Advertisement

ಜಿಲ್ಲೆಯಲ್ಲಿ ಪೌತಿ ಆಂದೋಲನ ಆರಂಭ

01:06 PM Nov 22, 2020 | Suhan S |

ಕೋಟ, ನ. 21:  ಪಹಣಿಯಲ್ಲಿ  ದಾಖಲಿಸಿರುವ ಖಾತೆದಾರ ಮೃತಪಟ್ಟ ಅನಂತರ  ಅವರ ಉತ್ತರಾಧಿಕಾರಿಗಳು ಹೆಸರು  ತಿದ್ದುಪಡಿ  ಮಾಡದಿರುವುದರಿಂದ ಆಸ್ತಿ ಮುಂದಿನ ತಲೆಮಾರಿಗೆ ವರ್ಗಾವಣೆಯಾಗದೆ ಉಳಿದುಕೊಳ್ಳುವುದು ಹಾಗೂ ಇದರಿಂದಾಗಿ ಆ ಕುಟುಂಬ ಸರಕಾರದ ಸೌಲಭ್ಯಗಳಿಂದ ವಂಚಿತವಾಗುವ ಲಕ್ಷಾಂತರ ಪ್ರಕರಣ ಗಳು ರಾಜ್ಯದಲ್ಲಿವೆ.

Advertisement

ಇಂತಹ ದೀರ್ಘ‌ ಕಾಲಿಕ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪೌತಿ ಅಭಿಯಾನ ಯೋಜನೆಯನ್ನು ಜಾರಿಗೆ ತಂದಿದೆ.  ಇದೀಗ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಗೊಂಡಿದೆ ಮತ್ತು ಈ ರೀತಿಯ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಹಾಗೂ ಮನೆಗಳಿಗೆ ಭೇಟಿ ನೀಡಿ ದಾಖಲೆ ಸಂಗ್ರಹಿಸುವಲ್ಲಿ  ಅಧಿಕಾರಿಗಳು ತೊಡಗಿಸಿಕೊಂಡಿದ್ದಾರೆ.

ವರ್ಗಾವಣೆ ಹೇಗೆ? :  ಮುಂದಿನ ತಲೆಮಾರಿಗೆ ವರ್ಗಾವಣೆ ಯಾಗದೆ ಉಳಿದುಕೊಂಡ  ಪಹಣಿ ಪ್ರಕರಣಗಳು ತಮ್ಮ  ವ್ಯಾಪ್ತಿಯಲ್ಲಿ ಎಷ್ಟಿವೆ ಎನ್ನುವುದನ್ನು ಪತ್ತೆಹಚ್ಚುವ ಕಾರ್ಯವನ್ನು ಸ್ಥಳೀಯ ತಹಶೀಲ್ದಾರರ ಮಾರ್ಗದರ್ಶನದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಅಧಿಕಾರಿಗಳು ಮಾಡುತ್ತಾರೆ. ಜನರೇ ನೇರವಾಗಿ ತಮ್ಮ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದರೂ ಪರಿಗಣಿಸಲಾಗುತ್ತದೆ. ಅನಂತರ ಇವುಗಳನ್ನು ಮೂರು ಹಂತವಾಗಿ ವಿಭಾಗಿಸಿ ಸುಲಭದಲ್ಲಿ ಇತ್ಯರ್ಥ ಪಡಿಸುವ ಪ್ರಕರಣಗಳನ್ನು ಮೊದಲ  ಹಂತದಲ್ಲಿ ಕೈಗೆತ್ತಿಕೊಂಡು ಸೂಕ್ತ ದಾಖಲೆ ಗಳನ್ನು ಸಂಗ್ರಹಿಸುತ್ತಾರೆ.

ಮನೆ ಬಾಗಿಲಿಗೆ ಅಧಿಕಾರಿಗಳು :  ಕಚೇರಿಗಳಿಗೆ ಬರಲು ಸಾಮರ್ಥ್ಯ ವಿಲ್ಲದ ಕುಟುಂಬಗಳನ್ನು ಗುರುತಿಸಿ ನೇರವಾಗಿ ಅವರ ಮನೆಗಳಿಗೆ ತೆರಳಿ ದಾಖಲೆ  ಪತ್ರಗಳನ್ನು  ಪಡೆದು ವಾರಸುದಾರರಿಗೆ ಆಸ್ತಿ ವರ್ಗಾವಣೆಗೊಳಿಸುವ ಪ್ರಕ್ರಿಯೆ ನಡೆಸುತ್ತಾರೆ ಹಾಗೂ ಅಗತ್ಯ ದಾಖಲೆಗಳಿಲ್ಲದ ಕುಟುಂಬಗಳಿಗೆ ನ್ಯಾಯಾಲಯದ ಮೂಲಕ  ದಾಖಲೆಗಳನ್ನು ಪಡೆದು ಹಾಜರುಪಡಿಸು ವಂತೆ ತಿಳಿಸಲಾಗುತ್ತದೆ. ಆದರೆ ನ್ಯಾಯಾಲಯದಲ್ಲಿ ವಿವಾದ, ವೀಲುನಾಮೆ ಮುಂತಾದ  ಪ್ರಕರಣಗಳನ್ನು ಇಲ್ಲಿ ಕೈಗೆತ್ತಿ ಕೊಳ್ಳಲಾಗುವುದಿಲ್ಲ.

ಜಿಲ್ಲೆಯಲ್ಲಿ ಶುರು  : ಕಂದಾಯ ಇಲಾಖೆಗೆ ಸಂಬಂಧಿಸಿದ ಕರ್ತವ್ಯ ಪಾಲನೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿರುವ ಉಡುಪಿ ಜಿಲ್ಲೆಯಲ್ಲಿ  ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರ ಮಾರ್ಗದರ್ಶನದಂತೆ ಜಿಲ್ಲಾದ್ಯಂತ  ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಸೂಕ್ತ ದಾಖಲೆಯ ಕೊರತೆ, ಅಧಿಕಾರಿಗಳ ಅಸಹಕಾರ ಮುಂತಾದ ಕಾರಣಗಳಿಂದ ಹಲವು ಬಾರಿ ಕಚೆೇರಿಗಳಿಗೆ ಅಲೆದಾಡಿದರೂ ಇತ್ಯರ್ಥವಾಗದೆ ಬಾಕಿ ಉಳಿದ ಪಹಣಿ ಪ್ರಕರಣ ಇದೀಗ ಈ ಯೋಜನೆಯಿಂದಾಗಿ ಮನೆಬಾಗಿಲಲ್ಲೇ ಪರಿಹಾರವಾಗುತ್ತಿದೆ.

Advertisement

ಜಿಲ್ಲಾದ್ಯಂತ ಯಶಸ್ಸಿಗೆ ಯತ್ನ :  ಪೌತಿ ಅದಾಲತ್‌ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಬೇಕು ಎನ್ನುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಸಮಸ್ಯೆ ಇರುವ ನೂರಾರು ಕುಟುಂಬಗಳನ್ನು ಪತ್ತೆ ಹಚ್ಚಿ ಅವರ ಮನೆಗಳಿಗೆ ಭೇಟಿ ನೀಡಿ ಉತ್ತರಾಧಿಕಾರ ವರ್ಗಾಯಿಸುವ ಕಾರ್ಯಚಾಲ್ತಿಯಲ್ಲಿದೆ.ಜಿ.ಜಗದೀಶ್‌, ಜಿಲ್ಲಾಧಿಕಾರಿಗಳು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.