Advertisement

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳೆಂದರೆ ನಿರ್ಲಕ್ಷ್ಯ

04:53 PM May 08, 2017 | Team Udayavani |

ಅಫಜಲಪುರ: ಬಾಣಂತಿಯರ ಬಗ್ಗೆ ನಿಷ್ಕಾಳಜಿ, 100 ಹಾಸಿಗೆಯನ್ನು ಹೊಂದಿದ್ದರೂ ಸ್ವತ್ಛತೆಯೇ ಇಲ್ಲದಿರುವುದು, ರೋಗಿಗಳನ್ನು ಕಂಡು ಕಾಣದಂತೆ ಓಡಾಡುವ ಸಿಬ್ಬಂದಿಗಳು, ಈ ಅಮಾನವೀಯ ದೃಶ್ಯಗಳು ಕಂಡು ಬರುವುದು ಇಲ್ಲಿನ ಮುಖ್ಯ ರಸ್ತೆಯಲ್ಲಿ ಜರ್ಮನ್‌ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿರುವ ಇಲ್ಲಿನ ಸರ್ಕಾರಿ ಆಸ್ಪತ್ರೆ. 

Advertisement

ಸರ್ಕಾರ ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶದ ಬಡ ಜನರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಸೌಕರ್ಯಗಳನ್ನು ನೀಡಿ ನುರಿತ ತಜ್ಞ ವೈದ್ಯರು, ಸಿಬ್ಬಂದಿಗಳನ್ನು ನೇಮಿಸಿದೆ. ಆದರೆ ಸಂಬಂಧ ಪಟ್ಟವರ ನಿಷ್ಕಾಳಜಿಯಿಂದ ಅಫಜಲಪುರ ಆಸ್ಪತ್ರೆ ಅಸ್ವತ್ಛತೆಯಿಂದ ಕೂಡಿದೆ. 

ಇಲ್ಲಿ ಬಾಣಂತಿಯರಿಗೂ ಯಾವುದೇ ರೀತಿಯ ಕಾಳಜಿ ಮಾಡಲಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸಾಧನಗಳಿದ್ದರೂ ಬಳಕೆಯಾಗುತ್ತಿಲ್ಲ. ದೂರದೂರಿನಿಂದ ಬರುವ ರೋಗಿಗಳಿಗೆ ಇದರಿಂದ ತೊಂದರೆಯಾಗುತ್ತಿದೆ. ಗರ್ಭಿಣಿಯರು ಬಂದು ದಿನಗಟ್ಟಲೇ ಕಾಯ್ದು ನೋವುಂಡರೂ ವೈದ್ಯರ ಮನ ಕರಗುತ್ತಿಲ್ಲ.

ಸಿಬ್ಬಂದಿ ನೋಡಿಯೂ ನೋಡದ ಹಾಗೆ ವರ್ತಿಸುತ್ತಾರೆ. ಇವರ ಈ ನಡೆಯಿಂದ ಗರ್ಭಿಣಿಯರು ಮತ್ತು ಸಾರ್ವಜನಿಕರು ಆತಂಕಗೊಂಡಿದ್ದು ದುಬಾರಿ ವೆಚ್ಚವಾದರೂ, ಸಾಲ ಮಾಡಿಕೊಂಡಾದರೂ ಸರಿ ಎಂದು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲೀಗ ಆರು ಜನ ನುರಿತ ವೈದ್ಯರಿದ್ದಾರೆ. 

ಇವರಲ್ಲಿ ಎರಡೂರು ಜನ ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಉಳಿದವರು ನಾಮಕೇ ವಾಸ್ತೇ ಎಂಬಂತೆ ಕರ್ತವ್ಯ ನಿರ್ವಹಿಸುತ್ತಾರೆ. ವೈದ್ಯರಷ್ಟೇ ಅಲ್ಲದೆ ಇಲ್ಲಿರುವ ಗ್ರೂಪ್‌ ಡಿ ಹಾಗೂ ಉಳಿದ ಸಿಬ್ಬಂದಿಯೂ ತಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಗ್ರೂಪ್‌ ಡಿ ನೌಕರಸ್ಥರು ನಮ್ಮ ಮೇಲೆ ರೇಗಾಡುತ್ತಾರೆ, ಅವರೇ ಇಲ್ಲಿ ಸರ್ವಾಧಿಕಾರಿಗಳಂತೆ ವರ್ತಿಸುತ್ತಾರೆಂದು ಆಸ್ಪತ್ರೆಗೆ ಬರುವ ರೋಗಿಗಳು ಆರೋಪಿಸುತ್ತಾರೆ.

