Advertisement

ಮಂಗಳೂರು-ಕಾಸರಗೋಡು : ರಾತ್ರಿ ವೇಳೆ ಬಸ್‌ ಸಂಚಾರವಿಲ್ಲದೆ ಪ್ರಯಾಣಿಕರ ಪರದಾಟ

10:32 PM Jan 26, 2021 | Team Udayavani |

ಮಹಾನಗರ: ಮಂಗ ಳೂರು- ಕಾಸರಗೋಡು ಅಂತಾರಾಜ್ಯ ಮಾರ್ಗ ದಲ್ಲಿ (ರಾ.ಹೆ. 66) ರಾತ್ರಿ 8 ಗಂಟೆ ಬಳಿಕ ಬಸ್‌ ಸಂಚಾರ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಈ ಮಾರ್ಗದಲ್ಲಿ ಕೇರಳ ಮತ್ತು ಕರ್ನಾಟಕ ಸರಕಾರಗಳ ಸಾರಿಗೆ ಸಂಸ್ಥೆಗಳ ಬಸ್‌ಗಳು ಸಂಚರಿಸುತ್ತಿದ್ದು, ಬೆಳಗ್ಗೆ 5.30ರಿಂದ ರಾತ್ರಿ 8 ಗಂಟೆಯ ವರೆಗೆ ಮಾತ್ರ ಈ ಬಸ್‌ಗಳ ಸೇವೆ ಇರುತ್ತದೆ.

ಕೇರಳದಲ್ಲಿ ಕೋವಿಡ್ ವೈರಸ್‌ ಸೋಂಕು ಇನ್ನೂ ಕಡಿಮೆಯಾಗದ ಕಾರಣ ಕತ್ತಲಾದ ಬಳಿಕ ಜನರ ಓಡಾಟವೂ ಕಡಿಮೆ ಇದೆ; ಹೀಗೆ ಪ್ರಯಾಣಿಕರ ಕೊರತೆ ಇರುದರಿಂದ ರಾತ್ರಿ ವೇಳೆ ಬಸ್‌ ಸಂಚಾರವನ್ನು ಬೇಗನೆ ಮೊಟಕುಗೊಳಿಸಲಾಗುತ್ತಿದೆ ಎನ್ನುವುದು ಕಾಸರಗೋಡಿನ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ನೀಡುವ ಕಾರಣ.

ಈ ಹಿಂದೆ ಕೋವಿಡ್ ಕಾರಣ 2020 ಮಾರ್ಚ್‌ 20ರ ಬಳಿಕ ಈ ಅಂತಾರಾಜ್ಯ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಿದ್ದ ಉಭಯ ರಾಜ್ಯಗಳ ಕೆಎಸ್‌ಆರ್‌ಟಿಸಿ ಬಸ್‌ಗಳು ಸುಮಾರು 8 ತಿಂಗಳುಗಳ ಅಂತರ (2020 ನವೆಂಬರ್‌ 16ರಿಂದ) ಓಡಾಟವನ್ನು ಪುನರಾರಂಭಗೊಳಿಸಿದ್ದವು. ಪ್ರಾರಂಭದಲ್ಲಿ ಎರಡೂ ಸಾರಿಗೆ ಸಂಸ್ಥೆಗಳ ತಲಾ 20 ಬಸ್‌ಗಳು ರಸ್ತೆಗಿಳಿದು 6- 7 ನಿಮಿಷಕ್ಕೆ ಒಂದರಂತೆ ಓಡಾಡುತ್ತಿದ್ದರೆ ಕ್ರಮೇಣ ಡಿಸೆಂಬರ್‌ 20ರ ಬಳಿಕ ಎಲ್ಲ 30 ಬಸ್‌ಗಳ ಸಂಚಾರವನ್ನು ಆರಂಭಿಸಿದ್ದು, ಪ್ರಸ್ತುತ ಈ ಹಿಂದಿನಂತೆ 3 ನಿಮಿಷಕ್ಕೊಂದು ಬಸ್‌ ಸೇವೆ ಲಭ್ಯವಿದೆ. ತೀರಾ ಇತ್ತೀಚಿನವರೆಗೆ ರಾತ್ರಿ 7.30ಕ್ಕೆ ಮಂಗಳೂರಿನಿಂದ ಕಾಸರಗೋಡಿಗೆ ಮತ್ತು ಕಾಸರಗೋಡಿನಿಂದ ಮಂಗ ಳೂರಿಗೆ ಕೊನೆಯ ಬಸ್‌ಗಳನ್ನು ಬಿಡಲಾಗುತ್ತಿತ್ತು. ಕಳೆದ ನಾಲ್ಕೈದು ದಿನಗಳಿಂದ ಕೊನೆಯ ಬಸ್‌ 8 ಗಂಟೆಗೆ ಬಿಡಲಾಗುತ್ತಿದೆ.

