Advertisement

9200 ಮಾನವ ದಿನ ಅರಣ್ಯದಲ್ಲೇ ಕಳೆದ ಶಿರಸಿ ಕಾಲೇಜು ವಿದ್ಯಾರ್ಥಿಗಳು

01:53 PM Jul 13, 2017 | Team Udayavani |

ಹುಬ್ಬಳ್ಳಿ: ಹುಲಿ ಸೇರಿದಂತೆ ವಿವಿಧ ವನ್ಯಜೀವಿ, ಪಕ್ಷಿ, ಜೀವ ವೈವಿಧ್ಯತೆ ಗಣತಿಯಲ್ಲಿ ಪಾಲ್ಗೊಳ್ಳುವ ಮೂಲಕ ಶಿರಸಿಯ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಹತ್ವದ ಅಂಕಿ-ಅಂಶ ಸಂಗ್ರಹಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಪ್ರಾಣಿಗಳ
ಹೆಜ್ಜೆ, ಹಿಕ್ಕೆಗಳನ್ನು ಗುರುತಿಸುವಿಕೆಯಲ್ಲೂ ಸೈ ಎನ್ನಿಸಿಕೊಂಡಿದ್ದು, ಎರಡು ದಶಕಗಳಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಒಟ್ಟಾರೆ
ಸುಮಾರು 9,200 ಮಾನವ ದಿನಗಳನ್ನು ಅರಣ್ಯದಲ್ಲಿಯೇ ಕಳೆದಿದ್ದಾರೆ.

Advertisement

ಅರಣ್ಯ ಇಲಾಖೆ, ರಾಜ್ಯ ಜೀವ ವೈವಿಧ್ಯತೆ ಮಂಡಳಿ, ವಿವಿಧ ಸ್ವಯಂ ಸೇವಾ ಸಂಸ್ಥೆಗಳು ನಡೆಸಿದ ವನ್ಯಜೀವಿ, ಪಕ್ಷಿ , ಜೀವ ವೈವಿಧ್ಯತೆ ಹಾಗೂ ಔಷಧಿ ಸಸ್ಯಗಳ ಗಣತಿ, ಪರಿಶೀಲನೆ ಕಾರ್ಯದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಹಲವು ರಾತ್ರಿಗಳನ್ನು ದಟ್ಟಾರಣ್ಯದಲ್ಲೇ ಕಳೆದಿದ್ದಾರೆ. ವಿವಿಧ ವನ್ಯ ಜೀವಿಗಳ ಸಂತತಿ ಕುಸಿತ-ಹೆಚ್ಚಳದ ಮಾಹಿತಿ ಸಂಗ್ರಹಿಸಿದ್ದಾರೆ.

21 ಕಡೆ ಅರಣ್ಯ ಸುತ್ತಾಟ: 1997ರಿಂದ ಇಲ್ಲಿವರೆಗೆ ಅರಣ್ಯ ಮಹಾವಿದ್ಯಾಲಯದ ಒಟ್ಟಾರೆ 415 ವಿದ್ಯಾರ್ಥಿಗಳು ವನ್ಯಜೀವಿ, ಪಕ್ಷಿ, ಜೀವ ವೈವಿಧ್ಯತೆ ಹಾಗೂ ಔಷಧಿ ಸಸ್ಯಗಳ ಗಣತಿ, ಗುರುತಿಸುವಿಕೆ ಕಾರ್ಯದಲ್ಲಿ ಅಂದಾಜು 1,300 ಮಾನವ ವಾರಗಳನ್ನು ಅರಣ್ಯದಲ್ಲಿಯೇ ಕಳೆದಿದ್ದಾರೆ. ಭೀಮಗಢ, ದಾಂಡೇಲಿ, ಅಣತಿ, ರಾಣೆಬೆನ್ನೂರು, ದರೋಜಿ, ಶಿರಸಿ, ಸಿದ್ದಾಪುರ, ಶರಾವತಿ, 
ನಾಗರಹೊಳೆ, ಬಂಡಿಪುರ, ಮಲೆಮಹದೇಶ್ವರ, ಬನ್ನೇರು ಘಟ್ಟ ಹೀಗೆ ರಾಜ್ಯ ಹಾಗೂ ಗೋವಾದಲ್ಲಿ ಒಟ್ಟಾರೆ 21 ಕಡೆಗಳ ಅರಣ್ಯ ಪ್ರದೇಶಗಳಲ್ಲಿ ಸುತ್ತಾಡಿ ಗಣತಿ ಹಾಗೂ ಪತ್ತೆ ಕಾರ್ಯ ಕೈಗೊಂಡಿದ್ದಾರೆ. 

