Advertisement

ಗರಿಗೆದರಿದ ಪುತ್ತೂರು ಗ್ರಾಮಾಂತರ ಜಿಲ್ಲೆ ಕನಸು

11:28 PM Feb 20, 2020 | mahesh |

ಪುತ್ತೂರು: ರಾಜ್ಯ ಮುಂಗಡ ಪತ್ರ ಮಂಡನೆಗೆ ದಿನಗಣನೆ ಆರಂಭಗೊಂಡಿದ್ದು, ಪುತ್ತೂರು ಗ್ರಾಮಾಂತರ ಜಿಲ್ಲಾ ಕೇಂದ್ರ ಘೋಷಣೆ ನಿಟ್ಟಿನಲ್ಲಿ ಸರಕಾರಕ್ಕೆ ಒತ್ತಡ ಹೇರುವ ಅಗತ್ಯ ಹೆಚ್ಚಿದೆ. ಹಲವು ವರ್ಷಗಳಿಂದ ಜಿಲ್ಲಾ ಕೇಂದ್ರವಾಗಬೇಕು ಎಂಬ ಬೇಡಿಕೆಗೆ ಮುಂದಿನ ಮೂರು ವರ್ಷಗಳ ಅವಧಿಯಲ್ಲದರೂ ಸ್ಪಂದನೆಯ ನಿರೀಕ್ಷೆ ಹೊಂದಲಾಗಿದೆ. ಸ್ವತಃ ಮುಖ್ಯಮಂತ್ರಿ ಚುನಾವಣೆ ಸಂದರ್ಭ ಪುತ್ತೂರು ಜಿಲ್ಲೆಯನ್ನಾಗಿ ರೂಪಿಸುವ ಭರವಸೆ ನೀಡಿ ರುವುದು ಈ ಪ್ರಯತ್ನಕ್ಕೆ ಪುಷ್ಟಿ ನೀಡಿದೆ.

Advertisement

92 ವರ್ಷ ತುಂಬಿವೆ
ಬ್ರಿಟಿಷ್‌ ಕಾಲದ ಸೌತ್‌ ಕೆನರಾ ಜಿಲ್ಲೆಯಲ್ಲಿ ಪುತ್ತೂರು ತಾಲೂಕು ಕೇಂದ್ರವಾಗಿತ್ತು. ದಾಖಲೆಗಳ ಪ್ರಕಾರ 1927ರಲ್ಲಿ ಉಪ್ಪಿನಂಗಡಿ ತಾಲೂಕು ಕೇಂದ್ರವನ್ನು ಪುತ್ತೂರಿಗೆ ವರ್ಗಾಯಿಸಿದ್ದು, ಅಂದರೆ ಪುತ್ತೂರು ತಾಲೂಕು ಕೇಂದ್ರವಾಗಿ 92 ವರ್ಷಗಳು ತುಂಬಿವೆ. ದ.ಕ. ಜಿಲ್ಲಾ ಕೇಂದ್ರ ಮಂಗಳೂರಿನಿಂದ 56 ಕಿ.ಮೀ. ದೂರದಲ್ಲಿರುವ ಪುತ್ತೂರು ಸಾಹಿತ್ಯಿಕ, ಸಾಂಸ್ಕೃತಿಕ, ರಾಜಕೀಯ, ಕೃಷಿ, ಶಿಕ್ಷಣ, ಕ್ರೀಡೆ ಕ್ಷೇತ್ರಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದೆ. ಜಿಲ್ಲಾ ಕೇಂದ್ರವಾಗಬೇಕು ಎಂದು ಹಲವು ಸರಕಾರಗಳ ಅವಧಿಯಲ್ಲಿ ಬೇಡಿಕೆ ಸಲ್ಲಿಸಲಾಗಿದೆ.