ಇದೀಗ ಮಂಗಳೂರಿನಲ್ಲಿ ವ್ಯಾಪಾರ, ವ್ಯವಹಾರ, ವಿವಿಧ ಸಮಾರಂಭಗಳು ಯಥಾ ಸ್ಥಿತಿಗೆ ಮರಳಿದ್ದು, ರಾತ್ರಿ 9ರಿಂದ 10 ಗಂಟೆ ತನಕವೂ ತೆರೆದಿರುತ್ತವೆ. ವಿವಿಧ ಹಾಲ್‌ಗ‌ಳಲ್ಲಿ ಮದುವೆ ಮತ್ತಿತರ ಸಮಾರಂಭಗಳು ರಾತ್ರಿ ವೇಳೆಯೂ ನಡೆಯುತ್ತಿವೆ. ಆಸ್ಪತ್ರೆಗಳಲ್ಲಿಯೂ ಸೇವೆ ಈ ಹಿಂದಿನಂತೆ ಲಭ್ಯವಿದೆ. ಹಾಗಾಗಿ ಜನರ ಓಡಾಟ ಮಂಗಳೂರು ನಗರದಲ್ಲಿ ರಾತ್ರಿ 10 ಗಂಟೆ ತನಕವೂ ಇರುತ್ತದೆ. ರಾತ್ರಿ 9ರ ತನಕ ವಿವಿಧ ಭಾಗಗಳಿಗೆ ಸಿಟಿ ಬಸ್‌ಗಳ ಸಂಚಾರವೂ ಲಭ್ಯವಿವೆ.

Advertisement

ಉದ್ಯೋಗಿಗಳಿಗೆ ಸಂಕಷ್ಟ :

ಕಾಸರಗೋಡು ಭಾಗದ ಸಾಕಷ್ಟು ಮಂದಿ ಮಂಗಳೂರಿನಲ್ಲಿ ಉದ್ಯೋಗಾ ವಕಾಶ ಕಂಡುಕೊಂಡಿದ್ದು, ರಾತ್ರಿ ವೇಳೆ ಬಸ್‌ ಪ್ರಯಾಣವನ್ನು ಆಶ್ರಯಿಸಿದ್ದಾರೆ. ವ್ಯಾಪಾರ ವಹಿವಾಟಿಗಾಗಿ ಪ್ರತಿದಿನ ಓಡಾಡುವವರಿದ್ದಾರೆ. ಮಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ಅಧಿಕ ಮಂದಿ ಕಾಸರಗೋಡು ಭಾಗದ ವಿದ್ಯಾರ್ಥಿಗಳಿದ್ದಾರೆ. ಇಲ್ಲಿನ ಆಸ್ಪತ್ರೆಗಳಿಗೆ ಬರುವ ರೋಗಿಗಳು ಮತ್ತು ಅವರ ಮನೆಯವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ರಾತ್ರಿ ವೇಳೆಯೂ ಮಂಗಳೂರಿನಿಂದ ಕಾಸರ ಗೋಡು ಭಾಗಕ್ಕೆ ಪ್ರಯಾಣಿಸುವ ಪ್ರಯಾ ಣಿಕರು ಸಾಕಷ್ಟು ಮಂದಿ ಇದ್ದಾರೆ.

ಪಂಪ್‌ವೆಲ್‌ ಜಂಕ್ಷನ್‌, ತೊಕ್ಕೊಟ್ಟು, ಕೋಟೆಕಾರ್‌, ತಲಪಾಡಿಯಲ್ಲಿ ರಸ್ತೆ ಬದಿ ನಿಂತು ಸಿಕ್ಕ ಸಿಕ್ಕ ಲಾರಿ, ಖಾಸಗಿ ವಾಹನಗಳಿಗೆ ಕೈ ತೋರಿಸಿ ನಿಲ್ಲಿಸಿ ತಮ್ಮನ್ನು ಕಾಸರಗೋಡು ಕಡೆಗೆ ಕರೆದೊಯ್ಯುವಂತೆ ವಿನಂತಿಸುವ ಸಾಕಷ್ಟು ಮಂದಿ ಪ್ರತಿ ದಿನ ಕಾಣ ಸಿಗುತ್ತಾರೆ. ಕೆಲವು ಜನರು ತಲಪಾಡಿ ತನಕ ಸಿಟಿ ಬಸ್‌ಗಳಲ್ಲಿ ತೆರಳಿ ಅಲ್ಲಿಂದ ಆಟೋ ರಿಕ್ಷಾದಲ್ಲಿ ದುಬಾರಿ ಬಾಡಿಗೆ ತೆತ್ತು ಪ್ರಯಾಣಿಸುತ್ತಾರೆ.

