Advertisement
ಪ್ರಯಾಣಿಕರ ದಿನದ ಪಾಸು ಅನ್ನು ಮೊಬೈಲ್ ಮೂಲಕವೇ ಖರೀದಿಸುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗಿದೆ. ಇದರೊಂದಿಗೆ ಈ ವಿನೂತನ ವ್ಯವಸ್ಥೆ ಪರಿಚಯಿಸಿದ ದೇಶದ ಮೊದಲ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬಿಎಂಟಿಸಿ ಪಾತ್ರವಾಗಿದೆ.
Related Articles
Advertisement
ಆಧಾರ್‌ಗೆ ಜೋಡಣೆ?: ಮೂರು ತಿಂಗಳು ಪ್ರಯೋಗದ ನಂತರ ಎಲ್ಲ ಕಡೆ ಸೇವೆ ವಿಸ್ತರಿಸಲಾಗುವುದು. ಅಷ್ಟೇ ಅಲ್ಲ ಡಿಜಿಟಲ್ ಪಾಸು ಪಡೆಯುವ ಹಂತಗಳನ್ನೂ ತಗ್ಗಿಸಲಿದ್ದು, ಕೇವಲ ಮೊಬೈಲ್ ನಂಬರ್ ನಮೂದಿಸಿ ಪಾಸು ಸೃಷ್ಟಿಸುವ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಜೋಡಣೆ ಮಾಡಿದ ಮಾಹಿತಿ ನೀಡುವಂತೆ “ಭಾರತೀಯ ವಿಶೇಷ ಗುರುತಿನ ಸಂಖ್ಯೆ ಪ್ರಾಧಿಕಾರ’ಕ್ಕೆ ಮನವಿ ಮಾಡಲು ಚಿಂತನೆ ನಡೆದಿದೆ. ಈ ಹೊಸ ವ್ಯವಸ್ಥೆಯಿಂದ ಪ್ರಯಾಣಿಕರು ತಂತ್ರಜ್ಞಾನಕ್ಕೆ ತೆರೆದುಕೊಂಡಂತಾಗುತ್ತದೆ. ಚಿಲ್ಲರೆ ಸಮಸ್ಯೆ ಮತ್ತು ಹಣದ ನಿರ್ವಹಣೆ ಸಮಸ್ಯೆ ಇರುವುದಿಲ್ಲ. ಪಾರದರ್ಶಕತೆ ಜತೆಗೆ ಇದೊಂದು ಪರಿಸರ ಸ್ನೇಹಿ ವ್ಯವಸ್ಥೆಯೂ ಹೌದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ನಮ್ಮ ಪಾಸಿಗೆ 10 ರೂ. ಕ್ಯಾಶ್‌ಬ್ಯಾಕ್!: ಪ್ರಾಯೋಗಿಕವಾಗಿ ಪರಿಚಯಿಸಲಾಗಿರುವ ಈ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ಸಲುವಾಗಿ “ನಮ್ಮ ಪಾಸು’ ಪಡೆದ ಪ್ರಯಾಣಿಕರ ಖಾತೆಗೆ 10 ರೂ. ಜಮೆ ಆಗಲಿದೆ. ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದವರು ಐಐಎಂಬಿ ಮಾರ್ಗದರ್ಶನದಲ್ಲಿ ನಡೆಯುತ್ತಿರುವ Series-5 Labs ಸ್ಟಾರ್ಟ್‌ಅಪ್ ಕಂಪೆನಿ. ಇವರೊಂದಿಗೆ “ಫೋನ್ ಪೇ’ ಕಂಪೆನಿಯು ಒಡಂಬಡಿಕೆ ಮಾಡಿಕೊಂಡಿದ್ದು, ಪರೀಕ್ಷಾರ್ಥ ಅವಧಿ ಮುಗಿಯುವವರೆಗೂ ಪ್ರತಿ ಡಿಜಿಟಲ್ ಪಾಸಿಗೆ 10 ರೂ. ಕ್ಯಾಶ್‌ಬ್ಯಾಕ್ ನೀಡಲು ಮುಂದೆಬಂದಿದೆ.