Advertisement

ಪ್ರಸೂತಿ ತಜ್ಞರು ಯಾವಾಗ ನೋಡಿದರೂ ಬಾಗಿಲು ಹಾಕಿರುತ್ತಾರೆ. ಇವರ ವರ್ತನೆಯಿಂದ ಆಸ್ಪತ್ರೆಗೆ ಬರುವ ಗರ್ಭಿಣಿಯರಿಗೆ, ಬಾಣಂತಿಯರಿಗೆ ತೊಂದರೆಯಾಗುತ್ತಿದೆ ಎಂದು ಸಮಾಜ ಸೇವಕ ಶ್ರೀಕಾಂತ ಮಾಶಾಳಕರ ಆರೋಪಿಸುತ್ತಾರೆ. ಆಸ್ಪತ್ರೆಯ ಸಾಮಾನ್ಯ ವಾರ್ಡ್‌, ಹೆರಿಗೆ ವಾರ್ಡ್‌ಗಳು ಸ್ವತ್ಛವಾಗಿಲ್ಲ, ಕಸ ಗೂಡಿಸದೆ ಇರುವುದರಿಂದ ಎಲ್ಲಿ ನೋಡಿದರೂ ಹೊಲಸೆ ಕಾಣುತ್ತದೆ.

ಆಸ್ಪತ್ರೆಯಲ್ಲಿನ ಶೌಚಾಲಯಗಳ  ಬಳಿಯೂ ಹೋಗುವ ಹಾಗಿಲ್ಲ. ದೂರದಿಂದಲೇ ಗಬ್ಬು ನಾತ ಬೀರುತ್ತವೆ. ಆಸ್ಪತ್ರೆಯ ಮೊದಲ ಮಹಡಿಯ ಕೆಲವು ಕೋಣೆಗಳಲ್ಲಿ ಪಾನ್‌ ಪರಾಗ್‌, ಗುಟಖಾ, ಸಿಗರೇಟ್‌ ತುಂಡುಗಳು ಬಿದ್ದಿವೆ. ರಾತ್ರಿಯಾದರೆ ಸಾಕು ಆಸ್ಪತ್ರೆಯಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎಂದು ಆಸ್ಪತ್ರೆಗೆ ಬರುವ ರೋಗಿಗಳು, ಮತ್ತವರ ಸಂಬಂಧಿಕರು ಆರೋಪಿಸಿದ್ದಾರೆ. ಇದೆಲ್ಲವನ್ನು ಕಂಡರೂ ಕಾಣದಂತೆ ಸಂಬಂಧಪಟ್ಟವರು ವರ್ತಿಸುತ್ತಾರೆ.

ಬಾಣಂತಿಯರ ವಾರ್ಡ್‌ನಲ್ಲಿ ಬೆಡ್‌ಶಿಟ್‌ ಹಾಕುತ್ತಿಲ್ಲ, ಸಮಯಕ್ಕೆ ಸರಿಯಾಗಿ ಅವರ ಆರೋಗ್ಯ ವಿಚಾರಿಸುತ್ತಿಲ್ಲ. ಅವರಿಗೆ ಬೇಕಾದ ಸೂಕ್ತ ಚಿಕಿತ್ಸೆಯನ್ನು ಸರಿಯಾಗಿ ನೀಡುತ್ತಿಲ್ಲ. ಹೀಗಾದರೆ ಆಸ್ಪತ್ರೆಗೆ ಬರುವವರ ಪರಿಸ್ಥಿತಿ ಏನಾಗಬೇಡ. ಒಟ್ಟಿನಲ್ಲಿ ರೋಗಗ್ರಸ್ಥ ಆಸ್ಪತ್ರೆಗೆ ಕಾಯಕಲ್ಪ ನೀಡದಿದ್ದರೆ, ಸಿಬ್ಬಂದಿಗಳು ಮತ್ತು ವೈದ್ಯರು ತಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸದಿದ್ದರೆ ಇದೊಂದು ಭೂತಬಂಗಲೆ ಆಗುವುದರಲ್ಲಿ ಅನುಮಾನವೇ ಇಲ್ಲ. 

* ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next