ಹಳೆಯಂಗಡಿ : ಪಾವಂಜೆ ಮೇಳದ ಯಶಸ್ಸಿಗೆ ಕಟೀಲು ಶ್ರೀ ದೇವಿಯ ಅನುಗ್ರಹವೇ ಶ್ರೀರಕ್ಷೆಯಾಗಿದೆ. ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಅನನ್ಯ ಭಕ್ತರು ಕಲಾವಿದರನ್ನು ಕಲೆಯನ್ನು ಪ್ರೋತ್ಸಾಹಿಸಿ ಯಕ್ಷಗಾನವನ್ನು ಬೆಳೆಸುತ್ತಿದ್ದಾರೆ. ಅನೇಕ ದಾನಿಗಳ ಸಹಿತ ದೇವಸ್ಥಾನದ ಆಡಳಿತ ಮಂಡಳಿಯಿಂದ ಇದು ಸಾಕಾರಗೊಳ್ಳುತ್ತಿದೆ ಎಂದು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಧಾನ ಭಾಗವತ ಹಾಗೂ ಮೇಳದ ಸಂಚಾಲಕ ಸತೀಶ್ ಶೆಟ್ಟಿ ಪಟ್ಲ ಹೇಳಿದರು.
ಪಾವಂಜೆ ನಾಗವೃಜ ಕ್ಷೇತ್ರದ ಬಾಕಿಮಾರು ಗದ್ದೆಯಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕೃಪಾಪೋಷಿತ ಯಕ್ಷಗಾನ ಮಂಡಳಿಯ 3ನೇ ವರುಷದ ಯಕ್ಷಗಾನ ತಿರುಗಾಟಕ್ಕೆ ಶನಿವಾರ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧಾರ್ಮಿಕ ವಿಧಿವಿಧಾನವನ್ನು ದೇಗುಲದ ಧರ್ಮದರ್ಶಿ ಡಾ| ಯಾಜಿ ನಿರಂಜನ ಭಟ್ ನೆರವೇರಿಸಿದರು. ತಿರುಗಾಟಕ್ಕೆ ರಂಗಸ್ಥಳದಲ್ಲಿ ಸಮಾಜ ಸೇವಕರಾದ ಪ್ರಸಾದ್ ಶೆಟ್ಟಿ ಹಾಗೂ ಮಲ್ಲಿಕಾ ಶೆಟ್ಟಿ ದಂಪತಿ ದೀಪ ಬೆಳಗಿಸಿ ಚಾಲನೆ ನೀಡಿದರು.
ಸಮ್ಮಾನ: ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ದಾನಿಗಳನ್ನು ಹಾಗೂ ವಿಶೇಷ ಸೇವಾಕರ್ತರನ್ನು ಗೌರವಿಸಿದರು. ಕರ್ನಾಟಕ ರಾಜ್ಯೋತ್ಸವ ಪುರಸ್ಕೃತರಾದ ರಾಜ್‌ಕುಮಾರ್ ಬಹ್ರೈನ್ ಹಾಗೂ ಅಶೋಕ್ ಶೆಟ್ಟಿ ಸರಪಾಡಿ ಅವರನ್ನು ಸಮ್ಮಾನಿಸಲಾಯಿತು.
Related Articles
ವೈದ್ಯ ಡಾ| ಪದ್ಮನಾಭ ಕಾಮತ್ ಅವರು ಸಂಕಲನಗೊಳಿಸಿ ಅಕ್ಷಯ ಕೃಷ್ಣ ಸಂಗ್ರಹಿಸಿದ 40 ಭಾಗವತರು ಹಾಡಿದ 400 ಹಾಡುಗಳ ಸಿಡಿ “ಯಕ್ಷ ಕರ್ಣಾನಂದಕರೀ’ಯನ್ನು ಅನಾವರಣಗೊಳಿಸಿ ಉಚಿತವಾಗಿ ಹಂಚಲಾಯಿತು.
ಅಶೋಕ್ ಶೆಟ್ಟಿ ಕಲ್ಪವೃಕ್ಷ, ಸಚ್ಚಿದಾನಂದ ಶೆಟ್ಟಿ ಮುಂಬಯಿ, ಪ್ರೊ| ಎಂ.ಎಲ್. ಸಾಮಗ, ಸಿಎ ದಿವಾಕರ ರಾವ್, ಯೋಗೀಂದ್ರ ಭಟ್ ಉಳಿ, ಕದ್ರಿ ನವನೀತ್ ಶೆಟ್ಟಿ, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುಕೇಶ್ ಪಾವಂಜೆ, ಅಶ್ವಿನ್ ದೇವಾಡಿಗ, ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿಯ ಹಿಮಕರ್ ಕದಿಕೆ ಉಪಸ್ಥಿತರಿದ್ದರು. ಪುರುಷೋತ್ತಮ ಭಂಡಾರಿ ಅಡ್ಯಾರು ನಿರೂಪಿಸಿದರು. ಕಲಾವಿದರ ಕೂಡುವಿಕೆಯಲ್ಲಿ ಪಾಂಡವಾಶ್ವಮೇಧ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಸ್ವರ್ಣ ಕಿರೀಟದ ಆಕರ್ಷಣೆ
ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು ಸೇವಾ ರೂಪದಲ್ಲಿ ನೀಡಿದ ಸ್ವರ್ಣ ಕಿರೀಟ ಈ ಬಾರಿಯ ಆಕರ್ಷಣೆಯಾಗಿದೆ. ಪಾವಂಜೆ ಅಣ್ಣಪ್ಪಯ್ಯ ಯುವ ವೇದಿಕೆಯಿಂದ ಉಯ್ನಾಲೆಯ ಬೆಳ್ಳಿಯ ಪ್ರಭಾವಳಿ, ಬಿರುವೆರ್ ಕುಡ್ಲ ಅವರಿಂದ ಬೆಳ್ಳಿ ಕಿರೀಟ, ಯೋಗೀಂದ್ರ ಭಟ್ ಉಳಿ ಅವರಿಂದ ಬೆಳ್ಳಿಯ ಶಂಖ, ರಾಮ್‌ಪ್ರಸಾದ್‌ರಿಂದ ಬೆಳ್ಳಿಯ ಬಿಲ್ಲು-ಬಾಣ, ಶರತ್ ಕಾರ್ನಾಡು ಅವರಿಂದ 6 ಆಯುಧಗಳನ್ನು ಸೇವಾ ರೂಪದಲ್ಲಿ ನೀಡಲಾಯಿತು. ಪ್ರಸ್ತುತ ತಿರುಗಾಟದಲ್ಲಿ ಪ್ರೊ| ಪವನ್ ಕಿರಣ್‌ಕೆರೆ ರಚಿಸಿರುವ “ನಾಗ ಸಂಜೀವನ’ ಪ್ರಸಂಗ ಪ್ರದರ್ಶನಗೊಳ್ಳಲಿದೆ. 180ಕ್ಕೂ ಹೆಚ್ಚು ಯಕ್ಷಗಾನ ಬುಕ್ಕಿಂಗ್ ಆಗಿದೆ.