ಬೆಂಗಳೂರು: ಹಲ್ಲು ನೋವಿಗೆ ಚಿಕಿತ್ಸೆ ಪಡೆದಿದ್ದ ವ್ಯಕ್ತಿಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದು, ಈ ಬಗ್ಗೆ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸುಬ್ರಹ್ಮಣ್ಯ ನಗರ ಠಾಣೆ ಎದುರು ಮೃತದೇಹ ಇರಿಸಿ ಸಂಬಂಧಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಆಸ್ಪತ್ರೆಯ ಸ್ಟೆಕ್ಚರ್‌ನಲ್ಲಿ ಮೃತದೇಹ ವನ್ನು ಠಾಣೆ ಮುಂಭಾಗ ತಂದಿದ್ದ ಸಂಬಂಧಿಕರು, ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿರುವ ಕುಮಾರ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸುಬ್ರಮಣ್ಯನಗರದ ಕುಮಾರ್(56) ಎಂಬುವರು ಹಲ್ಲು ನೋವಿನ ಚಿಕಿತ್ಸೆಗೆಂದು ಇತ್ತೀಚೆಗೆ ಆಸ್ಪತ್ರೆಯೊಂದಕ್ಕೆ ಹೋಗಿದ್ದರು. ತಪಾಸಣೆ ನಡೆಸಿದ್ದ ವೈದ್ಯ, ನೋವಿಗೆ ಚಿಕಿತ್ಸೆ ಕೊಟ್ಟು ಕಳುಹಿಸಿದ್ದರು. ಮರುದಿನವೇ ಮುಖ ಊದಿಕೊಂಡಿತ್ತು. ಎರಡೂ ಕಣ್ಣಿಗೂ ಹಾನಿಯಾಗಿತ್ತು. ಮುಖ ಊದಿಕೊಂಡು ತೀವ್ರ ನೋವು ಅನುಭವಿಸುತ್ತಿದ್ದ ಕುಮಾರ್ ಅವರನ್ನು ಬೇರೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಕುಮಾರ್ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ದಂತ ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವನ್ನಪ್ಪಿರುವುದಾಗಿ ಆಸ್ಪತ್ರೆಯ ವೈದ್ಯರು ಹೇಳಿದ್ದರು. ಹೀಗಾಗಿ, ದಂತ ವೈದ್ಯರ ವಿರುದ್ಧ ದೂರು ನೀಡಲು ಠಾಣೆಗೆ ಹೋಗಿದ್ದೆವು. ಆದರೆ, ಸುಬ್ರಹ್ಮಣ್ಯನಗರ ಠಾಣೆಯ ಪೊಲೀಸರು ವೈದ್ಯನ ವಿರುದ್ಧ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದರು. ಯಾವುದೇ ಪ್ರತಿಕ್ರಿಯೆ ಸಹ ನೀಡಲಿಲ್ಲ. 10 ದಿನ ತೀವ್ರ ನಿಗಾ ಘಟಕದಲ್ಲಿದ್ದ ಕುಮಾರ್ ಸೋಮವಾರ ಮೃತಪಟ್ಟಿದ್ದಾರೆ.
ವೈದ್ಯನ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರ ವರ್ತನೆಯನ್ನು ಖಂಡಿಸಿ ಮೃತದೇಹವನ್ನು ಠಾಣೆ ಬಳಿ ತಂದಿದ್ದೇವೆ. ಕೂಡಲೇ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಬಳಿಕ ಹಿರಿಯ ಅಧಿಕಾರಿಗಳು ಮೃತರ ಸಂಬಂಧಿಕರನ್ನು ಸಮಾಧಾನ ಪಡಿಸಿ, ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಮೃತದೇಹವನ್ನು ಸಂಬಂಧಿಕರು ಕೊಂಡೊಯ್ದರು ಎಂದು ಮೂಲಗಳು ತಿಳಿಸಿವೆ.