Advertisement

ಎಸ್‌.ನಾರಾಯಣ್‌ ಪುತ್ರ ಪವನ್‌ ಹೀರೋ

09:02 AM Dec 01, 2019 | Lakshmi GovindaRaj |

ಹಿರಿಯ ನಿರ್ದೇಶಕ ಎಸ್‌.ನಾರಾಯಣ್‌ ಅವರ ಪುತ್ರ ಪಂಕಜ್‌ ಹೀರೋ ಆಗಿದ್ದು ಗೊತ್ತೇ ಇದೆ. ಅವರ ಮತ್ತೊಬ್ಬ ಪುತ್ರ ಪವನ್‌ ಹೀರೋ ಆಗುತ್ತಿದ್ದಾರೆ ಎಂಬ ಮಾತು ಆಗಾಗ ಓಡಾಡುತ್ತಲೇ ಇತ್ತು. ಆ ಮಾತು ಈಗ ನಿಜವಾಗಿದೆ. ಹೌದು, ಪವನ್‌ ಈಗ ಹೊಸ ಚಿತ್ರಕ್ಕೆ ಹೀರೋ. ಆ ಚಿತ್ರಕ್ಕೆ “ಚಿ.ರಾ. ಮುತ್ತು ಚಿ.ಸೌ.ರತ್ನ’ ಎಂಬ ಹೆಸರಿಡಲಾಗಿದೆ. ಈ “ಮುತ್ತು ರತ್ನ’ದ ಹಿಂದೆ ನಿರ್ದೇಶಕ ಶ್ರೀಕಾಂತ್‌ ಹುಣಸೂರು ನಿಂತಿದ್ದಾರೆ. ಇವರಿಗೆ ಇದು ಮೊದಲ ನಿರ್ದೇಶನದ ಚಿತ್ರ.

Advertisement

ಇದಕ್ಕೂ ಮೊದಲು “ಜೋಗಿ’ ಪ್ರೇಮ್‌ ಜೊತೆ ಕೆಲಸ ಮಾಡಿದ್ದಾರೆ. ಹಲವು ಧಾರಾವಾಹಿಗಳಲ್ಲೂ ಕೆಲಸ ಮಾಡಿದ ಅನುಭವ ಶ್ರೀಕಾಂತ್‌ ಹುಣಸೂರು ಅವರಿಗಿದೆ. ಚಿತ್ರದ ಶೀರ್ಷಿಕೆ ಹೇಳುವಂತೆ, ಇದೊಂದು ಲವ್‌ ಕಮ್‌ ಅರೇಂಜ್‌ ಮ್ಯಾರೇಜ್‌ ಸ್ಟೋರಿಯನ್ನು ಹೇಳುತ್ತದೆ. ಚಿತ್ರದ ಒನ್‌ಲೈನ್‌ ಸ್ಟೋರಿ ಬಗ್ಗೆ ಹೇಳುವ ನಿರ್ದೇಶಕ ಶ್ರೀಕಾಂತ್‌ ಹುಣಸೂರು, “ಇದೊಂದು ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಲವ್‌ಸ್ಟೋರಿ. ಅವಿದ್ಯಾವಂತ ಹುಡುಗನೊಬ್ಬ, ಆ ಊರಿನ ಪಾಳೇಗಾರನ ಮಗಳನ್ನು ಪ್ರೀತಿಸುವ ಕಥೆ ಹೊಂದಿದೆ.

ಗೊತ್ತು ಗುರಿ ಇಲ್ಲದ, ಬದುಕಿನ ಬಗ್ಗೆ ಕಾಳಜಿಯೇ ಇರದ ಹುಡುಗ ಲೈಫ‌ಲ್ಲಿ ಆ ಹುಡುಗಿ ಎಂಟ್ರಿಯಾದಾಗ, ಏನೆಲ್ಲಾ ಅವಘಡಗಳು ನಡೆಯುತ್ತವೆ. ಆಕೆ ಅವನ ಜೊತೆ ಇದ್ದಾಗ, ಹೇಗೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದು ಚಿತ್ರದ ಕಥೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಶ್ರೀಕಾಂತ್‌. ಪವನ್‌ಗೆ ನಾಯಕಿಯಾಗಿ ಅಂಜನಾ ಕಾಣಿಸಿಕೊಳ್ಳುತ್ತಿದ್ದು, ಇದು ಅವರ ಮೊದಲ ಚಿತ್ರ. ಉಳಿದಂತೆ ಚಿತ್ರದಲ್ಲಿ ಚರಣ್‌ರಾಜ್‌, ನಾಗಾಭರಣ, ಸುಚೇಂದ್ರ ಪ್ರಸಾದ್‌, ರವಿಶಂಕರ್‌ಗೌಡ, ರಾಜೇಶ್‌ ನಟರಂಗ, ಗಿರಿ, ವೀಣಾಸುಂದರ್‌ ಇತರರು ನಟಿಸುತ್ತಿದ್ದಾರೆ’ ಎಂಬುದು ನಿರ್ದೇಶಕರ ಹೇಳಿಕೆ.

ಸುಮಾರು 45 ದಿನಗಳ ಕಾಲ ಕೊಳ್ಳೆಗಾಲ, ಚಾಮರಾಜನಗರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ದೇವಕಿ ಚಿತ್ರ ನಿರ್ಮಿಸುತ್ತಿದ್ದು, ಇದು ಇವರ ಮೊದಲ ನಿರ್ಮಾಣದ ಚಿತ್ರ. ರಘುನಿಡುವಳ್ಳಿ ಸಂಭಾಷಣೆ ಬರೆದರೆ, ಲೋಕೇಶ್‌ ಸಂಗೀತವಿದೆ. ಚೇತನ್‌ಕುಮಾರ್‌, ಅರಸು ಅಂತಾರೆ, ಸಂತೊಷ್‌ ನಾಯಕ್‌ ಸಾಹಿತ್ಯವಿದೆ. ಕೃಷ್ಣ ಮಂಡ್ಯ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಡಿಸೆಂಬರ್‌ 1 ರಂದು ಚಿತ್ರಕ್ಕೆ ಮುಹೂರ್ತ ನೆರವೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next