ಮಂಗಳೂರು- ಕಾಸರಗೋಡು ನಡುವೆ ಲೋಕಲ್‌ ರೈಲುಗಳ ಸಂಚಾರ ಇನ್ನೂ ಪುನರಾರಂಭ ಆಗಿಲ್ಲ. ರಾತ್ರಿ 8ರ ಬಳಿಕ ಬಸ್‌ಗಳೂ ಇಲ್ಲ. ಇದರಿಂದಾಗಿ ಪ್ರಯಾಣಿಕರು ಕಷ್ಟಕ್ಕೆ ಸಿಲುಕಿದ್ದಾರೆ. ರಾತ್ರಿ ವೇಳೆ ಕನಿಷ್ಠ 9 ಗಂಟೆ ತನಕವಾದರೂ ಬಸ್‌ ಸೇವೆ ಒದಗಿಸುವಂತೆ ಮಾಡ ಬೇಕೆಂಬುದು ಜನರ ಆಗ್ರಹವಾಗಿದೆ.

ಮಂಗಳೂರು- ಕಾಸರಗೋಡು ಮಧ್ಯೆ ಬಸ್‌ ಸಂಚಾರ ಸೇವೆಯನ್ನು ರಾತ್ರಿ 9 ಗಂಟೆ ವರೆಗೂ ವಿಸ್ತರಿಸುವ ಬಗ್ಗೆ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಕಾಸರಗೋಡಿನ ಅಧಿಕಾರಿಗಳ ಜತೆ ಚರ್ಚಿಸಿ ಪ್ರಯಾಣಿಕರ ಪರದಾಟಕ್ಕೆ ಆದಷ್ಟು ಶೀಘ್ರ ಪರಿಹಾರ ಕಂಡು ಕೊಳ್ಳಲು ಪ್ರಯತ್ನಿಸಲಾಗುವುದು. ಅರುಣ್‌ ಕುಮಾರ್‌,   ವಿಭಾಗ ನಿಯಂತ್ರಣ ಅಧಿಕಾರಿ, ಕೆಎಸ್‌ಆರ್‌ಟಿಸಿ, ಮಂಗಳೂರು

ಈ ಹಿಂದೆ ರಾತ್ರಿ 7.30ಕ್ಕೆ ಕೊನೆಯ ಬಸ್‌ ಇತ್ತು. ಐದು ದಿನಗಳ ಹಿಂದೆ ಅದನ್ನು 8 ಗಂಟೆ ತನಕ ವಿಸ್ತರಿಸಲಾಗಿದೆ. ಕೊರೊನಾ ಕಾರಣ ಕಾಸರಗೋಡು ಭಾಗದಲ್ಲಿ ರಾತ್ರಿ ಜನ ಸಂಚಾರ ಕಡಿಮೆ. ಈಗಿರುವ ಬಸ್‌ಗಳಿಗೆ ಮಂಗಳೂರಿನಿಂದ ತಲಪಾಡಿ, ಮಂಜೇಶ್ವರ ತನಕ ಪ್ರಯಾಣಿಕರು ಲಭ್ಯವಿದ್ದರೂ ಕಾಸರಗೋಡಿಗೆ ಪ್ರಯಾಣಿಸುವವರು ವಿರಳ. ಕ್ರಮೇಣ ಜನರ ಓಡಾಟ ಹೆಚ್ಚಳ ಆದಂತೆ ರಾತ್ರಿ ಬಸ್‌ ಸಂಚಾರವನ್ನು ಈ ಮೊದಲಿನಂತೆ ಪುನರಾರಂಭಿಸಲಾಗುವುದು.ವಿ. ಮನೋಜ್‌ ಕುಮಾರ್‌,    ಟ್ರಾಫಿಕ್‌ ಮ್ಯಾನೇಜರ್‌, ಕೆಎಸ್‌ಆರ್‌ಟಿಸಿ, ಕಾಸರಗೋಡು ಡಿಪೋ

ರಾತ್ರಿ ಬಸ್‌ ಇಲ್ಲದೆ ಬಹಳಷ್ಟು ಸಮಸ್ಯೆಯಾಗಿದೆ. ಆಸ್ಪತ್ರೆ, ಮದುವೆ ಮತ್ತಿತರ ಶುಭ ಕಾರ್ಯಗಳು, ವ್ಯಾಪಾರ ಸಂಬಂಧಿತ ಚಟುವಟಿಕೆಗೆ ತೆರಳುವವರು ಅಥವಾ ಸಂಬಂಧಿಕರ ಮನೆಗಳಿಗೆ ಹೋದವರು ಅನಿವಾರ್ಯ ಕಾರಣಗಳಿಂದ ಮಂಗಳೂರಿನಿಂದ ಹೊರಡುವಾಗ ಕೆಲವೊಮ್ಮೆ ರಾತ್ರಿಯಾಗುವುದು ಸಹಜ.ಲೀಲಾಧರ ಆಚಾರ್ಯ,ಬ್ಯಾಂಕ್‌ ಉದ್ಯೋಗಿ, ಕಾಸರಗೋಡು.

Advertisement

Udayavani is now on Telegram. Click here to join our channel and stay updated with the latest news.

Next