Advertisement

ತುಳುನಾಡಿನ ವಿಶಿಷ್ಟ ಪರ್ವದಿನ ಪತ್ತನಾಜೆ

06:33 PM May 24, 2022 | Team Udayavani |

ಪ್ರತಿಯೊಂದು ಪ್ರದೇಶದ ಹಾಗೂ ಸಮಾಜದ ಸಾಂಸ್ಕೃತಿಕ ಪದ್ಧತಿ, ಪರಂಪರೆಗಳು ಪ್ರತ್ಯ ಪ್ರತ್ಯೇಕವಾಗಿ ವಿಶಿಷ್ಟವಾಗಿರುತ್ತವೆ. ಪ್ರತಿಯೊಂದು ವರ್ಗದ ವರ್ಷಾರಂಭ ಹಾಗೂ ವರ್ಷಾಂತ್ಯ ನಿರ್ದಿಷ್ಟವಾಗಿರುತ್ತದೆ. ವರ್ಷದ ನಿಶ್ಚಿತ ಕಾಲಗಳಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳು ಪೂರ್ವ ಕಾಲದಿಂದಲೇ ನಿಶ್ಚಿತವಾಗಿವೆ ಎನ್ನಬಹುದು.

Advertisement

ತುಳುನಾಡಿನಲ್ಲಿ ನಿರ್ದಿಷ್ಟವಾದ ಕರ್ತವ್ಯ ಭಾಗಗಳು ಪದ್ಧತಿಯಂತೆ ಜಾರ್ದೆ ತಿಂಗಳಲ್ಲಿ ಪ್ರಾರಂಭಗೊಂಡು ಬೇಶ ತಿಂಗಳ ಹತ್ತನೇ ದಿನಕ್ಕೆ ಸಮಾಪ್ತಗೊಳ್ಳುತ್ತವೆ. ಆ ಹತ್ತನೇ ದಿನವನ್ನು ಪತ್ತನಾಜೆ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಮೇ ತಿಂಗಳ 24 ಅಥವಾ 25ರಂದು ಪತ್ತನಾಜೆ ಆಚರಿಸಲ್ಪಡುತ್ತದೆ. ತುಳುನಾಡಿನಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿರುತ್ತದೆ. ಇಲ್ಲಿನ ವಾರ್ಷಿಕ ಜೀವನಾವರ್ತನ ಕ್ರಮದಲ್ಲಿ ಈ ದಿನ ವರ್ಷದ ಕೊನೆಯ ಗಣ್ಯ ದಿನವಾಗಿದೆ.

ಪತ್ತನಾಜೆಯ ವಿಚಾರದಲ್ಲಿ ಕೆಲವೊಂದು ನಂಬಿಕೆಗಳಿವೆ. ಪತ್ತನಾಜೆಯಂದು ಹತ್ತು ಹನಿ ಮಳೆ ಸುರಿಯುತ್ತದೆ ಎಂಬ ಭಾವನೆ ಇದೆ. ಪತ್ತನಾಜೆಯಂದು ದೇವರು ಮನುಷ್ಯನ ತೂಕ ನೋಡುತ್ತಾನಂತೆ!

ಪತ್ತನಾಜೆ ಬಂಡಿ ಹಗ್ಗ ಎಲ್ಲ ಒಳಗೆ !
(ಪತ್ತನಾಜೆಗ್‌ ಬಂಡಿ ಬಲ್‌É ಪ‌ೂರಾ ಉಳಾಯಿ!) ಎಂಬ ಮಾತಿದೆ.
ಮಲಯಾಳದ ಆಡು ಮಾತೊಂದರಲ್ಲಿ ಪತ್ತಂಜಾವು ಎಂಬ ಹೇಳಿಕೆ ಇದೆ. ಇದನ್ನು ಕೊನೆಯ ಎಂದು ಅರ್ಥವಿಸಲಾಗುತ್ತದೆ.
ಬೇರೆ ಬೇರೆ ಪ್ರದೇಶಗಳಲ್ಲಿ ಹಾಗೂ ಸಮಾಜಗಳಲ್ಲಿ ವಾರ್ಷಿಕ ಕಾರ್ಯಕಲಾಪಗಳ ಆರಂಭ ಹಾಗೂ ಅಂತ್ಯಕ್ಕೆ ನಿರ್ದಿಷ್ಟ ಅವಧಿಗಳಿ
ರುತ್ತವೆ. ತುಳುನಾಡಿನಲ್ಲಿ ಪತ್ತನಾಜೆ (ಹತ್ತನಾವಧಿ) ಎಂಬುದು ಕಾರ್ಯ ಕಲಾಪಗಳ ಕೊನೆಯ ದಿನ ಎಂಬ ಅರ್ಥದಲ್ಲಿದೆ.

