವ ಶುದ್ಧ ಕುಡಿಯುವ ನೀರಿನ ಘಟಕ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಭಂಡಿವಾಡ, ಮಂಟೂರ ಗ್ರಾಮಗಳಲ್ಲಿ ಕುಡಿಯುವ ನೀರು ಸಮಸ್ಯೆ ಇದೆ. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಟ್ಯಾಂಕರ್‌ ಸಹ ತುಕ್ಕು ಹಿಡಿದಿವೆ. ಈ ಕುರಿತು ಅಧಿಕಾರಿಗಳಿಂದ ಕುಡಿಯುವ ನೀರಿನ ಪರಿಶೀಲನೆ ಮಾಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಮಧ್ಯಾಹ್ನದ ನಂತರ ಭೂಸೇನಾ ನಿಗಮ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ರೇಷ್ಮೆ ಇಲಾಖೆ, ಬಿಸಿಎಂ, ಆಹಾರ ಇಲಾಖೆ ಸೇರಿದಂತೆ ಇನ್ನುಳಿದ ಇಲಾಖೆಯ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಗುರುಪಾದಪ್ಪ ಕಮಡೊಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಫಕ್ಕೀರವ್ವ ಹುಲಂಬಿ, ತಾಪಂ ಸಿಇಒ ಎಂ.ಎಂ. ಸವದತ್ತಿ ಹಾಗೂ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು, ಪಿಡಿಒಗಳು ಇದ್ದರು. ಸಿ.ಎಚ್. ಅದರಗುಂಚಿ ಸಭೆ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next