ಪಾಸ್ ಪಡೆಯಲು ಹೀಗೆ ಮಾಡಿ: ಪ್ರಯಾಣಿಕರು https://nammapass.series-5.com ಮೇಲೆ ಕ್ಲಿಕ್ ಮಾಡಬೇಕು. ತಕ್ಷಣ “ನಮ್ಮ ಪಾಸ್’ ಪುಟ ತೆರೆಯುತ್ತದೆ. ಅಲ್ಲಿ ಹೆಸರು ಮತ್ತು ಮೊಬೈಲ್ ಸಂಖ್ಯೆ ಟೈಪ್ ಮಾಡಬೇಕು. ನಂತರ ಮತದಾರರ ಗುರುತಿನಚೀಟಿ ಸಂಖ್ಯೆ, ಪಾನ್ ಸಂಖ್ಯೆ, ಆಧಾರ್ ಸಂಖ್ಯೆ ಅಥವಾ ಚಾಲನಾ ಪರವಾನಗಿ ಸಂಖ್ಯೆ ಇವುಗಳಲ್ಲಿ ಯಾವುದಾದರೂ ಒಂದನ್ನು ಕ್ಲಿಕ್ ಮಾಡಿ, ಆ ಗುರುತಿನ ಸಂಖ್ಯೆಯನ್ನು ನಮೂದಿಸಬೇಕು. ಆಮೇಲೆ ಕೆಳಗಿರುವ “ಪೇ ನೌ’ ಮೇಲೆ ಕ್ಲಿಕ್ ಮಾಡಿ, ಹಣ ಪಾವತಿಸಿದರೆ ಪಾಸು ಲಭ್ಯ.
ನಿತ್ಯ 25 ಮರಗಳ ರಕ್ಷಣೆ!: ಬಿಎಂಟಿಸಿ ಸಂಪೂರ್ಣ ಕಾಗದರಹಿತ ಟಿಕೆಟ್ ವ್ಯವಸ್ಥೆಗೆ ತೆರೆದುಕೊಂಡರೆ, ನಿತ್ಯ 25 ಮರಗಳನ್ನು ರಕ್ಷಿಸಬಹುದು! ಹೌದು, ಪ್ರತಿ ದಿನ ಬಿಎಂಟಿಸಿಯಲ್ಲಿ 4.50 ದಶಲಕ್ಷ ಟಿಕೆಟ್‌ಗಳು ಮತ್ತು ಪಾಸುಗಳು ಮಾರಾಟ ಆಗುತ್ತವೆ. ಇದರಿಂದ “ಎ4′ ಗಾತ್ರದ 2,59,740 ಪೇಪರ್‌ಗಳು ಬೇಕಾಗುತ್ತದೆ. 10 ಸಾವಿರ ಎ4 ಗಾತ್ರದ ಪೇಪರ್‌ಗಳು ಒಂದು ಮರಕ್ಕೆ ಸಮ. ಅಂದರೆ, ನಿತ್ಯ 25 ಮರಗಳನ್ನು ಕಾಗದದ ಟಿಕೆಟ್‌ಗಳಿಗಾಗಿ ಕಡಿಯುವುದನ್ನು ತಪ್ಪಿಸಬಹುದು ಎಂದು ಅಂದಾಜಿಸಲಾಗಿದೆ.
ಕಾಡುಗೋಡಿ ಮಾರ್ಗದಲ್ಲೇ ಯಾಕೆ?: ಮಾರ್ಗ ಸಂಖ್ಯೆ 335ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಐಟಿ ಉದ್ಯೋಗಿಗಳು ಸಂಚರಿಸುತ್ತಾರೆ. ಹಾಗಾಗಿ, ಆ ಮಾರ್ಗದಲ್ಲಿ ಡಿಜಿಟಲ್ ಮಾದರಿಯ ದಿನದ ಪಾಸು ಪರಿಚಯಿಸಲಾಗಿದೆ. ಇದರ ಜತೆ ಕಾಗದದ ಪಾಸುಗಳೂ ಪರ್ಯಾಯವಾಗಿ ಲಭ್ಯ ಇರುತ್ತವೆ. ಅಂದಹಾಗೆ, ನಿತ್ಯ ಬಿಎಂಟಿಸಿ ವ್ಯಾಪ್ತಿಯಲ್ಲಿ ದಿನದ ಪಾಸುಗಳಿಂದ ಅಂದಾಜು 90 ಲಕ್ಷ ರೂ. ಆದಾಯ ಸಂಗ್ರಹ ಆಗುತ್ತಿದೆ.
* ವಿಜಯಕುಮಾರ್ ಚಂದರಗಿ