ಹೈದರಾಬಾದ್: ಆಂಧ್ರಪ್ರದೇಶದ ಜನಸೇನಾ ನಾಯಕ, ಖ್ಯಾತ ನಟ ಪವನ್ ಕಲ್ಯಾಣ್ ಇತ್ತೀಚೆಗೆ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ವಿರುದ್ಧ ತಿರುಗಿಬಿದ್ದಿದ್ದಾರೆ.
ಇದೇ ಉತ್ಸಾಹದಲ್ಲಿ ಅವರು ಸಿನೆಮಾ ಶೈಲಿಯಲ್ಲಿ ಆಂಧ್ರ ಪ್ರದೇಶದ ಗುಂಟೂರಿನ ಹೆದ್ದಾರಿಯಲ್ಲಿ ಕಾರಿನ ಮೇಲೆ ಕುಳಿತು ಸವಾರಿ ಮಾಡಿದ್ದರು. ಅದೀಗ ಅವರಿಗೆ ದೊಡ್ಡ ಸಂಕಷ್ಟ ತಂದಿಟ್ಟಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ ಸ್ಪಷ್ಟ ಸಾಕ್ಷ್ಯವಿರುವುದರಿಂದ ಅವರ ವಿರುದ್ಧ ಪೊಲೀಸರು ಪ್ರಬಲ ದೂರನ್ನೇ ದಾಖಲಿಸಿಕೊಂಡಿದ್ದಾರೆ.
ನ.5ರಂದು ಗುಂಟೂರು ರಸ್ತೆಯಲ್ಲಿ ಪವನ್ ಕಲ್ಯಾಣ್ ತಮ್ಮ ಪಡೆಗಳೊಂದಿಗೆ ಸಂಚರಿಸಿದ್ದರು. ಕಾರಿನ ಮೇಲೆ ಪವನ್ ಕಾಲುಚಾಚಿ ಕುಳಿತಿದ್ದರು. ಅವರ ಭದ್ರತಾ ಸಿಬಂದಿ, ಇನ್ನಿತರರು ಕಾರಿನ ಎರಡೂ ಬದಿಗಳಿಗೆ ನೇತುಬಿದ್ದಿದ್ದರು. ಇದೇ ಮಾದರಿಯಲ್ಲಿ ಹಲವು ಕಾರುಗಳಲ್ಲಿ ಅವರನ್ನು ಜನ ಹಿಂಬಾಲಿಸುತ್ತಿದ್ದರು. ಒಂದು ಕಡೆ ವೇಗವಾಗಿ ಚಲಿಸುತ್ತಿರುವ ಕಾರುಗಳು,ಮತ್ತೊಂದು ಕಡೆ ಅಭಿಮಾನಿಗಳು… ಸಣ್ಣ ವ್ಯತ್ಯಾಸವಾಗಿದ್ದರೂ ಹತ್ತಾರು ಮಂದಿ ಸಾವಿಗೀಡಾಗುತ್ತಿದ್ದರು.