Advertisement

ರಾಜ್ಯದ ಪಶು ಸಂಜೀವಿನಿ ದೇಶಾದ್ಯಂತ ವಿಸ್ತರಣೆ

03:16 PM Oct 09, 2021 | Team Udayavani |

ಬೀದರ: ರೈತರ ಮನೆ ಬಾಗಿಲಿಗೆ ಪಶು ವೈದ್ಯಕೀಯ ಸೇವೆ ಕಲ್ಪಿಸಿ, ಮೂಕರೋದನೆ ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ “ಪಶು ಸಂಜೀವಿನಿ’ ಕಾರ್ಯಕ್ರಮ ಈಗ ದೇಶಾದ್ಯಂತ ವಿಸ್ತರಣೆ ಆಗಲಿದೆ. ಕರ್ನಾಟಕ ಸೇರಿ ದೇಶದ 14 ರಾಜ್ಯಗಳಲ್ಲಿ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಅದರಂತೆ ಕರ್ನಾಟಕದ ಪ್ರತಿ ತಾಲೂಕಿಗೆ ಒಂದರಂತೆ 275 ಸಂಚಾರಿ ಚಿಕಿತ್ಸಾ ವಾಹನಗಳನ್ನು ಮಂಜೂರು ಮಾಡಿದೆ.

Advertisement

ಪಶು ಸಂಜೀವಿನಿ ಯೋಜನೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಈ ಕನಸಿನ ಯೋಜನೆ. ರೋಗಗ್ರಸ್ತ ಜಾನುವಾರುಗಳಿಗೆ ದೂರದ ಪಶು ಆಸ್ಪತ್ರೆಗಳಿಗೆ ಸಾಗಿಸಲು ರೈತರಿಗೆ ಆಗುತ್ತಿದ್ದ ಅನಾನುಕೂಲದ ಜತೆಗೆ ಆರ್ಥಿಕ ಹೊರೆ ತಪ್ಪಿಸಿ, ಆ ಮೂಲಕ ತುರ್ತು ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಜಾರಿಗೊಳಿಸಿದ್ದ ಪಶು ಶಸ್ತ್ರಚಿಕಿತ್ಸಾ ವಾಹನ (ಆಂಬ್ಯುಲೆನ್ಸ್‌) ಪಶು ಪಾಲಕರಿಗೆ “ಸಂಜೀವಿನಿ’ಯಾಗಿ ಪರಿಣಮಿಸಿದೆ. ಬಿಎಸ್‌ ವೈ ಸರ್ಕಾರದ ಅವಧಿಯಲ್ಲಿ ಸದ್ಯ ಇಲ್ಲಿನ 15 ಜಿಲ್ಲೆಗಳಲ್ಲಿ ತಲಾ ಒಂದರಂತೆ ಪಶು ಆಂಬ್ಯುಲೆನ್ಸ್‌ ಸೇವೆ ಜಾರಿಗೊಳಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಎಲ್ಲೆಲ್ಲಿ ಜಾರಿ?

ರಾಜ್ಯದಲ್ಲಿ ರೈತಪರ ಯೋಜನೆ ಜಾರಿ ಬಗ್ಗೆ ಸಚಿವ ಚವ್ಹಾಣ ಈ ಹಿಂದಿನ ಕೇಂದ್ರ ಪಶು ಸಂಗೋಪನಾ ಸಚಿವ ಗಿರಿರಾಜ್‌ ಸಿಂಗ್‌ ಅವರೊಂದಿಗೆ ಚರ್ಚಿಸಿದ್ದರಲ್ಲದೇ ದೇಶಾದ್ಯಂತ ವಿಸ್ತರಿಸುವ ಕುರಿತಂತೆ ಗಮನ ಸೆಳೆದಿದ್ದರು. ಈಗ ನೂತನ ಕೇಂದ್ರ ಸಚಿವ ಪುರುಷೋತ್ತಮ ರೂಪಾಲಾ ಕರುನಾಡಿನ ಕಾರ್ಯಕ್ರಮದ ಪರಿಕಲ್ಪನೆ ರಾಷ್ಟ್ರೀಯ ರೋಗ ನಿಯಂತ್ರಣ ಯೋಜನೆಯಡಿ ರಾಷ್ಟ್ರದ ಆಂಧ್ರಪ್ರದೇಶ, ಬಿಹಾರ, ಚತ್ತೀಸಗಢ, ಜಾರ್ಖಂಡ್‌, ಕರ್ನಾಟಕ, ಕೇರಳ, ಲಡಾಖ್‌, ಲಕ್ಷದೀಪ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್‌, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಜಾರಿಗೊಳಿಸಲು ಮುಂದಾಗಿದ್ದಾರೆ.

