ಗಾಂಧಿನಗರ : ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರುವ ಸಲುವಾಗಿ ಪಾಟಿದಾರ್ ಸಂಘಟನೆ – ಸರ್ದಾರ್ ಪಟೇಲ್ ಸಮೂಹ (ಎಸ್‌ಪಿಜಿ) ಜನವರಿ 1ರ ಸೋಮವಾರದಂದು ಮೆಹಸಾನಾ ಬಂದ್‌ಗೆ ಕರೆ ನೀಡಿದೆ.
ಎಸ್‌ಪಿಜಿ ಅಧ್ಯಕ್ಷ ಲಾಲ್‌ಜಿ ಪಟೇಲ್ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, “ನಿತಿನ್ ಪಟೇಲ್ ಅವರು ಬಿಜೆಪಿಯ ನಿಷ್ಠಾವಂತ ಮತ್ತು ಸಮರ್ಪಿತ ಕಾರ್ಯಕರ್ತರಾಗಿರುವುದರಿಂದ ಅವರನ್ನೇ ರಾಜ್ಯದ ಮುಖ್ಯಮಂತ್ರಿ ಮಾಡಬೇಕು’ ಎಂದು ಆಗ್ರಹಪೂರ್ವಕ ಹೇಳಿದರು.
ಲಾಲ್‌ಜಿ ಪಟೇಲ್ ಅವರು ಕಳೆದ ಭಾನುವಾರವೇ ಈ ಸಂಬಂಧ ಅಹ್ಮದಾಬಾದ್‌ನಲ್ಲಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರನ್ನು ಅವರ ಬೆಂಬಲಿಗರೊಡಗೂಡಿ ಭೇಟಿಯಾಗಿದ್ದರು.
ಈ ನಡುವೆ ನಿತಿನ್ ಪಟೇಲ್ ಅವರು ಇನ್ನೂ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಲ್ಲ; ತಮಗೆ ವಹಿಸಿಕೊಡಲಾಗಿರುವ ಸಂಪುಟ ಹೊಣೆಗಾರಿಕೆಗಳನ್ನು ವಹಿಸಿಕೊಂಡಿಲ್ಲ. ನಿತಿನ್ ಪಟೇಲ್‌ಗೆ ತಮಗೆ ಕೊಡಲಾಗಿರುವ ಅಮುಖ್ಯ ಖಾತೆಗಳ ಬಗ್ಗೆ ಮತ್ತು ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ ಎಂಬ ವೇದನೆ ಇದೆ. ಇದನ್ನು ಪಕ್ಷದ ವರಿಷ್ಠರಿಗೆ ತಿಳಿಸಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ಹಿಂದಿನ ಸರಕಾರದಲ್ಲಿ ನಿತಿನ್ ಪಟೇಲ್ ಅವರು ಹಣಕಾಸು ಮತ್ತು ನಗರಾಭಿವೃದ್ಧಿಯಂತಹ ಪ್ರಮುಖ ಖಾತೆಗಳನ್ನು ಹೊಂದಿದ್ದರು. ಈ ಬಾರಿ ಅವರಿಗೆ ರಸ್ತೆ, ನಿರ್ಮಾಣ ಮತ್ತು ಆರೋಗ್ಯ ಖಾತೆ ನೀಡಲಾಗಿದೆ. ಇದಲ್ಲದೆ ಅವರಿಗೆ ವೈದ್ಯಕೀಯ ಶಿಕ್ಷಣ, ನರ್ಮದಾ, ಕಲ್ಪಸಾರ್ ಮತ್ತು ಕ್ಯಾಪಿಟಲ್ ಪ್ರಾಜೆಕ್ಟ್ಗಳನ್ನು ವಹಿಸಿಕೊಡಲಾಗಿದೆ. ಕಳೆದ ಡಿ.28ರಂದು ಖಾತೆಗಳನ್ನು ಹಂಚಲಾಗಿತ್ತು.
ಈ ನಡುವೆ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಅವರು ನಿತಿನ್ ಪಟೇಲ್ ಅವರನ್ನು ಕಳೆದ ಭಾನುವಾರವೇ ಭೇಟಿಆಗಿ ಬಿಜೆಪಿಯನ್ನು ತೊರೆದು ಇತರ ಹತ್ತು ಶಾಸಕರ ಜತೆಗೆ ಕಾಂಗ್ರೆಸ್‌ಗೆ ಬರುವಂತೆ ಮತ್ತು ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ಪಡೆಯುವಂತೆ ಒತ್ತಾಯಿಸಿದ್ದರು.
ನಿತಿನ್ ಪಟೇಲ್ ಅವರು ಕಳೆದ 27 ವರ್ಷಗಳಿಂದ ಬಿಜೆಪಿಯ ಸಮರ್ಪಿತ ನಾಯಕನಾಗಿ ದುಡಿದಿದ್ದಾರೆ; ಆದರೂ ಅವರನ್ನು ಪಕ್ಷ ಕಡೆಗಣಿಸಿ; ಸೂಕ್ತ ಗೌರವ, ಸ್ಥಾನಮಾನ ನೀಡಿಲ್ಲ’ ಎಂದು ಟೀಕಿಸಿದ್ದಾರೆ.