Advertisement

ಪಂ.ಗೆ ಇನ್ನೂ ದೊರೆತಿಲ್ಲ ಸ್ವಂತ ಕಟ್ಟಡ ಭಾಗ್ಯ! 

08:49 PM Aug 25, 2021 | Team Udayavani |

ಕಿಲ್ಪಾಡಿಯು  ರಾಜ್ಯ ಹೆದ್ದಾರಿ ಬದಿಯಲ್ಲಿರುವ ಗ್ರಾಮ. ಗ್ರಾಮದಲ್ಲಿ ಮೂಲಸೌಲಭ್ಯಗಳನ್ನು ಅಭಿವೃದ್ಧಿಗೊಳಿಸಬೇಕಿದೆ. ರಸ್ತೆಗಳಿಗೆ ಕಾಂಕ್ರೀಟ್‌ ಹಾಕುವುದು, ಕೆಲವು ಕಡೆ ವಿಸ್ತರಣೆ ಮಾಡಬೇಕಿದೆ. ಕಿಲ್ಪಾಡಿ ಗ್ರಾ.ಪಂ. ಆಡಳಿತಕ್ಕೆ ಸ್ವಂತ ಕಟ್ಟಡ ಆಗಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಸೆಳೆಯಲು “ಉದಯವಾಣಿ ಸುದಿನ’ದ “ಒಂದು ಊರು-ಹಲವು ದೂರು’ ಅಭಿಯಾನದ ಮೂಲಕ ಪ್ರಯತ್ನಿಸಲಾಗಿದೆ.

Advertisement

ಮೂಲ್ಕಿ: ಕಿಲ್ಪಾಡಿ ಗ್ರಾ.ಪಂ. ವ್ಯಾಪ್ತಿಗೆ ಕಿಲ್ಪಾಡಿ ಒಂದೇ ಗ್ರಾಮ ಬರುತ್ತದೆ. ಈ ಗ್ರಾ.ಪಂ.ಗೆ ಕಟ್ಟಡಕ್ಕೆ ಸ್ವಂತ ಜಾಗವಿಲ್ಲದ ಕಾರಣ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಡಳಿತ ಅನುಕೂಲಕ್ಕಾಗಿ ಗ್ರಾ.ಪಂ.ಗೆ ಸ್ವಂತ ಕಟ್ಟಡ ಭಾಗ್ಯ ಅಗತ್ಯವಿದೆ.

ಕೆರೆಕಾಡು ಪ್ರದೇಶದಲ್ಲಿ ಸರಕಾರದಿಂದ ನೂರಾರು ಫ‌ಲಾನುಭವಿಗಳಿಗೆ ನಿವೇಶನ ಒದಗಿಸಿದ ಕಿಲ್ಪಾಡಿ ಗ್ರಾ.ಪಂ.ಗೆ ಆಡಳಿತಕ್ಕೆ ಸ್ವಂತ ಕಟ್ಟಡ ಇಲ್ಲದಿರುವುದು ವಿಪರ್ಯಾಸ.

ಗ್ರಾಮದ ಬಹುತೇಕ ಪ್ರದೇಶದಲ್ಲಿ ರಾಜ್ಯ ಹೆದ್ದಾರಿ ಹಾದುಹೋಗುತ್ತಿದ್ದರೂ ಈ ಪ್ರದೇಶವು ಹಸುರು ವಲಯವಾಗಿ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ಯಾವುದೇ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗದೇ ಪಂಚಾಯತ್‌ನ ಆದಾಯಕ್ಕೆ ಹಿನ್ನಡೆಯಾಗಿದೆ. ಹಸುರು ವಲಯ ಎಂದು ಗುರುತಿಸಿರುವ ಜಾಗದ ವಲಯ ಬದಲಾವಣೆ ಮಾಡುವಂತೆ ಸರಕಾರದ ಮುಂದೆ ಪಂಚಾಯತ್‌ ನಿರ್ಣಯವನ್ನು ತಿಳಿಸಿದೆ. ಜತೆಗೆ ನಗರಾಭಿವೃದ್ಧಿ ಪ್ರಾಧಿಕಾರವೂ ವಲಯ ಬದಲಾವಣೆಗೆ ಪೂರಕವಾಗಿ ಸ್ಪಂದಿಸಿದೆ. ಆದರೆ ಈವರೆಗೂ ಯಾವುದೇ ಬದಲಾವಣೆ ಆಗಿಲ್ಲ. ಅಭಿವೃದ್ಧಿಗೆ ಪೂರಕವಾಗಿ ವಲಯ ಬದಲಾವಣೆಗೆ ಅಗತ್ಯ.