ಕೇಂದ್ರ ಸ್ಥಾನ
ಕೇರಳದ ಗಡಿ, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಕಡಬ, ವಿಟ್ಲ ಗಡಿ ಭಾಗಕ್ಕೆ ಅಂಟಿಕೊಂಡಿರುವ ಪುತ್ತೂರು ಮಾಣಿ- ಮೈಸೂರು, ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ರಾಜಧಾನಿಗೆ ಸಂಪರ್ಕ ಕಲ್ಪಿಸುತ್ತಿದೆ. ಪ್ರಗತಿ ಹಾಗೂ ಸಂಪರ್ಕದ ದೃಷ್ಟಿಯಲ್ಲಿ ಮಂಗಳೂರು ಅನಂತರದ ಸ್ಥಾನದಲ್ಲಿರುವ ಪುತ್ತೂರು ಗ್ರಾಮಾಂತರ ಜಿಲ್ಲೆಯಾಗಲು ಅರ್ಹತೆ ಹೊಂದಿದೆ.

ಹೈಟೆಕ್‌ ಬಸ್‌ ನಿಲ್ದಾಣ, ಕೆಎಸ್‌ಆರ್‌ಟಿಸಿ ವಿಭಾಗೀಯ ಕೇಂದ್ರ, ಮಹಿಳಾ ಠಾಣೆ, ಮಹಿಳಾ ಕಾಲೇಜು, ಮಿನಿ ವಿಧಾನಸೌಧ, ನಗರಸಭೆ, ನ್ಯಾಯಾಲಯ ಕಟ್ಟಡ, ಸರಕಾರಿ ಮೆಡಿಕಲ್‌ ಕಾಲೇಜಿಗೆ 40 ಎಕರೆ ಸ್ಥಳ ಮೀಸಲು, ಪೊಲೀಸ್‌ ತರಬೇತಿ ಕೇಂದ್ರ ಸ್ಥಾಪನೆಗೆ ಪ್ರಯತ್ನ ಇತ್ಯಾದಿ ಜಿಲ್ಲಾ ಕೇಂದ್ರದ ಬೇಡಿಕೆಗೆ ಪೂರಕವಾಗಿವೆ.

ಅರ್ಹತೆ ಏನು?
ಈ ಹಿಂದೆ ರಚಿಸಲಾದ ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಿಂತ ಅಧಿಕ ವಿಸ್ತೀರ್ಣ, ಜನಸಂಖ್ಯೆಯನ್ನು ಪುತ್ತೂರು ಹೊಂದಿದೆ ಎನ್ನುವುದು ಜಿಲ್ಲಾ ಕೇಂದ್ರದ ಬೇಡಿಕೆಗೆ ಇರುವ ಮುಖ್ಯ ಸಂಗತಿ. ರಾಮನಗರ ಜಿಲ್ಲೆಯ ಒಟ್ಟು ವಿಸ್ತೀರ್ಣ 3,575.58 ಚದರ ಮೀ., ಜನಸಂಖ್ಯೆ 10.5 ಲಕ್ಷ ಇದೆ. ಚಿಕ್ಕಾಬಳ್ಳಾಪುರ ಜಿಲ್ಲೆ 10 ಲಕ್ಷ ಜನಸಂಖ್ಯೆ ಮತ್ತು 4,100 ಚದರ ಮೀಟರ್‌ ವಿಸ್ತೀರ್ಣ ಹೊಂದಿದೆ. 2011ರ ಜನಗಣತಿ ಪ್ರಕಾರ ಪುತ್ತೂರು ಜಿಲ್ಲಾ ವ್ಯಾಪ್ತಿಗೆ ಸೇರಬಹುದಾದ ಐದು ತಾಲೂಕುಗಳ ಒಟ್ಟು ಜನಸಂಖ್ಯೆ 10.15 ಲಕ್ಷ ಇದೆ. 3,979 ಚದರ ಮೀ. ವಿಸ್ತೀರ್ಣ ಹೊಂದಿದೆ. ಈ ಅಂಕಿ-ಅಂಶವನ್ನು ಪರಿಗಣಿಸಿದರೆ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಸ್ತೀರ್ಣ ಮತ್ತು ಜನಸಂಖ್ಯೆಗಿಂತ ಪ್ರಸ್ತಾವಿತ ಪುತ್ತೂರು ಜಿಲ್ಲೆ ದೊಡ್ಡದಿದೆ. ಪುತ್ತೂರು ತಾಲೂಕನ್ನು ಆವರಿಸಿರುವ ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳವನ್ನು ಸೇರಿಸಿ ಪುತ್ತೂರನ್ನು ಜಿಲ್ಲಾ ಕೇಂದ್ರವನ್ನಾಗಿ ರೂಪಿಸಬಹುದು.