ಮೂರು ಬಾರಿ ಹುಲಿ ಗಣತಿ: ಹುಲಿಗಳ ಕುರಿತಾಗಿ 2006, 2010 ಹಾಗೂ 2013ರಲ್ಲಿ ನಡೆದ ಗಣಿತಿಯಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗಿಯಾಗಿದ್ದಾರೆ. 2013ರಲ್ಲಿ ನಾಲ್ಕು ವಲಯಗಳಲ್ಲಿ ನಡೆದ ಹುಲಿ ಗಣಿತಿಯಲ್ಲಿ ಸುಮಾರು 150 ವಿದ್ಯಾರ್ಥಿಗಳು
ಪಾಲ್ಗೊಂಡಿದ್ದರು. ಬೆಳಗಾವಿ ಜಿಲ್ಲೆ ಭೀಮಗಢ ಅಭ್ಯಯಾರಣ್ಯದಲ್ಲಿ ಸುಮಾರು 103 ಕಿಮೀ ಸುತ್ತಾಟ ವೇಳೆ ವಿದ್ಯಾರ್ಥಿಗಳು ಸುಮಾರು 14 ಹುಲಿ ಹೆಜ್ಜೆ, 120 ಚಿರತೆ, 73 ಕರಡಿ, 12 ಕಾಡು ನಾಯಿ ಹಾಗೂ 8 ಇತರೆ ಪ್ರಾಣಿಗಳ ಹೆಜ್ಜೆಗಳನ್ನು ಗುರುತಿಸಿದ್ದಾರೆ. ಇದಲ್ಲದೆ ಚಿರತೆ, ಕಾಡುನಾಯಿ, ಕರಡಿ, ಕಾಡು ಹಂದಿ, ದೈತ್ಯಅಳಿಲು, ಕಾಡುಕೋಳಿ ಇನ್ನಿತರ ಪ್ರಾಣಿಗಳ ಫೋಟೊಗಳನ್ನು ಸಹ ಸೆರೆ ಹಿಡಿಸಿದ್ದಾರೆ. ಪಕ್ಷಿಗಳ ಸಮೀಕ್ಷೆಯಲ್ಲೂ ವಿದ್ಯಾರ್ಥಿಗಳು ಸಾಧನೆ ತೋರಿದ್ದಾರೆ. ಆಯಾ ಕಾಲಮಾನಕ್ಕೆ ತಕ್ಕಂತೆ ಹೊರ ರಾಜ್ಯ ಹಾಗೂ ವಿದೇಶಗಳಿಂದ ವಲಸೆ ಬರುವ ಪಕ್ಷಿಗಳ ಪ್ರಭೇದ ಗುರುತಿಸಿದ್ದು, ಒಟ್ಟಾರೆ ಸುಮಾರು 202 ಪ್ರಭೇದದ ಪಕ್ಷಿಗಳ ಪಟ್ಟಿ ತಯಾರಿಸಿದ್ದಾರೆ.