ಅದರಂತೆ ಕೇಂದ್ರ ಪಶು ಸಂಗೋಪನಾ ಇಲಾಖೆ ಈಗ 14 ರಾಜ್ಯಗಳಲ್ಲಿನ ಪ್ರತಿ ತಾಲೂಕಿಗೆ ಒಂದರಂತೆ ಸುಸಜ್ಜಿತ ಸಂಚಾರಿ ಆಂಬ್ಯುಲೆನ್ಸ್‌ ಒದಗಿಸಲಿದೆ. ಈ ಪೈಕಿ ರಾಜ್ಯಕ್ಕೆ 275 ಸಂಚಾರಿ ವಾಹನ ಮಂಜೂರು ಮಾಡಿ 44 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಇಲಾಖೆ ಅಧಿಧೀನ ಕಾರ್ಯದರ್ಶಿ ಎಂ.ಕೆ. ದಿವಾಕರ್‌ ಆದೇಶ ಹೊರಡಿಸಿದ್ದಾರೆ. ಒಂದು ಪಶು ಆಂಬ್ಯುಲೆನ್ಸ್‌ಗೆ 16 ಲಕ್ಷ ರೂ. ವೆಚ್ಚವಾಗಲಿದೆ.

Advertisement

ಪಶು ಆಂಬ್ಯುಲೆನ್ಸ್‌ ವಿಶೇಷತೆ ಏನು?

ಸುಸಜ್ಜಿತ ಸಂಚಾರಿ ಚಿಕಿತ್ಸಾ ವಾಹನದಲ್ಲಿ (ಆಂಬ್ಯುಲೆನ್ಸ್‌) ಆಧುನಿಕ ಪಶು ವೈದ್ಯಕೀಯ ಸೇವೆಗಳಾದ ಶಸ್ತ್ರಚಿಕಿತ್ಸಾ ಘಟಕ, ಪ್ರಯೋಗಶಾಲೆ, ಸ್ಕ್ಯಾನಿಂಗ್‌ ಉಪಕರಣ ಅಳವಡಿಸಲಾಗಿದೆ. ಪ್ರಸೂತಿ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳ ಕಿಟ್‌, ಮರಣೋತ್ತರ ಪರೀಕ್ಷೆ ಉಪಕರಣಗಳ ಕಿಟ್‌, ವಾಶ್‌ ಬೇಸಿನ್‌, ಆಮ್ಲಜನಕ ಸಪೋರ್ಟ್‌ ಸಿಸ್ಟಂ ಒಳಗೊಂಡಿದ್ದು, ಪ್ರತಿ ಪಾಲಿಕ್ಲಿನಿಕ್‌ನ ಒಬ್ಬರು ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಸಹಾಯಕರನ್ನು ನೇಮಕ ಮಾಡಲಾಗಿದೆ. ಪಶು ಪಾಲಕರು ಸಹಾಯವಾಣಿ ಸಂಖ್ಯೆ 1962ಕ್ಕೆ ಕರೆ ಮಾಡಿದರೆ ರೋಗಗ್ರಸ್ತ ಜಾನುವಾರು ಇರುವ ಸ್ಥಳಕ್ಕೆ ವಾಹನ ತೆರಳಿ ವೈದ್ಯಕೀಯ ಸೇವೆ ನೀಡಲಾಗುತ್ತದೆ.

ವಿಷಪ್ರಾಶನ, ಪ್ರಸವಕ್ಕೆ ಸಂಬಂಧಿಸಿದ ತೊಂದರೆಗಳು, ಹೊಟ್ಟೆಯುಬ್ಬರ, ಉಸಿರುಗಟ್ಟುವುದು, ಅಪಘಾತ, ಮೂಳೆಮುರಿತ ಸೇರಿದಂತೆ ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೆ ಜಾನುವಾರುಗಳನ್ನು ವಾಹನದಲ್ಲಿ ಹಾಕಿಕೊಂಡು ಹೋಗಿ ಚಿಕಿತ್ಸೆ ಪಡೆಯುವ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ. ಈ ಮೂಲಕ ಜಾನುವಾರುಗಳ ಪ್ರಾಣ ಹಾನಿ ಆಗುವುದನ್ನು ತಡೆಗಟ್ಟಿ ರೈತರಿಗೆ ಎದುರಾಗುವ ಆರ್ಥಿಕ ಸಂಕಷ್ಟ ತಪ್ಪಿಸಲು ಅನುಕೂಲ ಆಗುತ್ತಿದೆ.

ಪಶು ವೈದ್ಯಕೀಯ ಸೇವೆ ರೈತರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ರಾಜ್ಯದಲ್ಲಿ “ಪಶು ಸಂಜೀವಿನಿ’ ಯೋಜನೆ ಜಾರಿಗೊಳಿಸಲಾಗಿತ್ತು. ಈಗ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ದೇಶದ 14 ರಾಜ್ಯಗಳಲ್ಲಿ ವಿಸ್ತರಿಸಿರುವುದು ಹೆಮ್ಮೆಯ ವಿಷಯ. ರಾಷ್ಟ್ರೀಯ ರೋಗ ನಿಯಂತ್ರಣ ಯೋಜನೆಯಡಿ ಕರ್ನಾಟಕಕ್ಕೂ ಒಂದರಂತೆ 275 ಸಂಚಾರಿ ವಾಹನ ಮಂಜೂರು ಮಾಡಿ 44 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.

ಪ್ರಭು ಚವ್ಹಾಣ, ಸಚಿವ

ಶಶಿಕಾಂತ ಬಂಬುಳಗ

 

 

Advertisement

Udayavani is now on Telegram. Click here to join our channel and stay updated with the latest news.

Next