Advertisement

ಎಸ್‌ಪಿ ಕಚೇರಿ ಸ್ಥಳಾಂತರದ ಬೇಡಿಕೆ
ಮಂಗಳೂರು ನಗರಕ್ಕೆ ಕಮಿಷನರೆಟ್‌ ಸ್ಥಾನ ಸಿಕ್ಕಿದ ಅನಂತರ ಎಸ್‌ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸಬೇಕೆಂಬ ಕೂಗು ಕೇಳಿ ಬಂದಿತ್ತು. ವಿ.ಎಸ್‌. ಆಚಾರ್ಯ ಗೃಹ ಸಚಿವರಾಗಿದ್ದ ಅವಧಿಯಲ್ಲಿ ಈ ಬಗ್ಗೆ ಪ್ರಯತ್ನ ನಡೆದಿತ್ತು. ಅದು ಈಡೇರಲಿಲ್ಲ. ಕಮಿಷನರೆಟ್‌ ವ್ಯಾಪ್ತಿಗೆ ಒಳಪಟ್ಟ ಮಂಗಳೂರಿನಲ್ಲಿ ಎಸ್‌ಪಿ ಕಚೇರಿಯ ಅಗತ್ಯವಿಲ್ಲ. ಇಲ್ಲ. ಅದರ ಕಾರ್ಯವ್ಯಾಪ್ತಿ ಇರುವುದು ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯದಲ್ಲಿ. ಹಾಗಾಗಿ ಎಸ್ಪಿ ಕಚೇರಿಯನ್ನು ಪುತ್ತೂರಿಗೆ ವರ್ಗಾಯಿಸಬೇಕು ಎನ್ನುವ ಬೇಡಿಕೆ ಇದೆ.

ಚುನಾವಣೆ ಸಂದರ್ಭ ಭರವಸೆ
ಕಳೆದ ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಪುತ್ತೂರಿಗೆ ಭೇಟಿ ನೀಡಿದ್ದ ಬಿ.ಎಸ್‌. ಯಡಿಯೂರಪ್ಪ ಅವರು ತಾನು ಅಧಿಕಾರಕ್ಕೆ ಬಂದಲ್ಲಿ ಪುತ್ತೂರನ್ನು ಗ್ರಾಮಾಂತರ ಜಿಲ್ಲೆಯನ್ನಾಗಿ ಘೋಷಿಸುವುದಾಗಿ ಬಹಿರಂಗವಾಗಿ ಭರವಸೆ ನೀಡಿದ್ದರು. ಜಿಲ್ಲೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಶಾಸಕ ಸಂಜೀವ ಮಠಂದೂರು ಅವರು ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ಪ್ರಸ್ತಾವನೆ ಸಲ್ಲಿಸಲಾಗಿದೆ
ಪುತ್ತೂರು ಜಿಲ್ಲೆ ರಚನೆ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈ ಬಾರಿಯ ಬಜೆಟ್‌ನಲ್ಲಿ ರಾಜ್ಯದಲ್ಲಿ ಹೊಸ ಜಿಲ್ಲೆ ಘೋಷಣೆ ಮಾಡುವ ಸಾಧ್ಯತೆ ಕಡಿಮೆ. ಅದಕ್ಕೆ ಬದಲಾಗಿ ಜಿಲ್ಲಾ ಕೇಂದ್ರಕ್ಕೆ ಬೇಕಿರುವ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಿದ್ದಾರೆ. ಮುಂದೆ ಜಿಲ್ಲಾ ಕೇಂದ್ರಕ್ಕೆ ಇದು ಪೂರಕ ಪ್ರಕ್ರಿಯೆ. ಪುತ್ತೂರಿಗೆ ಎಸ್‌ಪಿ ಕಚೇರಿ ಸ್ಥಳಾಂತರ ಮೊದಲಾದ ಬೇಡಿಕೆಗಳನ್ನು ಸಲ್ಲಿಸಲಾಗಿದೆ.
– ಸಂಜೀವ ಮಠಂದೂರು, ಶಾಸಕ, ಪುತ್ತೂರು

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next