ಔಷಧಿ-ಅಪರೂಪದ ಸಸ್ಯಗಳನ್ನು ಗುರುತಿಸುವ ಕಾರ್ಯ ವಿದ್ಯಾರ್ಥಿಗಳು ಮಾಡಿದ್ದಾರೆ. ಸುಮಾರು 388 ಜಾತಿಯ ಸಸ್ಯಗಳನ್ನು ಗುರುತಿಸಿದ್ದಾರೆ. ಇದರಲ್ಲಿ 25 ಅಪಾಯದಂಚಿತ ಪ್ರಭೇದಗಳಿದ್ದರೆ, 112 ಜಾತಿಯ ಔಷಧಿ ಸಸ್ಯಗಳು ಒಳಗೊಂಡಿವೆ. “ನಮ್ಮ ಕಾಲೇಜಿನ ವಿದ್ಯಾರ್ಥಿಗಳು ವನ್ಯಜೀವಿ, ಪಕ್ಷಿಗಳು ಹಾಗೂ ಸಸ್ಯಗಳ ಗಣತಿ ಹಾಗೂ ಪತ್ತೆ ಕಾರ್ಯದಲ್ಲಿ ಅತ್ಯಂತ ಉತ್ಸುಕರಾಗಿ ಪಾಲ್ಗೊಳ್ಳುತ್ತಿದ್ದು, ವಿಶೇಷವಾಗಿ ವನ್ಯಜೀವಿಗಳ ಹೆಜ್ಜೆ ಹಾಗೂ ಹಿಕ್ಕೆಗಳನ್ನು ಗುರುತಿಸುವ ಚಾಕಚಕ್ಯತೆ ಅದೆಷ್ಟೋ ವನ್ಯಜೀವಿ-ಪರಿಸರ ತಜ್ಞರನ್ನು ಬೆರಗುಗೊಳಿಸುವಂತೆ ಮಾಡಿದೆ’ ಎಂಬುದು ಅರಣ್ಯ ಮಹಾವಿದ್ಯಾಲಯ ವನ್ಯಜೀವಿ ವಿಭಾಗದ ಮುಖ್ಯಸ್ಥ ಶ್ರೀಧರ ಭಟ್‌ ಅವರ ಅನಿಸಿಕೆ. ಸಿಂಗಳೀಕಗಳ ಮಹತ್ವದ ಮಾಹಿತಿ ದೇಶದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿ ಎಂದೇ ಪರಿಗಣಿಸಲಾದ ಸಿಂಗಳೀಕಗಳ
ಕುರಿತಾಗಿ ಅರಣ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳು ಕಾಳಿ ಅಭಯಾರಣ್ಯ ಇನ್ನಿತರ ಕಡೆ ಸಮೀಕ್ಷೆ ನಡೆಸಿ ಮಹತ್ವದ ಮಾಹಿತಿ
ಸಂಗ್ರಹಿಸಿದ್ದಾರೆ. ದೇಶದಲ್ಲಿ ಸುಮಾರು 3,000ದಷ್ಟು ಮಾತ್ರ ಸಿಂಗಳೀಕಗಳು ಇವೆ ಎನ್ನಲಾಗಿದೆ. ವಿದ್ಯಾರ್ಥಿಗಳು ಈ ಭಾಗದಲ್ಲಿ
ನಡೆಸಿದ ಸಮೀಕ್ಷೆಯಲ್ಲಿ 2006ಕ್ಕೆ ಹೋಲಿಸಿದರೆ ಸಿಂಗಳೀಕಗಳ ಸಂತತಿ ಹೆಚ್ಚಳವಾಗಿದೆ ಎಂಬ ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ.

Advertisement

ಡೀನ್‌- ಮುಖ್ಯಸ್ಥರು ಅರಣ್ಯಕ್ಕೋಗ್ತಾರೆ..
ವನ್ಯಜೀವಿ, ಪಕ್ಷಿ ಹಾಗೂ ಸಸ್ಯಗಳ ಗಣತಿ-ಪತ್ತೆ ಕಾರ್ಯಕ್ಕೆ ವಿದ್ಯಾರ್ಥಿಗಳ ಜತೆಗೆ ಕಾಲೇಜಿನ ಡೀನ್‌ ಹಾಗೂ ವನ್ಯಜೀವಿ
ವಿಭಾಗದ ಮುಖ್ಯಸ್ಥರು ಸಹ ಅರಣ್ಯಕ್ಕೆ ತೆರಳುತ್ತಾರೆ. ವಿದ್ಯಾರ್ಥಿಗಳೊಂದಿಗೆ ರಾತ್ರಿ ವೇಳೆ ಅರಣ್ಯದಲ್ಲೇ ತಂಗುತ್ತಾರೆ. ಇದು 
ವಿದ್ಯಾರ್ಥಿಗಳ ಹುಮ್ಮಸು ಹೆಚ್ಚುವಂತೆ ಮಾಡಿದೆ. ವಿದ್ಯಾರ್ಥಿಗಳೊಂದಿಗೆ ಅರಣ್ಯಕ್ಕೆ ತೆರಳಿದ್ದು, ರಾತ್ರಿ ಅಲ್ಲಿಯೇ ತಂಗಿದ್ದು
ಮರೆಯಲಾಗದ ಅನುಭವ ನೀಡಿದೆ ಎಂಬುದು ಡೀನ್‌ ಡಾ| ಎಚ್‌.ಬಸಪ್ಪ ಅವರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next