Advertisement

ಪಾಟ್ನಾ,ಯುಪಿ,ಟೈಟಾನ್ಸ್‌ ಯಾರಿಗೆ ಒಲಿಯಲಿದೆ 3ನೇ ಸ್ಥಾನದ ಅದೃಷ್ಟ?

06:00 AM Dec 25, 2018 | Team Udayavani |

ಕೋಲ್ಕತಾ: ಪ್ರೊ ಕಬಡ್ಡಿ ಅಂತಿಮ ಹಂತದಲ್ಲಿದೆ. “ಎ’ ವಲಯದಲ್ಲಿ ಈಗಾಗಲೇ 3 ತಂಡಗಳು ಫ್ಲೇ-ಆಫ್ಗೆ ಅರ್ಹತೆ ಪಡೆದಿವೆ. “ಬಿ’ ವಲಯದಲ್ಲಿ ಅಗ್ರ 2 ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್‌ ಹಾಗೂ ಬೆಂಗಾಲ್‌ ವಾರಿಯರ್ ತಂಡಗಳು ಮುಂದಿನ ಸುತ್ತು ತಲುಪಿವೆ. ಆದರೆ ಕೊನೆಯ ಒಂದು ಸ್ಥಾನವಿನ್ನೂ ಇತ್ಯರ್ಥವಾಗಿಲ್ಲ. ಇಲ್ಲಿ ಪಾಟ್ನಾ ಪೈರೇಟ್ಸ್‌, ಯುಪಿ ಯೋಧಾ ಹಾಗೂ ತೆಲುಗು ಟೈಟಾನ್‌ ನಡುವೆ ಬಿಗಿ ಪೈಪೋಟಿಯ ಸನ್ನಿವೇಶ ಎದುರಾಗಿದೆ. ಈ 3 ತಂಡಗಳಲ್ಲಿ ಯಾರಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ ಎಂಬುದು ಈ ವಾರ ಅಂತಿಮಗೊಳ್ಳಲಿದೆ.

Advertisement

ಪಾಟ್ನಾ ಪೈರೇಟ್ಸ್‌
21 ಪಂದ್ಯಗಳನ್ನು ಆಡಿ 55 ಅಂಕ ಸಂಪಾದಿಸಿರುವ ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ತಂಡ  ಬುಧವಾರ ತನ್ನ ಕೊನೆಯ ಪಂದ್ಯದಲ್ಲಿ ಗುಜರಾತನ್ನು ಎದುರಿಸಲಿದೆ. ಪಾಟ್ನಾ ಜಯಿಸಿದರೆ 5 ಅಂಕಗಳನ್ನು ಸಂಪಾದಿಸಿ ಒಟ್ಟು 60 ಅಂಕಗಳೊಂದಿಗೆ ಫ್ಲೇ ಆಫ್ ಪ್ರವೇಶಿಸಲಿದೆ. ಈ ಪಂದ್ಯ ಟೈ ಆದರೂ ಪಾಟ್ನಾ  58 ಅಂಕಗಳೊಂದಿಗೆ ಮುನ್ನಡೆ ಸಾಧಿಸಲಿದೆ. ಅಕಸ್ಮಾತ್‌ ಸೋತರೆ ಮುಂದಿನ ಸುತ್ತಿನ ಅವಕಾಶ ಕೈತಪ್ಪುವ ಸಾಧ್ಯತೆ ಇದೆ. ಆಗ ಗುರುವಾರದ ಯುುಪಿ-ಬೆಂಗಾಲ್‌ ಪಂದ್ಯ ನಿರ್ಣಾಯಕವಾಗುತ್ತದೆ. ಇದರಲ್ಲಿ ಯುಪಿ ಸೋತರೆ ಪಾಟ್ನಾ 55 ಅಥವಾ 56 ಅಂಕಗಳಿಂದ 3ನೇ ಸ್ಥಾನದಲ್ಲಿ ಭದ್ರವಾಗಲಿದೆ.