ನೀರಿನ ಸಮಸ್ಯೆನಿವಾರಣೆ ಅಗತ್ಯ :

Advertisement

ರಾಜ್ಯ ಹೆದ್ದಾರಿಗೆ ತಾಗಿಕೊಂಡು ಕೆಂಚನಕೆರೆಯ ನೀರಿನ ಒರತೆ ಚೆನ್ನಾಗಿ ಇರುವುದರಿಂದ ಗ್ರಾಮಕ್ಕೆ ನೀರಿನ ಕೊರತೆ ಇಲ್ಲ. ಆದರೆ ಈ ಕೆರೆಯಲ್ಲಿ ಬಂಡೆಗಳು ಅತಿಯಾಗಿವೆ. ಕುಬೆವೂರು ಬಳಿಯ ಬೈಲಕೆರೆ, ಕೆಂಚನೆಕೆರೆಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಇದರಿಂದ ನೀರಿನ ಸಮಸ್ಯೆಗೆ ಸಂಪೂರ್ಣವಾಗಿ ನಿವಾರಿಸಬಹುದು.

ಗ್ರಾಮದಲ್ಲಿ ಜಲಜೀವನ್‌ ಮಿಷನ್‌ ಯೋಜನೆಗೆ ಮುಂದಾಗಿದ್ದರೂ ಅನುಷ್ಠಾನಕ್ಕಾಗಿ ಜನಪ್ರತಿನಿಧಿಗಳು ಶೀಘ್ರ ಪ್ರಯತ್ನಿಸಬೇಕಿದೆ. ಗ್ರಾಮದ

ಶ್ರೀ ಕುಮಾರ ಮಂಗಿಲ ದೇವಸ್ಥಾನದ ವ್ಯಾಪ್ತಿಯಲ್ಲಿರುವ ಸಿಹಿ ನೀರಿನ ಹರಿವಿನ ಕಿರು ನದಿಗೆ ವಿಶೇಷ ಒತ್ತು ನೀಡಿ ಕಿಂಡಿ ಅಣೆಕಟ್ಟು ನಿರ್ಮಿಸಿ ಅಭಿವೃದ್ಧಿಪಡಿಸಬೇಕಿದೆ.

ಇತರ ಸಮಸ್ಯೆ ಗಳೇನು? :

  • ಗ್ರಾಮದಲ್ಲಿ ಆಟದ ಮೈದಾನ, ಪಾರ್ಕ್‌ ನಿರ್ಮಿಸುವುದು ಅಗತ್ಯ.
  • ಗ್ರಾಮವು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿಕೊಂಡರೂ ನಗರಾಭಿವೃದ್ಧಿ ಪ್ರಾಧಿಕಾರ ಕೆರೆ ಅಭಿವೃದ್ಧಿ ಶುಲ್ಕವನ್ನು ಸಂಗ್ರಹಿಸಿದರೂ ಈ ವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ.
  • ಮೂಲ್ಕಿ ರೈಲು ನಿಲ್ದಾಣ ಕಿಲ್ಪಾಡಿ ಗ್ರಾಮದ ವ್ಯಾಪ್ತಿಯಲ್ಲಿ ಇರುವುದರಿಂದ ಇದಕ್ಕೆ ಸಂಪರ್ಕವಾಗುವ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಇಲಾಖೆಯ ಮೇಲೆ ಒತ್ತಡ ಏರುವುದು ಅಗತ್ಯ.
  • 94ಸಿಸಿ ಯಲ್ಲಿ ಅರ್ಜಿ ಸಲ್ಲಿಸಿದ ನಿವೇಶನ ರಹಿತರಿಗೆ ನಿವೇಶನ ಕೊಡಿಸುವಲ್ಲಿ ಗ್ರಾ.ಪಂ. ಆಡಳಿತ ಒತ್ತು ನೀಡಬೇಕಿದೆ.
  • ರಾಜ್ಯ ಹೆದ್ದಾರಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕಾಗಿದೆ.
  • ಗ್ರಾ.ಪಂ. ವ್ಯಾಪ್ತಿಯ ಒಳರಸ್ತೆಗಳಲ್ಲಿ ಕೆಲವು ಕಡೆ ಕಾಂಕ್ರೀಟ್‌ ಹಾಕಲಾಗಿದ್ದು, ಅದು ತೀರಾ ಕಿರಿದಾಗಿದೆ. ಅದರ ವಿಸ್ತರಣೆಗೆ ಕ್ರಮ ಅಗತ್ಯ.
  • ಹೆಚ್ಚಿನ ರಸ್ತೆಗಳ ಬದಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿರದೆ ರಸ್ತೆಯಲ್ಲಿಯೇ ನೀರು ಹರಿಯುತ್ತದೆ. ಇದಕ್ಕೆ ಪರಿಹಾರ ಕೈಗೊಳ್ಳುವುದು ಅಗತ್ಯ.
  • ಗ್ರಾಮದಲ್ಲಿನ ಹಲವು ಎಕರೆ ಗದ್ದೆಗಳು ಹಡಿಲು ಬಿದ್ದಿದ್ದು ಅಲ್ಲಿ ಕೃಷಿ ಚಟುವಟಿಕೆ ನಡೆಸಲು ಪ್ರೋತ್ಸಾಹದಾಯಕ ಯೋಜನೆ ರೂಪಿಸುವುದು ಅಗತ್ಯ.

 

-ಸರ್ವೋತ್ತಮ ಅಂಚನ್‌, ಮೂಲ್ಕಿ

Advertisement

Udayavani is now on Telegram. Click here to join our channel and stay updated with the latest news.

Next