ಯಕ್ಷಗಾನ ಮೇಳಗಳು ತಮ್ಮ ಪ್ರದರ್ಶನ ಕಾಲಾವಧಿಯನ್ನು ಮುಗಿಸಿ, ಮೇಳದ ಕಲಾವಿದರು ತಮ್ಮ ಕಾಲಗೆಜ್ಜೆಯನ್ನು ವಿಧಿವತ್ತಾಗಿ ಬಿಚ್ಚುವುದು ಪತ್ತನಾಜೆಯಂದೇ ಆಗಿದೆ. ಸೀಮೆಯ ಪ್ರಧಾನ ದೇವಸ್ಥಾನಗಳ ಧ್ವಜಾವರೋಹ (ಕೊಡಿಮರವನ್ನು ಇಳಿಸುವುದು) ಕಾರ್ಯಕ್ರಮ ಪತ್ತನಾಜೆಯಂದೇ ನಡೆಯುತ್ತದೆ. ವಿವಿಧ ದೈವಸ್ಥಾನಗಳಲ್ಲಿನ ಬಂಡಿ ಉತ್ಸವಗಳು ಪತ್ತ ನಾಜೆಯಂದೇ ಕೊನೆಗೊಳ್ಳುತ್ತವೆ. ಮಳೆಗಾಲದಲ್ಲಿ ಯಾವುದೇ ಜಾತ್ರೆ, ಅಂಕ ಆಯನ, ಉತ್ಸವಾದಿಗಳನ್ನು ನಡೆಸಲು ಸಾಧ್ಯವಾಗದ ಕಾರಣ ಮತ್ತು ಕೃಷಿ ಸಂಸ್ಕೃತಿ ಮೂಲ ವಾಗಿರುವ ತುಳುನಾಡಿನಲ್ಲಿ ಮಳೆಗಾಲ ಪ್ರಾರಂಭಕ್ಕೆ ಮುನ್ನ ಉತ್ಸವಾದಿಗಳನ್ನು ಪೂರೈಸಿ, ಕೃಷಿ ಚಟುವಟಿಕೆಗಳಿಗೆ ತಯಾರಿ ಮಾಡಲು ಪತ್ತನಾಜೆಯ ದಿನವನ್ನು ಉತ್ಸವಗಳ ಕೊನೆಯ ದಿನವನ್ನಾಗಿ ಆಯ್ಕೆಮಾಡಲಾಗಿತ್ತು.

Advertisement

ಪತ್ತನಾಜೆಯಂದು ಹಲಸಿನ ಕಾಯಿಯ ಪಲ್ಯ ಮಾಡುವುದು ವಾಡಿಕೆಯಾಗಿತ್ತು.

ಪತ್ತನಾಜೆಯಂದು ನಿಶ್ಚಿತ ಜಾಗಗಳಲ್ಲಿ ಭೈರವ ಹಾಗೂ ಗುಳಿಗ ದೈವಗಳಿಗೆ ಕೋಳಿಗಳನ್ನು ಬಲಿಕೊಡಲಾಗುತ್ತಿತ್ತು. ಒಟ್ಟಿನಲ್ಲಿ ಪತ್ತನಾಜೆ ಎಂಬುದು ತುಳುನಾಡಿನ ವಿಶಿಷ್ಟವಾದ ಪರ್ವದಿನವಾಗಿದೆ.

– ಅಮೃತ ಸೋಮೇಶ್ವರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next