ಯುಪಿ ಯೋಧಾ
52 ಅಂಕಗಳೊಂದಿಗೆ 4 ಸ್ಥಾನಿಯಾಗಿರುವ ಯುಪಿ ಯೋಧ ತಂಡಕ್ಕೂ ಉಳಿದಿರುವುದು ಒಂದು ಪಂದ್ಯ. ಅದು ಗುರುವಾರ ಆತಿಥೇಯ ಬೆಂಗಾಲ್‌ ವಿರುದ್ಧ ಆಡಲಿದೆ. ಇಲ್ಲಿ ಗೆದ್ದರೆ ಮಾತ್ರ ಯೋಧಾಗೆ ಫ್ಲೇ-ಆಫ್ ಟಿಕೆಟ್‌ ಲಭಿಸುತ್ತದೆ. ಅತ್ತ ಪಾಟ್ನಾ ತಂಡ ಗುಜರಾತ್‌ ವಿರುದ್ಧ ಸೋತರೆ 55 ಅಂಕಗಳಲ್ಲಿ ಉಳಿಯಲಿದ್ದು, ಇದರಿಂದ ಯುಪಿ ಯೋಧಾಗೆ ಲಾಭವಾಗಲಿದೆ. ಯೋಧಾ-ಬೆಂಗಾಲ್‌ ಪಂದ್ಯ ಟೈಗೊಂಡರೆ ಯೋಧಾ ತಂಡದ ಅಂಕ 55ಕ್ಕೆ ನಿಲ್ಲುತ್ತದೆ. ಒಂದು ವೇಳೆ ಯುಪಿ ಯೋಧಾ ಹಾಗೂ ಪಾಟ್ನಾ ತಂಡದ ಅಂಕ ಸಮಬಲಗೊಂಡರೆ “ಸ್ಕೋರ್‌ ವ್ಯತ್ಯಾಸ’ದ ಅಂತರದಲ್ಲಿ ಪಾಟ್ನಾ ಫ್ಲೇ ಆಫ್ಗೆ ಅರ್ಹತೆ ಪಡೆಯುತ್ತದೆ.

ತೆಲುಗು ಟೈಟಾನ್ಸ್‌
ತೆಲುಗು ಟೈಟಾನ್ಸ್‌ ತಂಡಕ್ಕೂ ಉಳಿದಿರುವುದು ಕೇವಲ ಒಂದು ಪಂದ್ಯ. ಗಳಿಸಿರುವ ಅಂಕಗಳು 50. ಮಂಗಳವಾರದ ಪಂದ್ಯದಲ್ಲಿ ಟೈಟಾನ್ಸ್‌-ಬೆಂಗಾಲ್‌ ಮುಖಾಮುಖೀಯಾಗಲಿವೆ. ಟೈಟಾನ್ಸ್‌ ತಂಡ ಬೆಂಗಾಲ್‌ ವಿರುದ್ಧ 23 ಅಥವಾ ಇದಕ್ಕಿಂತ ಹೆಚ್ಚಿನ ಅಂಕಗಳ ಅಂತರದಿಂದ ಗೆಲುವು ದಾಖಲಿಸಬೇಕಾದುದು ಅನಿವಾರ್ಯ. ಬೆಂಗಾಲ್‌ ವಿರುದ್ಧ ಯುಪಿ ಟೈ ಮಾಡಿಕೊಂರೆ ಅಥವಾ ಸೋತರೆ “ಸ್ಕೋರ್‌ ವ್ಯತ್ಯಾಸ’ದಿಂದ ಯುಪಿ ಯೋಧಾ ಮೇಲೆ ಬೀಳಲಿದೆ. ಆಗ ತೆಲುಗು  ಟೈಟಾನ್ಸ್‌ ಆಸೆ ಕೊನೆಗೊಳ್ಳಲಿದೆ. ಪಾಟ್ನಾ ತಂಡ ಗುಜರಾತ್‌ ವಿರುದ್ಧ 7 ಅಥವಾ ಹೆಚ್ಚಿನ ಅಂಕಗಳ ಅಂತರದಲ್ಲಿ ಸೋತರೆ ಟೈಟಾನ್ಸ್‌ಗೆ ಒಂದು ಅವಕಾಶ ದೊರೆಯಬಹುದೋ ಏನೋ.ಯುಪಿ ಯೋಧಾ ಅಥವಾ ಪಾಟ್ನಾ ಪೈರೇಟ್ಸ್‌ ತಂಡದ ಗೆಲುವು ತೆಲುಗು ಟೈಟಾನ್ಸ್‌ ಕನಸನ್ನು ನುಚ್ಚುನೂರಾಗಿಸುವುದು ಖಂಡಿತ.

Advertisement

Udayavani is now on Telegram. Click here to join our channel and stay updated with the latest news.

Next