ಬಸ್ರೂರು: ಬಸ್ರೂರು ಬಸ್ ನಿಲ್ದಾಣದಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿ ಬಲಕ್ಕೆ ಒಂದು ರಸ್ತೆ ಮಾರ್ಗೋಳಿ ಶನೀಶ್ವರ ದೇವಸ್ಥಾನದ ಎದುರು ಹೋಗುತ್ತದೆ. ಈ ರಸ್ತೆಯ ಆರಂಭದಲ್ಲಿ 150ಮೀ. ದೂರಕ್ಕೆ ಶಾಸಕರ ನಿಧಿ ಮತ್ತು ಜಿ.ಪಂ. ನಿಧಿಯಿಂದ ಕಾಂಕ್ರೀಟ್ ಹಾಕಲಾಗಿದೆ. ಕಾಂಕ್ರೀಟ್ ರಸ್ತೆ ಮುಗಿಯುತ್ತಿದ್ದಂತೆ ಅಗಲ ಕಿರಿದಾದ 2.5 ಕಿ.ಮೀ ಉದ್ದದ ಈ ರಸ್ತೆಯಲ್ಲಿ ಬರೇ ಹೊಂಡಗಳೇ ತುಂಬಿವೆ. ಈ ರಸ್ತೆಯ ಮಧ್ಯೆ ರೈಲ್ವೆ ಮೇಲ್ಸೇತುವೆ ಸಿಗುತ್ತದೆ. ಅಲ್ಲಿಂದಾಚೆಗಿನ ರಸ್ತೆ ಆನಗಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುತ್ತದೆ. ಮತ್ತೂಂದು ಕಿರು ಸೇತುವೆಯವರೆಗೆ ಅಂದರೆ ಆನಗಳ್ಳಿ ಗ್ರಾ.ಪಂ. ಜನತಾ ಕಾಲನಿವರೆಗಿನ ರಸ್ತೆಗೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ.5 ಲಕ್ಷ ವೆಚ್ಚದಲ್ಲಿ 2017-18 ನೇ ಸಾಲಿನಲ್ಲಿ ಕಾಂಕ್ರೀಟ್ ಹಾಕಲಾಗಿದೆ.
ಆನಗಳ್ಳಿಯ ಕಿರು ಸೇತುವೆಯ ನಂತರ ಸಾಗುವ ರಸ್ತೆಗೆ ಈ ಹಿಂದೆಯೇ ಮಳೆಗಾಲದಲ್ಲಿ ಜಲ್ಲಿಕಲ್ಲು ಹಾಕಿದ್ದು ಈಗ ಆ ಜಲ್ಲಿಕಲ್ಲುಗಳು ಎದ್ದು ಬಂದಿದ್ದು ದ್ವಿಚಕ್ರ ಸಂಚಾರ ಮತ್ತು ಪಾದಚಾರಿಗಳಿಗೂ ಸಂಕಷ್ಟವಾಗಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮಾರ್ಗೋಳಿಯಿಂದ ಆನಗಳ್ಳಿಗೆ ಸಂಪರ್ಕ ರಸ್ತೆಯಾಗಿರುವ ಈ ಅಗಲ ಕಿರಿದಾದ ರಸ್ತೆಯ ಹೊಂಡಗಳನ್ನು ಮುಚ್ಚಿದರೆ ಒಂದು ಉತ್ತಮ ಸಂಪರ್ಕ ರಸ್ತೆ ನಿರ್ಮಾಣವಾದಂತಾಗುತ್ತದೆ.
ಸುಗಮ ಸಂಚಾರಕ್ಕೆ ಅನುವು
ಬಸ್ರೂರುಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಮಾರ್ಗೋಳಿ ರಸ್ತೆಯ ಹೊಂಡಗಳನ್ನು ಮುಚ್ಚಿ ರಸ್ತೆಯನ್ನು ಸರಿಪಡಿಸಲು ಸಂಸದರ ನಿಧಿಯಿಂದ ರೂ.4 ಲಕ್ಷ ಅನುದಾನ ಮಂಜೂರಾಗಿದೆ. ಅನುದಾನ ಬಂದ ತಕ್ಷಣ ಈ ರಸ್ತೆಯ ಕಾಮಗಾರಿ ಮುಗಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.
-ನಾಗರಾಜ ಗಾಣಿಗ, ಸಂತೆಕಟ್ಟೆ,
-ಅಧ್ಯಕ್ಷರು, ಗ್ರಾ.ಪಂ. ಬಸ್ರೂರು
ಅನುದಾನ ಮಂಜೂರು
ವಾರಾಹಿ ಯೋಜನೆಯಡಿ ನೂತನ ರಸ್ತೆ ನಿರ್ಮಾಣ ಕಾಮಗಾರಿಗೆ ರೂ.50 ಲಕ್ಷ ಅನುದಾನ ಮಂಜೂರಾಗಿದೆ. ಅನುದಾನ ಬಂದ ಕೂಡಲೇ ರಸ್ತೆ ಸರಿಪಡಿಸಲಾಗುವುದು
-ಅನಿಲ್,
ಅಭಿವೃದ್ಧಿ ಅಧಿಕಾರಿ,ಗ್ರಾ.ಪಂ.ಆನಗಳ್ಳಿ.